ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಂಗಳೂರು ಗ್ರಾಮಾಂತರ ಜಿಲ್ಲೆ: ದಾಖಲೆ ಬಿತ್ತನೆ

ಉತ್ತಮ ಮಳೆ; ರೈತರಿಗೆ ಉತ್ತಮ ಬೆಳೆಯ ನಿರೀಕ್ಷೆ
Last Updated 18 ಸೆಪ್ಟೆಂಬರ್ 2020, 14:07 IST
ಅಕ್ಷರ ಗಾತ್ರ

ದೇವನಹಳ್ಳಿ: ‘ಮುಂಗಾರು ಹಂಗಾಮಿನಲ್ಲಿ ಈ ಬಾರಿ ಗ್ರಾಮಾಂತರ ಜಿಲ್ಲೆಯಲ್ಲಿ ವಿವಿಧ ಬೆಳೆಗಳು ದಾಖಲೆ ಪ್ರಮಾಣದಲ್ಲಿ ಬಿತ್ತನೆಯಾಗಿದೆ’ ಎಂದು ಕೃಷಿ ಇಲಾಖೆ ಮಾಹಿತಿ ನೀಡಿದೆ.

‘ಕಳೆದ ನಾಲ್ಕು ವರ್ಷಗಳಿಂದ ಬರ ಪೀಡಿತ ಪ್ರದೇಶವೆಂಬ ಕಳಂಕ ಹೊತ್ತುಕೊಂಡಿದ್ದ ಜಿಲ್ಲೆಯಲ್ಲಿ ಮುಂಗಾರು ಆರಂಭದಿಂದಲೂ ವರುಣ ರೈತರ ಕೃಷಿ ಚಟುವಟಿಕೆಗೆ ಸಕಾಲದಲ್ಲಿ ಸ್ಪಂದಿಸಿದ ಕಾರಣ ಕೆರೆ ಕುಂಟೆಗಳು ಭರ್ತಿಯಾಗದಿದ್ದರೂ ವರ್ಷಧಾರೆ ಹದವಾಗಿ ಸುರಿಯುತ್ತಿದೆ. ಪ್ರತಿಯೊಂದು ಬೆಳೆ ಹುಲುಸಾಗಿ ನಳನಳಿಸುತ್ತಿವೆ’ ಎಂದುರೈತರು ಸಂತಸ ವ್ಯಕ್ತಪಡಿಸುತ್ತಿದ್ದಾರೆ.

‘ಬಯಲು ಸೀಮೆಯ ಅಹಾರ ಧಾನ್ಯಗಳಲ್ಲಿ ಪ್ರಮುಖವಾಗಿರುವ ರಾಗಿ ಬೆಳೆ ವಾರ್ಷಿಕ ಬಿತ್ತನೆ ಗುರಿ ನೀರಾವರಿ ಮತ್ತು ಖುಷ್ಕಿ 41,326 ಹೆಕ್ಟರ್ ಪೈಕಿ 41,338 ಹೆಕ್ಟೇರ್‌ನಲ್ಲಿ ಬಿತ್ತನೆಯಾಗಿರುವುದು (ಶೇಕಡ 100ರಷ್ಟು) ಕಳೆದ ಎಂಟು ವರ್ಷಗಳ ಹಿಂದಿನ ದಾಖಲೆಯನ್ನು ಸರಿಗಟ್ಟಿದೆ. ಕಳೆದ ವರ್ಷ ಆಗಸ್ಟ್‌‌‌ ಅಂತ್ಯಕ್ಕೆ 14,138 ಹೆಕ್ಟೇರ್‌ ಬಿತ್ತನೆ ಆಗಿತ್ತು. ಪ್ರಸ್ತುತ ಮುಂಗಾರಿನಲ್ಲಿ ಮುಸುಕಿನ ಜೋಳ ಗುರಿ ಮೀರಿ ಬಿತ್ತನೆಯಾಗಿದೆ. 10,295 ಹೆಕ್ಟೇರ್‌ ಗುರಿ ಪೈಕಿ 10,622 ಹೆಕ್ಟರ್ ಶೇಕಡ 103ರಷ್ಟು ಆಗಿದ್ದು, ಕಳೆದ ವರ್ಷ 2,321 ಹೆಕ್ಟೇರ್‌ನಲ್ಲಿ ಬಿತ್ತನೆಯಾಗಿತ್ತು’ ಎಂದು ಕೃಷಿ ಇಲಾಖೆ ಮೂಲಗಳು ತಿಳಿಸಿವೆ.

‘ತೃಣ ಮೂಲ ಧಾನ್ಯಗಳು 16 ಹೆಕ್ಟರ್, ಮೇವಿನ ಜೋಳ 2,569 ಹೆಕ್ಟೇರ್‌, ಪಾಪ್ ಕಾರ್ನ್ 177 ಹೆಕ್ಟೇರ್‌ ಒಟ್ಟು ಏಕದಳ ಧಾನ್ಯಗಳು 54,950 ಹೆಕ್ಟೇರ್‌ ಶೇಕಡ 99ರಷ್ಟು ಬಿತ್ತನೆಯಾಗಿರುವುದು ಉತ್ತಮ ಬೆಳವಣಿಗೆ. ಕೊರೊನ ಸೋಂಕಿನ ನಷ್ಟ ಬೆಳೆ ಉತ್ಪಾದನೆಯಿಂದ ಸರಿ ತೂಗಿಸುವ ಆಶಾಭಾವನೆಯಲ್ಲಿದ್ದೇವೆ’ ಎನ್ನುತ್ತಾರೆ ರೈತರು.

ನೆಲಗಡಲೆ, ಸೂರ್ಯ ಕಾಂತಿ, ಎಳ್ಳು, ಹುಚ್ಚೆಳ್ಳು, ಸಾಸಿವೆ, ಹರಳು ಒಟ್ಟು ಎಣ್ಣೆಕಾಳುಗಳ ಬೆಳೆಗಳು 711 ಹೆಕ್ಟೇರ್‌ನಲ್ಲಿ ಬಿತ್ತನೆಯಾಗಿದೆ. ಕಳೆದ ವರ್ಷ 102 ಹೆಕ್ಟರ್‍ನಲ್ಲಿ ಬಿತ್ತನೆಯಾಗಿತ್ತು. ತೊಗರಿ, ಹೆಸರು, ಹುರುಳಿ, ಅಲಸಂದೆ, ಅವರೆ, ಉದ್ದು ಒಟ್ಟು ದ್ವಿದಳ ಧಾನ್ಯಗಳು 2,810 ಹೆಕ್ಟರ್‌ನಲ್ಲಿ ಬಿತ್ತನೆಯಾಗಿದ್ದು ಕಳೆದ ವರ್ಷ ಕೇವಲ 796 ಹೆಕ್ಟರ್‌ನಲ್ಲಿ ಬಿತ್ತನೆ ಆಗಿತ್ತು ಎಂದು ಕೃಷಿ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ತಾಲ್ಲೂಕುವಾರು ಬಿತ್ತನೆ ಪ್ರಗತಿ: ದೇವನಹಳ್ಳಿ 11,872 ಹೆಕ್ಟೇರ್‌ ಶೇಕಡ 97, ದೊಡ್ಡಬಳ್ಳಾಪುರ 21,096 ಹೆಕ್ಟೇರ್‌ ಶೇಕಡ 102, ಹೊಸಕೋಟೆ 10,746 ಹೆಕ್ಟೇರ್‌ ಶೇಕಡ 95, ನೆಲಮಂಗಲ 14,085 ಹೆಕ್ಟೇರ್‌ ಜಿಲ್ಲೆಯಲ್ಲಿ ಒಟ್ಟು 60107 ಹೆಕ್ಟೇರ್ ಗುರಿ ಪೈಕಿ 58,563 ಹೆಕ್ಟೇರ್‌ ಶೇಕಡ 97ರಷ್ಟು ಬಿತ್ತನೆಯಾಗಿದೆ.

‘ಗ್ರಾಮಾಂತರ ಜಿಲ್ಲೆಯಲ್ಲಿ ವಿವಿಧ ರಾಸಾಯನಿಕ ಗೊಬ್ಬರ ವಿತರಣೆ ಗುರಿ 43,521 ಟನ್‌ ಪೈಕಿ ಶೇಕಡ 60ರಷ್ಟು ಮುಂಗಾರು ಆರಂಭದಲ್ಲಿ ದಾಸ್ತಾನು ಮಾಡಿ ವಿತರಿಸಲಾಗಿತ್ತು. ಶೇಕಡ 94.96ರಷ್ಟು ಗೊಬ್ಬರ ಸೆ. 15ರವರೆಗೆ ವಿತರಿಸಲಾಗಿದೆ. ಪ್ರಸ್ತುತ ವಿವಿಧ ಬೆಳೆ ಬೆಳವಣಿಗೆಗೆ ಪೂರಕವಾಗಿ 192 ಟನ್‌ ಯೂರಿಯ ವಿವಿಧ ಸಹಕಾರ ಸಂಘಗಳಲ್ಲಿ ಮತ್ತು ಖಾಸಗಿ ಗೊಬ್ಬರ ಅಂಗಡಿಗಳಲ್ಲಿ ಲಭ್ಯವಿದೆ. ಯೂರಿಯ ಕೊರತೆ ಇಲ್ಲ. ಕೃತಕ ಅಭಾವ ಸೃಷ್ಟಿಸಿದರೆ ಕ್ರಮ ಕೈಗೊಳ್ಳಲಾಗುವುದು ಎಂದು ಕೃಷಿ ಇಲಾಖೆ ಜಿಲ್ಲಾ ಉಪನಿರ್ದೇಶಕಿ ವಿನುತಾ ತಿಳಿಸಿದ್ದಾರೆ.

ಜಿಲ್ಲೆಯಲ್ಲಿ ಕೆಲವು ಕಡೆ ಮುಸುಕಿನ ಜೋಳದ ಬೆಳೆಗೆ ಸೈನಿಕ ಹುಳುಗಳ ಬಾಧೆ ಕಾಣಿಸಿಕೊಂಡಿದೆ. ರೈತರು ತಾವು ಬಿತ್ತಿದ ಬೆಳೆಗಳ ಬಗ್ಗೆ ಗಮನಹರಿಸುತ್ತಿರಬೇಕು. ಯಾವುದೇ ರೋಗ ಕಂಡು ಬಂದರೆ ತಕ್ಷಣ ಕೃಷಿ ಇಲಾಖೆ ಅಧಿಕಾರಿಗಳ ಗಮನಕ್ಕೆ ತರಬೇಕು’ ಎಂದು ರೈತರಿಗೆ ಸಲಹೆ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT