ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಕ್ಕಳಲ್ಲಿ ವಿಶಾಲ ಮನೋಭಾವ ಬೆಳೆಸಿ

ಶ್ರೀಗಂಧ ಇಂಟರ್ ನ್ಯಾಷನಲ್ ಶಾಲೆಯಲ್ಲಿ ವಾರ್ಷಿಕೋತ್ಸವ
Last Updated 15 ಫೆಬ್ರುವರಿ 2020, 14:14 IST
ಅಕ್ಷರ ಗಾತ್ರ

ವಿಜಯಪುರ: ಮಕ್ಕಳು ವಿಶಾಲ ಮನೋಭಾವನೆಯಲ್ಲಿ ಬೆಳೆಯಬೇಕು. ಅವರು ನಾಲ್ಕು ಗೋಡೆಗಳಿಂದ ಹೊರಗೆ ಬೆಳೆದಾಗಲೇ ಅವರ ಬುದ್ಧಿ ವಿಕಾಸಗೊಳ್ಳುತ್ತದೆ ಎಂದು ರಕ್ಷಣಾ ಇಲಾಖೆಯ ಕರ್ನಾಟಕದ ಮುಖ್ಯ ಕಮಾಂಡಿಂಗ್ ಡೆಪ್ಯೂಟಿ ಇನ್‌ಸ್ಪೆಕ್ಟರ್‌ ಜನರಲ್‌ ಡಾ.ಪಿ.ಆರ್.ಎಸ್.ಚೇತನ್ ಹೇಳಿದರು.

ಇಲ್ಲಿನ ಶ್ರೀಗಂಧ ಇಂಟರ್ ನ್ಯಾಷನಲ್ ಶಾಲೆಯಲ್ಲಿ ವಾರ್ಷಿಕೋತ್ಸವ ಕಾರ್ಯಕ್ರಮ ಉದ್ಘಾಟನೆ ಮಾಡಿ ಅವರು ಮಾತನಾಡಿದರು.

ಮಕ್ಕಳು ಬಡತನದ ಹಿನ್ನೆಲೆಯಲ್ಲಿ ಹುಟ್ಟುವುದು ತಪ್ಪಲ್ಲ. ಬಡತನದಲ್ಲೇ ಉಳಿಯುವುದು ತಪ್ಪು. ಮಕ್ಕಳನ್ನು ಡಾಕ್ಟರ್, ಎಂಜಿನಿಯರ್‌ಗಳನ್ನಾಗಿ ಮಾಡುವುದಕ್ಕಿಂತ ಯೋಧರನ್ನಾಗಿ ಮಾಡಿದರೆ ಮಕ್ಕಳಲ್ಲಿ ದೇಶ ಪ್ರೇಮದ ಜೊತೆಗೆ ಮುಂದಿನ ಭವಿಷ್ಯದಲ್ಲಿ ಉತ್ತಮ ಬೆಳವಣಿಗೆಗೆ ಸಹಕಾರಿಯಾಗಲಿದೆ ಎಂದು ತಿಳಿಸಿದರು.

ಸ್ವಾಮಿ ವಿವೇಕಾನಂದರು ಮಕ್ಕಳಿಗೆ ಮಾದರಿಯಾಗಲಿ, ಮಕ್ಕಳ ಜೀವನದಲ್ಲಿ ಅಂಕಗಳು ಮಾನದಂಡವಾಗುವುದಿಲ್ಲ. ಒತ್ತಡದಲ್ಲಿ ಕಲಿಯುವುದಕ್ಕಿಂತ ಸೋಲಿನಿಂದ ಪಾಠ ಕಲಿತಾಗ ಅವರು ಭವಿಷ್ಯ ರೂಪಿಸಿಕೊಳ್ಳುವಂತಹ ಶಿಲ್ಪಿಗಳಾಗುತ್ತಾರೆ. ಶಿಕ್ಷಕರೂ ಪ್ರಾಮಾಣಿಕವಾಗಿ ಕಾರ್ಯನಿರ್ವಹಿಸಬೇಕು ಎಂದರು.

ಕರ್ನಾಟಕ ಎಸ್‌ಎಸ್‌ಎಲ್‌ಸಿ ಪರೀಕ್ಷಾ ಬೋರ್ಡ್‌ನ ಸದಸ್ಯ ಡಾ.ಎನ್.ಸತ್ಯಪ್ರಕಾಶ್ ಮಾತನಾಡಿ, ‘ಶಿಕ್ಷಣ ನಿಮ್ಮ ಜೀವನಕ್ಕೆ ದಾರಿಯಾಗುತ್ತದೆ. ಮಕ್ಕಳ ಜೀವನದಲ್ಲಿ ಪ್ರೌಢಶಿಕ್ಷಣದ ಮೂರು ವರ್ಷಗಳ ಕಾಲ ಮಕ್ಕಳಿಗೆ ಬೇಕಾಗಿರುವ ಉತ್ತಮ ಸಂಸ್ಕಾರ, ವಿದ್ಯೆ, ಶಿಸ್ತು ಎಲ್ಲವನ್ನೂ ಕೊಟ್ಟರೆ, ಮುಂದಿನ ಭವಿಷ್ಯವನ್ನು ಅವರು ರೂಪಿಸಿಕೊಳ್ಳುತ್ತಾರೆ’ ಎಂದರು.

ಶಾಲೆಯ ಅಧ್ಯಕ್ಷ ರಘುರಾಮನ್ ಮಾತನಾಡಿ, ದೇಶದ ಮಕ್ಕಳ ಭವಿಷ್ಯ ಶಿಕ್ಷಕರ ಕೈಯಲ್ಲಿದೆ. ಅವರ ಭವಿಷ್ಯ ರೂಪಿಸುವ ಜವಾಬ್ದಾರಿ ಶಿಕ್ಷಕರದು. ಶಿಕ್ಷಕ ವೃತ್ತಿ ಶ್ರೇಷ್ಠವಾಗಿದ್ದು, ಶಾಲೆಯ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡಿದರೆ, ಅವರು ಉನ್ನತ ಮಟ್ಟಕ್ಕೆ ಬೆಳೆಯಲು ಸಹಕಾರಿಯಾಗುತ್ತದೆ ಎಂದರು.

ಮಕ್ಕಳಲ್ಲಿ ಅನೇಕ ಪ್ರತಿಭೆಗಳು ಅಡಕವಾಗಿರುತ್ತವೆ. ಅವನ್ನು ಗುರುತಿಸಿ ಅವರಿಗೆ ಪೂರಕವಾದ ಪ್ರೋತ್ಸಾಹ, ಆತ್ಮಸ್ಥೈರ್ಯ ತುಂಬುವ ಕಾಯಕದಲ್ಲಿ ಶಿಕ್ಷಕರು ತೊಡಗಿಸಿಕೊಳ್ಳಬೇಕು. ಪ್ರತಿಯೊಬ್ಬರು ಉತ್ತಮ ಶಿಕ್ಷಕರಾಗಲು ಶ್ರಮಿಸಬೇಕು. ಆ ಮೂಲಕ ವಿದ್ಯಾರ್ಥಿಗಳ ಭವಿಷ್ಯ ಉಜ್ವಲಕ್ಕೆ ಕೊಡುಗೆಯನ್ನು ನೀಡಬೇಕು. ದೇಶದ ಭವಿಷ್ಯ ನಿರ್ಮಾಣ ಶಿಕ್ಷಕರ ಕೈಯಲ್ಲಿದೆ ಎಂದರು.

ಶಿಕ್ಷಕರು ಕ್ರಿಯಾಶೀಲರಾಗಿ ದುಡಿದಾಗ ಮಾತ್ರ ಸಮಾಜ ಪರಿವರ್ತನೆಯಾಗಲು ಸಾಧ್ಯವಾಗುತ್ತದೆ ಎಂದರು. ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ವಿಜೇತರಾಗಿದ್ದ ಮಕ್ಕಳಿಗೆ ಬಹುಮಾನಗಳು ವಿತರಣೆ ಮಾಡಿದರು. ಸದಾನಂದ, ಸ್ವರ್ಣಲೇಖ, ವಿಮಲ, ಬಸವರಾಜ್, ದತ್ತಾತ್ರೇಯ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT