ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೊಡ್ಡಬಳ್ಳಾಪುರ: ಕೋಡಿಪಾಳ್ಯ ಸೀಲ್ ಡೌನ್‌, ರಸ್ತೆ ಬಂದ್‌

ಸೋಂಕಿತ ವ್ಯಕ್ತಿಯೊಂದಿಗೆ ಸಂಪರ್ಕದಲ್ಲಿದ್ದ 22 ಮಂದಿಗೆ ಐಸೋಲೇಷನ್‌
Last Updated 14 ಏಪ್ರಿಲ್ 2020, 15:35 IST
ಅಕ್ಷರ ಗಾತ್ರ

ದೊಡ್ಡಬಳ್ಳಾಪುರ:ವ್ಯಕ್ತಿಯೊಬ್ಬರಿಗೆಕೋವಿಡ್‌-19 ದೃಢಪಟ್ಟ ಹಿನ್ನೆಲೆಯಲ್ಲಿ ಕೋಡಿಪಾಳ್ಯ ಗ್ರಾಮವನ್ನು ಸೀಲ್‌ಡೌನ್‌ ಮಾಡಲಾಗಿದೆ. ಸೋಂಕಿತ ವ್ಯಕ್ತಿಯೊಂದಿಗೆ ಪ್ರಾಥಮಿಕ ಸಂಪರ್ಕದಲ್ಲಿದ್ದ 22 ಜನರನ್ನು ಸರ್ಕಾರಿ ವಸತಿ ನಿಲಯ, ಆಸ್ಪತ್ರೆಯಲ್ಲಿ ಐಸೋಲೇಷನ್‌ ಮಾಡಲಾಗಿದೆ.

ಈ ಗ್ರಾಮದಲ್ಲಿ 40 ಕುಟುಂಬಗಳಿವೆ. ಒಟ್ಟು ಜನಸಂಖ್ಯೆ 350. ಗ್ರಾಮದಲ್ಲಿ ಯಾರೊಬ್ಬರನ್ನು ಮನೆಯಿಂದ ಹೊರಬರದಂತೆ ಹೋ ಕ್ವಾರಂಟೈನ್‌ ಮಾಡಲಾಗಿದ್ದು ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ. ಇಡೀ ಗ್ರಾಮದ ಎಲ್ಲ ರಸ್ತೆ, ಮನೆಗಳಿಗೂ ಮಂಗಳವಾರ ಎರಡನೇ ಬಾರಿಗೆ ಔಷಧ ಸಿಂಪಡಣೆ ಮಾಡಲಾಗಿದೆ. ಗ್ರಾಮದಲ್ಲಿನ ಹಾಲು ಉತ್ಪಾದಕರ ಸಹಕಾರ ಸಂಘವನ್ನು ಬಂದ್‌ ಮಾಡಲಾಗಿದೆ. ರೈತರ ಹಸುಗಳಿಂದ ಕರೆಯುವ ಹಾಲನ್ನು ಪಂಚಾಯಿತಿ ಸಿಬ್ಬಂದಿಯೇ ಸಂಗ್ರಹ ಮಾಡಿ ಗ್ರಾಮದಲ್ಲಿ ಅಗತ್ಯ ಇರುವವರಿಗೆ ನೀಡುತ್ತಿದ್ದಾರೆ.

ರೈತರ ಸಾಕು ಪ್ರಾಣಿಗಳಾದ ಹಸು, ಕುರಿ, ಮೇಕೆಗಳನ್ನು ತೋಟದಲ್ಲಿನ ಮನೆಗಳಿಗೆ ಸ್ಥಳಾಂತ ಮಾಡಿ ಅಲ್ಲಿಯೇ ಮೇವು, ನೀರು ದೊರೆಯುವಂತೆ ಮಾಡಲಾಗಿದೆ. ಜನರಿಗೆ ಅಗತ್ಯ ವಸ್ತುಗಳು ಬೇಕಾದಲ್ಲಿ ಪಂಚಾಯಿತಿ ಸಿಬ್ಬಂದಿ ನಂಬರ್‌ಗಳಿಗೆ ಕರೆ ಮಾಡಿ ತಿಳಿಸಿದರೆ ಮನೆ ಬಾಗಿಲಿಗೆ ವಸ್ತುಗಳನ್ನು ತಲುಪಿಸಲಾಗುತ್ತಿದೆ ಎಂದು ಚನ್ನದೇವಿಅಗ್ರಹಾರ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ನಂದಕುಮಾರ್‌ ತಿಳಿಸಿದರು.

ಬೆಚ್ಚಿಬೀಳುತ್ತಿರುವ ಜನ: ಕೋಡಿಪಾಳ್ಯ ಸೀಲ್‌ಡೌನ್‌ ಮಾಡಿರುವ ಹಿನ್ನೆಲೆಯಲ್ಲಿ ಇಡೀ ಗ್ರಾಮದ ರಸ್ತೆಗಳು ಬಿಕೋ ಎನ್ನುತ್ತಿವೆ. ಮನುಷ್ಯರ ಸುಳಿವೇ ಇಲ್ಲದಂತಾಗಿದೆ. ಈ ಗ್ರಾಮಕ್ಕೆ ಕೂಗಳತೆ ದೂರದಲ್ಲಿರುವ ಮಧುರೆ, ಚನ್ನಾದೇವಿ ಅಗ್ರಹಾರ, ಕನಸವಾಡಿ ಗ್ರಾಮಗಳ ಜನರು ಅಪ್ಪಿತಪ್ಪಿಯೂ ಈ ಗ್ರಾಮದ ರಸ್ತೆ ಕಡೆಗೆ ಸುಳಿಯಲಿಲ್ಲ. ದೊಡ್ಡಬಳ್ಳಾಪುರ-ನೆಲಮಂಗಲ ಮುಖ್ಯರಸ್ತೆ ಬದಿಯಲ್ಲೇ ಕೋಡಿಪಾಳ್ಯ ಇದೆ. ಮಧುರೆ ಹೋಬಳಿ ಬಹುತೇಕ ಗ್ರಾಮಗಳ ಜನರು ಸೇರಿದಂತೆ ನೆಲಮಂಗಲ ಕಡೆಗೆ ಹೋಗುವ ಪ್ರತಿಯೊಬ್ಬರು ಈ ಗ್ರಾಮದ ರಸ್ತೆಲ್ಲೇ ಹಾದು ಹೋಗಬೇಕಿತ್ತು. ಈಗ ಯಾರನ್ನು ಈ ರಸ್ತೆಯಲ್ಲಿ ಸಂಚರಿಸದಂತೆ ಬಂದ್‌ ಮಾಡಲಾಗಿದೆ. ನೆಲಮಂಗಲ ಕಡೆಗೆ ಹೋಗುವ ವಾಹನಗಳನ್ನು ಕಾಡನೂರು ಕೈಮರದ ಮೂಲಕ ಹೊನ್ನಾವಾರ, ಕನಸವಾಡಿ ಮೂಲಕ ಹಾದು ಹೋಗುವಂತೆ ಪರ್ಯಾಯ ವ್ಯವಸ್ಥೆ ಮಾಡಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT