ಭಾನುವಾರ, ಜೂನ್ 13, 2021
25 °C

ಹೊಸಕೋಟೆ | ರೇಷ್ಮೆ ಬೆಳೆ: ದಾಖಲೆಯ ಫಸಲು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹೊಸಕೋಟೆ: ಕೊರೊನಾ ಲಾಕ್‌ ಸಂದರ್ಭದಲ್ಲಿ ರೈತರು ತಾವು ಬೆಳೆದ ಬೆಳೆಗೆ ಬೆಲೆ ಸಿಗದೆ ಕಂಗಾಲಾಗಿದ್ದ ಕಾಲದಲ್ಲಿ ತಾಲ್ಲೂಕಿನ ಕೆಂಬಳಗಾನಹಳ್ಳಿ ಗ್ರಾಮದಲ್ಲಿ ರೈತ ಕುಟುಂಬ ರೇಷ್ಮೆ ಗೂಡಿನಲ್ಲಿ ದಾಖಲೆಯ ಬೆಳೆ ತೆಗೆದು ಪ್ರಶಸ್ತಿ ಪಡೆದಿದೆ.

ತಾಲ್ಲೂಕಿನ ಕೆಂಬಳಗಾನಹಳ್ಳಿಯ ಚೆನ್ನವೀರಪ್ಪನವರ ಕುಟುಂಬ ಮೊದಲಿನಿಂದಲೂ ಕೃಷಿಯನ್ನು ನಂಬಿಕೊಂಡು ಬದುಕನ್ನು ನಡೆಸುತ್ತಿದ್ದು ಈಗ ಎರಡನೆಯ ಮಗ ಕೆ.ಸಿ. ಮಂಜುನಾಥ್ ಬೆಂಗಳೂರಿನಲ್ಲಿ ವಕೀಲರು. ಕೊರೊನಾ ಲಾಕ್‌ಡೌನ್‌ನಿಂದಾಗಿ ಊರು ಸೇರಿದ ಮಂಜುನಾಥ್ ತಾವೂ ಸಹ ಅಣ್ಣ ಬಸವರಾಜ್ ಜೊತೆಯಲ್ಲಿ ತೋಟದಲ್ಲಿ ಹಿಪ್ಪು ನೇರಳೆ ಬೆಳೆದರು.

ಆದರೆ ರೇಷ್ಮೆ ಮಾರುಕಟ್ಟೆ ಬಂದ್ ಆದಕಾರಣ ಯಾರೂ ಹಿಪ್ಪನೇರಳೆಯನ್ನು ಕೊಳ್ಳದೇ ಅದು ತೋಟದಲ್ಲಿ ಹಾಳಾಗುವ ಪರಿಸ್ಥಿತಿ ನಿರ್ಮಾಣವಾಯಿತು. ಆಗ ಮಂಜುನಾಥ್ ತಾವೇ ರೇಷ್ಮೆ ಬೆಳೆಯಲು ಮುಂದಾದರು. ಮಾರುಕಟ್ಟೆಯಿಂದ ಎರಡನೇ ಜ್ವರದ 125 ಹುಳುಗಳನ್ನು ತೆಗೆದುಕೊಂಡು ಬಂದ ಮಂಜುನಾಥ್ ಅದನ್ನು ಚೆನ್ನಾಗಿ ಸಾಕಿ ಅದರಿಂದ ಸುಮಾರು 170 ಕೆಜಿ ಉತ್ತಮ ಗುಣಮಟ್ಟದ ರೇಷ್ಮೆ ಗೂಡನ್ನು ಬೆಳೆದರು.

ಅದನ್ನು ಕ್ಯಾಲನೂರಿನ ರೇಷ್ಮೆ ಮಾರುಕಟ್ಟೆಯಲ್ಲಿ ಉತ್ತಮ ಬೆಲೆಗೆ ಮಾರಿದರು. ಜೊತೆಗೆ ಉತ್ತಮವಾಗಿ ಬೆಳೆ ಬೆಳೆದದಕ್ಕೆ ಕ್ಯಾಲನೂರು ರೇಷ್ಮೆ ಗೂಡಿನ ಆಡಳಿತ ಅಧಿಕಾರಿ ಶ್ರೀನಿವಾಸ ಗೌಡ ಅವರಿಂದ ಪ್ರಶಸ್ತಿ ಪತ್ರವನ್ನು ಸಹಾ ಸ್ವೀಕರಿಸಿದರು. ರೇಷ್ಮೆ ಗೂಡನ್ನು ಮಾರಿ ಸುಮಾರು ₹ 45 ಸಾವಿರ ಗಳಿಸಿದರು.

ಹಳ್ಳಿಗಳಲ್ಲಿನ ರೈತರು ತಾವು ಬೆಳೆದ ಬೆಳೆಗೆ ಉತ್ತಮ ಮಾರುಕಟ್ಟೆ ದೊರೆಯದ ಸ್ಥಿತಿಯಲ್ಲಿ ಈ ಕುಟುಂಬ ಬೇರೆ ರೈತರಿಗೆ ಮಾದರಿಯಾಗಿದೆ. 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು