ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿದ್ಯಾರ್ಥಿ ಜೀವನದಲ್ಲಿ ಸಮಯ ಅಮೂಲ್ಯ: ಶಾಸಕ ಶರತ್ ಬಚ್ಚೇಗೌಡ

ಸೂಲಿಬೆಲೆ ಸರ್ಕಾರಿ ಸ್ವತಂತ್ರ ಪದವಿ ಪೂರ್ವ ಕಾಲೇಜಿನ ವಾರ್ಷಿಕೋತ್ಸವ
Last Updated 29 ಜನವರಿ 2020, 12:54 IST
ಅಕ್ಷರ ಗಾತ್ರ

ಸೂಲಿಬೆಲೆ: ವಿದ್ಯಾರ್ಥಿ ಜೀವನದಲ್ಲಿ ಸಮಯ ತುಂಬಾ ಅಮೂಲ್ಯವಾದುದು. ಅದನ್ನು ವ್ಯರ್ಥ ಮಾಡದೆ ಶೈಕ್ಷಣಿಕ ಗುರಿಯನ್ನು ಯಶಸ್ವಿಯಾಗಿ ತಲುಪಿ ಜೀವನ ರೂಪಿಸಿಕೊಳ್ಳಬೇಕು ಎಂದು ಶಾಸಕ ಶರತ್ ಬಚ್ಚೇಗೌಡ ಹೇಳಿದರು.

ಸೂಲಿಬೆಲೆ ಸರ್ಕಾರಿ ಸ್ವತಂತ್ರ ಪದವಿ ಪೂರ್ವ ಕಾಲೇಜಿನ ಆವರಣದಲ್ಲಿ ಮಂಗಳವಾರ ನಡೆದ ಕಾಲೇಜು ವಾರ್ಷಿಕೋತ್ಸವ ಸಮಾರಂಭ ಉದ್ಘಾಟಿಸಿ ಮಾತನಾಡಿದರು.

ಎರಡು ವರ್ಷಗಳ ಪಿಯುಸಿ ಅವಧಿ ವಿದ್ಯಾರ್ಥಿಗಳ ಜೀವನದಲ್ಲಿ ತುಂಬಾ ಮಹತ್ವವಾದ ಕಾಲಘಟ್ಟವಾಗಿದೆ. ಅದನ್ನು ವ್ಯರ್ಥ ಮಾಡದೇ ಬಳಸಿಕೊಳ್ಳಬೇಕು. ಹಣ ಕೊಟ್ಟರೇ ಏನು ಬೇಕಾದರೂ ಖರೀದಿಸಬಹುದು ಆದರೆ ಕಳೆದುಹೋದ ಸಮಯವನ್ನು ಖರೀದಿಸಲು ಸಾಧ್ಯವಿಲ್ಲ ಎಂದು ತಿಳಿಸಿದರು.

ಖಾಸಗಿ ಕಾಲೇಜುಗಳಿಗಿಂತ ಸರ್ಕಾರಿ ಕಾಲೇಜುಗಳು ಗುಣಮಟ್ಟದ ಕಲಿಕೆಯಲ್ಲಿ ಮುಂದಿರಬೇಕು. ಪ್ರತಿಯೊಬ್ಬ ವಿದ್ಯಾರ್ಥಿಯಲ್ಲೂ ತನ್ನದೇ ಆದ ಪ್ರತಿಭೆ ಅಡಗಿರುತ್ತದೆ. ಅದನ್ನು ವೇದಿಕೆಗಳ ಮೂಲಕ ಅನಾವರಣಗೊಳಿಸಬೇಕು. ಪಠ್ಯದ ಜತೆಯಲ್ಲಿ ಪಠ್ಯೇತರ ಚಟುವಟಿಕೆಗಳಿಗೂ ಸಮಾನವಾದ ಆದ್ಯತೆ ನೀಡಬೇಕು ಎಂದರು.

ನೀರಿನ ವ್ಯವಸ್ಥೆಗಾಗಿ ಬೋರ್‌ವೆಲ್ ಗೆ ಮೋಟರ್ ಪಂಪ್ ಅಳವಡಿಸಸುವುದು, ಶುದ್ಧ ಕುಡಿಯುವ ನೀರಿನ ಘಟಕ, ಕಂಪ್ಯೂಟರ್ ಲ್ಯಾಬ್, ಗ್ರಂಥಾಲಯ, ಶೌಚಾಲಯದ ಸಮಸ್ಯೆ ಸೇರಿದಂತೆ ಕಾಲೇಜಿನ ಮೂಲಭೂತ ಸಮಸ್ಯೆಗಳನ್ನು ಶೀಘ್ರವಾಗಿ ಪರಿಹರಿಸಿಕೊಡಲಾಗುವುದು ಎಂದು ಆಶ್ವಾಸನೆ ನೀಡಿದರು. ಹೆಸರುಘಟ್ಟ ಕಾಲೇಜಿನ ಪ್ರಾಚಾರ್ಯ ವೇಣುಗೋಪಾಲ್ ಮಾತನಾಡಿದರು.

ಕಳೆದ ಸಾಲಿನಲ್ಲಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಣೆ ಮಾಡಲಾಯಿತು. ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.

ಸ್ವಾತಂತ್ರ್ಯ ಹೋರಾಟಗಾರ, ಶತಾಯುಷಿ ಸೂ.ರಂ.ರಾಮಯ್ಯ, ಸಹಕಾರ ಸಂಘದ ಅಧ್ಯಕ್ಷ ಬಿ.ವಿ.ಸತೀಶಗೌಡ, ಗ್ರಾಮ ಪಂಚಾಯಿತಿ ಅಧ್ಯಕ್ಷ ಮರವೆ ಕೃಷ್ಣಪ್ಪ, ಪದವಿ ಕಾಲೇಜು ಪ್ರಾಂಶುಪಾಲ ಪ್ರೊ.ನಾರಾಯಣಸ್ವಾಮಿ, ದಿಶಾ ಕಂಪನಿಯ ಸಂಚಾಲಕ ಮಂಜುನಾಥ್, ಉಪನ್ಯಾಸಕ ರೇವಣ್ಣಸಿದ್ದಪ್ಪ ಹಾಗೂ ವಿದ್ಯಾರ್ಥಿಗಳು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT