ಶುಕ್ರವಾರ, ಸೆಪ್ಟೆಂಬರ್ 20, 2019
21 °C
ಶಾಲಾ ರೂಪಾಂತರ ಕಾರ್ಯಕ್ರಮ ಉದ್ಘಾಟನೆ

ಸರ್ಕಾರಿ ಶಾಲೆ; ತಾತ್ಸಾರ ಬೇಡ

Published:
Updated:
Prajavani

ಆನೇಕಲ್: ಸರ್ಕಾರಿ ಶಾಲೆಗಳ ಬಗೆಗಿನ ತಾತ್ಸಾರ ಮನೋಭಾವನೆಯನ್ನು ಬಿಟ್ಟು ಶಾಲೆಗಳ ಬಗ್ಗೆ ಪ್ರತಿಯೊಬ್ಬರೂ ಪ್ರೀತಿ ತೋರಿದರೆ ಅವು ಎಲ್ಲರೊಂದಿಗೆ ಸ್ಪರ್ಧಿಸುವ ಸಾಮರ್ಥ್ಯ ಹೊಂದಿವೆ ಎಂದು ಪೊಲೀಸ್‌ ಸರ್ಕಲ್‌ ಇನ್‌ಸ್ಪೆಕ್ಟರ್ ಎಲ್‌.ವೈ.ರಾಜೇಶ್ ಹೇಳಿದರು.

ತಾಲ್ಲೂಕಿನ ದೊಮ್ಮಸಂದ್ರ ಜನತಾ ಕಾಲೊನಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಅಮೆರಿಕನ್‌ ಇಂಡಿಯಾ ಪ್ರತಿಷ್ಠಾನ ಮತ್ತು ಎಕ್ಸ್‌ಟ್ರೀಮ್‌ ನೆಟ್‌ವರ್ಕ್ ಸಹಯೋಗದಲ್ಲಿ ಆಯೋಜಿಸಿದ್ದ ಶಾಲಾ ರೂಪಾಂತರ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

‘ಸರ್ಕಾರಿ ಶಾಲೆಗಳಲ್ಲಿ ತರಬೇತಿ ಪಡೆದ ಶಿಕ್ಷಕರಿದ್ದಾರೆ. ವಿದ್ಯಾರ್ಥಿಗಳು ಚುರುಕಾಗಿದ್ದಾರೆ. ಶಾಲೆಗಳಿಗೆ ಮೂಲಸೌಲಭ್ಯಗಳನ್ನು ಕಲ್ಪಿಸಿದರೆ ಇಲ್ಲಿ ಗುಣಮಟ್ಟದ ಶಿಕ್ಷಣ ದೊರೆಯಲು ಸಾಧ್ಯವಾಗುತ್ತದೆ. ಪೋಷಕರು ಆಂಗ್ಲ ಮಾಧ್ಯಮ ವ್ಯಾಮೋಹ ಬಿಡಬೇಕು. ಪ್ರಾಥಮಿಕ ಹಂತದಲ್ಲಿ ಕನ್ನಡ ಭಾಷೆಯಲ್ಲಿ ಶಿಕ್ಷಣ ಪಡೆದ ಸಹಸ್ರಾರು ಮಂದಿ ಉನ್ನತ ಸಾಧನೆ ಮಾಡಿದ್ದಾರೆ. ಹಾಗಾಗಿ ಸರ್ಕಾರಿ ಶಾಲೆಗಳ ಬಲವರ್ಧನೆಗೆ ಎಲ್ಲರೂ ಕೈ ಜೋಡಿಸಬೇಕಾಗಿದೆ. ಈ ನಿಟ್ಟಿನಲ್ಲಿ ಅಮೆರಿಕನ್‌ ಇಂಡಿಯಾ ಪ್ರತಿಷ್ಠಾನ ಹಾಗೂ ಎಕ್ಸ್‌ಟ್ರೀಮ್‌ ನೆಟ್‌ವರ್ಕ್ ಸಂಸ್ಥೆಗಳು ಸರ್ಕಾರಿ ಶಾಲೆಗೆ ಎಲ್ಲಾ ಸೌಲಭ್ಯಗಳನ್ನು ಕಲ್ಪಿಸಿಕೊಟ್ಟಿರುವುದು ಮಾದರಿಯಾಗಿದೆ. ಶಾಲೆಗಳ ಬೋಧನೆಯ ಡಿಜಿಟಲೀಕರಣಕ್ಕೆ ಕೊಡುಗೆ ನೀಡಿದೆ. ವಿದ್ಯಾರ್ಥಿಗಳ ಜ್ಞಾನಾರ್ಜನೆಗೆ ತಂತ್ರಜ್ಞಾನದ ನೆರವು ನೀಡಲಾಗಿರುವುದರಿಂದ ವಿದ್ಯಾರ್ಥಿಗಳ ಕಲಿಕೆಯ ಮಟ್ಟ ವಿಸ್ತಾರವಾಗುತ್ತದೆ’ ಎಂದರು.

ಎಕ್ಸ್‌ಟ್ರೀಮ್‌ ನೆಟ್‌ವರ್ಕ್‌ ನಿರ್ದೇಶಕ ಮುರಳಿ ಮಾತನಾಡಿ, ‘ಹಿಂದಿನ ಕಾಲದಲ್ಲಿ ಶಾಲೆಗಳಲ್ಲಿ ಸೌಲಭ್ಯಗಳಿರಲಿಲ್ಲ. ಸೋರುವ ಕೊಠಡಿಗಳಲ್ಲಿ ಪಾಠ ಕೇಳುವ ಪರಿಸ್ಥಿತಿಯಿತ್ತು. ಈಗ ಸರ್ಕಾರಿ ಶಾಲೆಗಳು ಸುಧಾರಣೆಯಾಗಿವೆ. ಎಲ್ಲಾ ಸೌಲಭ್ಯಗಳನ್ನು ನೀಡಲು ಸಿದ್ಧವಾಗಿದ್ದೇವೆ. ವಿದ್ಯಾರ್ಥಿಗಳು ಚೆನ್ನಾಗಿ ಅಧ್ಯಯನ ಮಾಡುವ ಮೂಲಕ ನೀಡಿದ ಬಂಡವಾಳಕ್ಕೆ ಲಾಭ ಬರುವಂತೆ ಮಾಡಬೇಕು’ ಎಂದರು.

ಅಮೇರಿಕನ್‌ ಇಂಡಿಯಾ ಪ್ರತಿಷ್ಠಾನದ ಕಾರ್ಯಕ್ರಮಾಧಿಕಾರಿ ಸುಧಾಕರ್‌.ಆರ್.ಭಂಡಾರಿ ಮಾತನಾಡಿ, ‘ಶಾಲಾ ರೂಪಾಂತರ ಕಾರ್ಯಕ್ರಮದಡಿಯಲ್ಲಿ ದೊಮ್ಮಸಂದ್ರ ಜನತಾ ಕಾಲೊನಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶೈಕ್ಷಣಿಕ ಚಟುವಟಿಕೆಗಳಿಗೆ ನೆರವು ನೀಡಲಾಗಿದೆ. ಹಾಗೂ ಶಾಲೆಗೆ ಹೈಟೆಕ್‌ ಶೌಚಾಲಯ ನಿರ್ಮಿಸಿಕೊಡಲಾಗಿದೆ. ಶಾಲೆಗೆ ಸುಣ್ಣಬಣ್ಣ ಬಳಿದು ಅಂದಗೊಳಿಸಲಾಗಿದೆ. ತರಗತಿಗಳನ್ನು ಡಿಜಿಟಲೀಕರಣದ ಮೂಲಕ ಬೋಧನೆ ಮಾಡುವ ನಿಟ್ಟಿನಲ್ಲಿ ನಾಲ್ಕು ತರಗತಿಗಳಿಗೆ ಟಿವಿಗಳನ್ನು ನೀಡಲಾಗಿದ್ದು ಇಂಗ್ಲಿಷ್, ಗಣಿತ, ವಿಜ್ಞಾನ ಹಾಗೂ ಸಮಾನ ವಿಜ್ಞಾನ ವಿಷಯಗಳನ್ನು ಸ್ಮಾರ್ಟ್‌ ಕ್ಲಾಸ್‌ಗೆ ಅಳವಡಿಸಲಾಗಿದೆ. ಇಂಗ್ಲಿಷ್ ಕಲಿಕೆಗೆ ಸಂಬಂಧಿಸಿದಂತೆ ವಿಶೇಷ ಸಾಫ್ಟ್‌ವೇರ್‌ ಅಭಿವೃದ್ಧಿಪಡಿಸಲಾಗಿದ್ದು ನೆರವು ನೀಡಲಾಗುವುದು. ವಿಜ್ಞಾನ ಮತ್ತು ಗಣಿತ ಕಿಟ್‌ಗಳನ್ನು ನೀಡಲಾಗಿದ್ದು ಶಾಲೆಯ ಶೈಕ್ಷಣಿಕ ಹಾಗೂ ಭೌತಿಕ ಅಭಿವೃದ್ಧಿಗೆ ನೆರವು ನೀಡಲಾಗಿದೆ’ ಎಂದರು.

ಜಿಲ್ಲಾ ಪಂಚಾಯಿತಿ ಸದಸ್ಯೆ ವಾತ್ಸಲ್ಯ ಲಕ್ಷ್ಮೀನಾರಾಯಣ್, ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ಶಾಂತಮ್ಮ, ಸದಸ್ಯ ಮುನಿಯಪ್ಪ, ಎಕ್ಸ್‌ಟ್ರೀಮ್‌ ನೆಟ್‌ವರ್ಕ್‌ನ ಸಿಎಸ್‌ಆರ್ ವಿಭಾಗದ ವಿವೇಕ್‌ ಮತ್ತು ಪ್ರಾಚಿ, ಅಮೆರಿಕನ್ ಇಂಡಿಯಾ ಪ್ರತಿಷ್ಠಾನದ ರಾಜ್ಯ ಕಾರ್ಯಕ್ರಮ ವ್ಯವಸ್ಥಾಪಕ ಜಾಕೀಂ ಜೋಕಿಬ್‌, ಸಮೂಹ ಸಂಪನ್ಮೂಲ ವ್ಯಕ್ತಿ ಭಾರತಿ. ಮುಖ್ಯೋಪಾಧ್ಯಾಯಿನಿ ಸುಜಾತ, ನಿವೃತ್ತ ಮುಖ್ಯಶಿಕ್ಷಕಿ ಗಿರಿಜಮ್ಮ ಹಾಜರಿದ್ದರು.

Post Comments (+)