ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಾಂಬೋರೇಟ್: ಜ್ಞಾನ, ಕೌಶಲ ಪರಸ್ಪರ ವಿನಿಮಯ

ಆನಿಬೆಸೆಂಟ್ ಪಾರ್ಕ್‍ನಲ್ಲಿ ಆರಂಭವಾಗಿರುವ 28ನೇ ಜಾಂಬೋರೇಟ್ ವಿಶೇಷತೆ
Last Updated 27 ಡಿಸೆಂಬರ್ 2019, 14:29 IST
ಅಕ್ಷರ ಗಾತ್ರ

ದೊಡ್ಡಬಳ್ಳಾಪುರ: ನಗರದ ಆನಿಬೆಸೆಂಟ್ ಪಾರ್ಕ್‍ನಲ್ಲಿ ಆರಂಭವಾಗಿರುವ 28ನೇ ಕರ್ನಾಟಕ ರಾಜ್ಯ ಸ್ಕೌಟ್ಸ್‌ ಮತ್ತು ಗೈಡ್ಸ್ ಜಾಂಬೋರೇಟ್‌ನಲ್ಲಿ ರಾಜ್ಯದ 35ಶೈಕ್ಷಣಿಕ ಜಿಲ್ಲೆಗಳಿಂದ ಐದು ಸಾವಿರ ಜನ ವಿದ್ಯಾರ್ಥಿಗಳು ಭಾಗವಹಿಸಿದ್ದಾರೆ. ಅವರಿಗೆ ಊಟ, ವಸತಿ ಸೌಲಭ್ಯ ಕಲ್ಪಿಸಲಾಗಿದೆ.

ಏನಿದು ಜಾಂಬೋರೇಟ್ ?: ಜಾಂಬೋರೀ ಎಂಬ ಆಂಗ್ಲ ಶಬ್ದಕ್ಕೆ ಕನ್ನಡದಲ್ಲಿ ಸಂಭ್ರಮಾಚರಣೆ, ಸಂತೋಷದ ಕೂಟ, ದೊಡ್ಡ ಜಾತ್ರೆ ಎಂಬ ಅರ್ಥಗಳಿವೆ. ಸ್ಕೌಟ್ಸ್‌ ಮತ್ತು ಗೈಡ್ಸ್ ಜಾಂಬೋರೇಟ್‍ಗೆ ಸಂಬಂಧಿಸಿದಂತೆ ಹೇಳುವುದಾದರೆ ಜಾಂಬೋರೇಟ್ ಸ್ಕೌಟಿಂಗ್ ಒಂದು ಆಟ, ಒಂದು ಶಿಕ್ಷಣ. ಸ್ಕೌಟಿಂಗ್ ಮತ್ತು ಗೈಡಿಂಗ್ ವಿದ್ಯಾರ್ಥಿ ಸಮುದಾಯ ಅಳವಡಿಸಿಕೊಳ್ಳುವ ಒಂದು ವಿಧಾನ. ವಿದ್ಯಾರ್ಥಿ ಸಮುದಾಯದ ಗುಂಪುಗಳು ಒಂದೆಡೆ ಕಲೆತು ಪಠ್ಯೇತರ ಚಟುವಟಿಕೆಗಳಾದ ಆಟ, ಹಾಡು, ಒಗಟು, ಪ್ರಕೃತಿ, ಪರಿಸರ ಅಧ್ಯಯನ ಸೇರಿದಂತೆ ತಮ್ಮಲ್ಲಿರುವ ಜ್ಞಾನ ಕೌಶಲ ಪರಸ್ಪರ ವಿಸ್ತರಿಸಿಕೊಳ್ಳುವುದೇ ಜಾಂಬೋರೇಟ್‍ನ ವಿಶೇಷ. ಈ ಅರ್ಥದಲ್ಲಿ ಸ್ಕೌಟಿಂಗ್ ಸಹ ಒಂದು ಆಟ. ನಿಯಮಗಳಿಗೆನುಸಾರವಾಗಿ ನುರಿತ ಶಿಕ್ಷಕರ ಉತ್ತಮ ಮಾರ್ಗದರ್ಶನದಲ್ಲಿ ಕ್ರೀಡಾ ಮನೋಭಾವದಿಂದ ಆಡಿದಾಗ ಸ್ಕೌಟಿಂಗ್ ಆನಂದದಾಯಕವಾಗಿರುತ್ತದೆ. ಜಾಂಬೋರೇಟ್‍ಗಳಲ್ಲಿ ಪ್ರತಿಯೊಂದು ಕಾರ್ಯ ಸ್ಕೌಟ್ ನಿಯಮಗಳಿಗೆ ಒಳಪಟ್ಟು ವೇಳಾಪಟ್ಟಿಯಂತೆ ಕಾರ್ಯಗತಗೊಳ್ಳುತ್ತದೆ.

ಜಾಂಬೋರೇಟ್ ಆಚರಣೆ: ಈ ಬಾರಿ ಜಾಂಬೋರೇಟ್‍ನಲ್ಲಿ ಪ್ರತಿಭಾ ಪ್ರದರ್ಶನ, ಸಾಹಸಮಯ ಚಟುವಟಿಕೆ, ಸರ್ವಧರ್ಮ ಸಮನ್ವಯತೆ, ಚಾರಣ, ಗ್ಲೋಬಲ್ ವಿಲೇಜ್, ಸಮುದಾಯ ಸೇವಾ ಚಟುವಟಿಕೆ, ಏಕತೆ ಪ್ರದರ್ಶನ, ಯುವ ವೇದಿಕೆ, ಜಾನಪದ ಮೇಳ ಮೊದಲಾದ ಪ್ರದರ್ಶನಗಳಿವೆ. ಗಾಂಧೀಜಿ ಅವರ 150ನೇ ಜನ್ಮದಿನಾಚರಣೆ ಅಂಗವಾಗಿ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರಿಗಾಗಿ ವಿಶೇಷ ವಸ್ತು ಪ್ರದರ್ಶನ, ಸಾಹಸ ಚಟುವಟಿಕೆ ನಡೆಯಲಿದೆ. ಪ್ರತಿದಿನ ಸಂಜೆ ರಾಜ್ಯದ ವಿವಿಧ ಭಾಗದ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ.

ಶುಕ್ರವಾರ ಬೆಳಗಿನಿಂದಲೇ ರೋವರ್ಸ್‌ ಮತ್ತು ರೇಂಜರ್ಸ್‌ ವಿದ್ಯಾರ್ಥಿಗಳು ಆನಿಬೆಸೆಂಟ್‌ ಪಾರ್ಕ್‌ನಲ್ಲಿ ದಶಕಗಳಷ್ಟು ಹಿಂದೆ ನಿರ್ಮಿಸಲಾಗಿರುವ ಬಾವಿ ಸ್ವಚ್ಛಗೊಳಿಸಿದರು. ಶನಿವಾರದಿಂದ ಅಧಿಕೃತವಾಗಿ ಆರಂಭಗೊಳ್ಳಲಿರುವ ಸಾಹಸ ಪ್ರದರ್ಶನ ಹಾಗೂ ವಿವಿಧ ಚಟುವಟಿಕೆಗಳ ಸಿದ್ಧತೆ, ತಾಲೀಮು ನಡೆಯಿತು. ಜಾಂಬೋರೇಟ್‌ಗೆ ಬಂದಿರುವ ವಿದ್ಯಾರ್ಥಿಗಳು ಉಳಿದುಕೊಳ್ಳಲು ತಾತ್ಕಾಲಿಕ ಟೆಂಟ್‌ಗಳನ್ನು ನಿರ್ಮಾಣ ಮಾಡಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT