ಸೋಮವಾರ, ಡಿಸೆಂಬರ್ 6, 2021
23 °C

DNP ಹೆದ್ದಾರಿಯಲ್ಲಿ ಕೊಳಚೆ ನೀರು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ದೊಡ್ಡಳ್ಳಾಪುರ: ನಗರಸಭೆಯಿಂದ ಅವೈಜ್ಞಾನಿಕವಾಗಿ ನಿರ್ಮಿಸಲಾಗಿರುವ ಒಳಚರಂಡಿ ವ್ಯವಸ್ಥೆಯಿಂದಾಗಿ ಬೆಂಗಳೂರು-ದೊಡ್ಡಬಳ್ಳಾಪುರ ಹೆದ್ದಾರಿಯ ಮೂತ್ತೂರು ಸಮೀಪ ಕೊಳಚೆ ನೀರು ಹರಿದು ರಸ್ತೆಗೆ ಬರುತ್ತಿದೆ.

ರಸ್ತೆಯ ಮಧ್ಯ ಭಾಗದಲ್ಲೇ ನಿರ್ಮಿಸಲಾಗಿರುವ ಒಳಚರಂಡಿ ಪೈಪ್‌ಲೈನ್‌ ಬಂದ್‌ ಆಗಿದ್ದು ಚೇಂಬರ್‌ ಮೂಲಕ ನೀರು ರಸ್ತೆಗೆ ಹರಿದು ಬಂದು ಸಂಚಾರಕ್ಕೆ ಅಡ್ಡಿಯಾಗಿದೆ. ಸುಮಾರು ಎರಡು ತಿಂಗಳಿಂದಲೂ ಕೊಳಚೆ ನೀರು ರಸ್ತೆಗೆ ಬರುತ್ತಿರುವ ಸ್ಥಳದಲ್ಲಿ ಬ್ಯಾರಿಕೇಡ್‌ಗಳನ್ನು ಅಡ್ಡಲಾಗಿ ಇಡಲಾಗಿದೆ.‌

ಪ್ರತಿ ದಿನವು ಈ ಹೆದ್ದಾರಿಯಲ್ಲಿ ಹೊಸಬರು ಸಹ ರಾತ್ರಿ ವೇಳೆ ಕಾರು, ಬೈಕ್‌ಗಳಲ್ಲಿ ಸಂಚರಿಸುತ್ತಾರೆ. ದಾರಿಗೆ ಅಡ್ಡಲಾಗಿ ಹಿಡಲಾಗಿರುವ ಬ್ಯಾರಿಕೇಡ್‌ಗಳು ರಾತ್ರಿ ವೇಳೆ ಕಾಣಿಸುವುದೇ ಇಲ್ಲ. ಹೀಗಾಗಿ ಪ್ರತಿದಿನವೂ ಅಪಘಾತಗಳು ನಡೆಯುತ್ತಲೇ ಇವೆ. ಹಲವಾರು ಬಾರಿ ನಗರಸಭೆ ಅಧಿಕಾರಿಗಳಿಗೆ ದೂರು ನೀಡಿದ್ದರು ದುರಸ್ತಿ ಮಾಡಿಯೇ ಇಲ್ಲ. ಕೊಳಚೆ ನೀರು ರಸ್ತೆಗೆ ಬರುವುದನ್ನು ನಿಲ್ಲಿಸಲು ಮನವಿ.

ರಾಜೇಶ್‌, ಮುತ್ತೂರು, ದೊಡ್ಡಬಳ್ಳಾಪುರ.

ಚರಂಡಿ ಕಾಮಗಾರಿ ಅವ್ಯವಸ್ಥೆ

ಹೊಸಕೋಟೆ ನಗರದ ವಿವಿಧ ಭಾಗದಲ್ಲಿ ಅಭಿವೃದ್ಧಿ ಕೆಲಸಗಳು ವೇಗವಾಗಿ ನಡೆಯುತ್ತಿವೆ. ಆದರೆ, ಕಾಮಗಾರಿ ನಡೆಸುತ್ತಿರುವ ಗುತ್ತಿಗೆದಾರರು ಯಾವುದೇ ಮುನ್ನೆಚ್ಚರಿಕೆ ಇಲ್ಲದೆ ಕಾಮಗಾರಿ ನಡೆಸುತ್ತಿದ್ದಾರೆ. ಇದಕ್ಕೆ ವಿವಿ ಬಡಾವಣೆಯ ಶ್ರೀವಿವೇಕಾನಂದ ಶಾಲೆಯ ಪಕ್ಕದಲ್ಲಿ ನಡೆಯುತ್ತಿರುವ ಚರಂಡಿ ಕಾಮಗಾರಿ ಇದಕ್ಕೊಂದು ನಿದರ್ಶನ.

ಚರಂಡಿ ಮಧ್ಯದಲ್ಲಿರುವ ವಿದ್ಯುತ್‌ ಕಂಬಗಳನ್ನು ಸ್ಥಳಾಂತರಿಸದೆ ಹಾಗೆಯೇ ನಿರ್ಮಾಣ ಮಾಡುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಸ್ವಲ್ಪ ಕಸ ವಿದ್ಯುತ್ ಕಂಬದ ಹತ್ತಿರ ಸಿಕ್ಕಿದರೂ ಚರಂಡಿ ಕಟ್ಟಿಕೊಂಡು ನೀರು ಹೊರಬರುತ್ತದೆ. ಈ ಬಗ್ಗೆ ನಗರಸಭಾ ಪೌರಾಯುಕ್ತ ರಮೇಶ್ ಅವರನ್ನು ಸಂಪರ್ಕಿಸಿದಾಗ ನಗರದ ವಿವಿಧ ರಸ್ತೆಗಳಲ್ಲಿ ಈ ರೀತಿ ಕಂಬಗಳು ಚರಂಡಿ ಮಧ್ಯದಲ್ಲಿವೆ. ನಾವು ಬೆಸ್ಕಾಂ ಅಧಿಕಾರಿಗಳಿಗೆ ತಿಳಿಸಿದ್ದು ಅವರು ಇನ್ನೂ ಸ್ಥಳಾಂತರಿಸಿಲ್ಲ ಎನ್ನುತ್ತಾರೆ.

ಮನೆ ಮುಂದಿನ ಚರಂಡಿಯ ಮಧ್ಯದಲ್ಲಿ ವಿದ್ಯುತ್ ಕಂಬಗಳು ಇದ್ದು ಗುತ್ತಿಗೆದಾರರು ಹಾಗೆಯೇ ಚರಂಡಿ ಮಾಡಿದ್ದಾರೆ. ಮುಂದಿನ ದಿನಗಳಲ್ಲಿ ಮೋರಿ ಕಟ್ಟಿಕೊಂಡರೆ ನೀರು ರಸ್ತೆಗೆ ಹರಿಯುತ್ತದೆ. ರಸ್ತೆ ಚಿಕ್ಕದಾಗಿದ್ದು ಮೋರಿ ನೀರು ಮನೆಯೊಳಗೆ ಬರುತ್ತದೆ. ಆಗ ಮತ್ತೆ ರಿಪೇರಿ ಹೆಸರಿನಲ್ಲಿ ಸಾರ್ವಜನಿಕರ ಹಣವನ್ನು ನಗರಸಭೆ ವ್ಯಯ ಮಾಡುತ್ತದೆ.

ಈ ರೀತಿ ಅವೈಜ್ಞಾನಿಕ ಕಾಮಗಾರಿ ಮಾಡುವ ಬದಲು ಮೊದಲೇ ಇದ್ದ ಮೋರಿಯನ್ನು ಮುಂದುವರಿಸಿದ್ದರೆ ಚೆನ್ನಾಗಿರುತ್ತಿತ್ತು. ಸಾರ್ವಜನಿಕರ ತೆರಿಗೆ ಹಣವನ್ನು ಈ ರೀತಿ ಪೋಲು ಮಾಡುವ ಗುತ್ತಿಗೆದಾರರ ವಿರುದ್ಧ ಸಂಬಂಧಪಟ್ಟ ಅಧಿಕಾರಿಗಳು ಕ್ರಮಕೈಗೊಳ್ಳಬೇಕು. ಕೂಡಲೇ ಕಾಮಗಾರಿಯನ್ನು ನಿಲ್ಲಿಸಿ ಕಂಬಗಳು ಸ್ಥಳಾಂತರಗೊಂಡ ನಂತರ ಕೆಲಸ ಮಾಡಬೇಕು.

ಪರಮೇಶ್, ಸೋಲಾರ್‌ ಮಂಜುನಾಥ್, ಹೊಸಕೋಟೆ.

ಕಸ ವಿಲೇವಾರಿ ಘಟಕಕ್ಕೆ ಆಕ್ಷೇಪ

ವಿಜಯಪುರದ ಚನ್ನರಾಯಪಟ್ಟಣ ರಸ್ತೆಯಲ್ಲಿರುವ ಕೆರೆ ಕೋಡಿಯಲ್ಲಿ ಗ್ರಾಮ ಪಂಚಾಯಿತಿಯು ಕಸ ವಿಲೇವಾರಿ ಘಟಕ ಸ್ಥಾಪನೆಗೆ ಮುಂದಾಗಿದೆ. ಇದರ ಪಕ್ಕದಲ್ಲೇ ಸ್ಮಶಾನಗಳಿವೆ. ಕೆರೆ ತುಂಬಿದರೆ ನೀರು ಹರಿದು ಹೋಗಲು ಜಾಗವಿಲ್ಲದಂತೆ ಮಾಡುತ್ತಿದ್ದಾರೆ. ಯಾವಾಗಲೂ ಕೆರೆ ತುಂಬಿದರೆ ಚಿಕ್ಕ ಏಟಿಯಲ್ಲೆ (ಕಾಲುವೆ) ನೀರು ಹರಿದು ಹೊಸಕೋಟೆ ಕೆರೆಗೆ ಹೋಗುತ್ತದೆ.

ಕಸ ವಿಲೇವಾರಿ ಘಟಕ ಸ್ಥಾಪನೆಗೆ ಬೇರೆ ಕಡೆಯಲ್ಲಿ ಸೂಕ್ತ ಜಾಗವನ್ನು ಹುಡುಕಿ ಮಾಡಿಕೊಳ್ಳುವಂತೆ ಗ್ರಾಮ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ ಹಾಗೂ ತಹಶೀಲ್ದಾರ್‌ ಎಲ್ಲರಿಗೂ ಮನವಿ ಕೊಟ್ಟರೂ ಇದುವರೆಗೂ ಯಾವುದೇ ಪ್ರಯೋಜನವಾಗಿಲ್ಲ. ಜನರು ಎಷ್ಟೇ ವಿರೋಧಿಸಿದರೂ ಜನರ ಮಾತಿಗೆ ಬೆಲೆ ಕೊಡದೇ ಅಧಿಕಾರಿಗಳು ಕಸ ವಿಲೇವಾರಿ ಘಟಕ ನಿರ್ಮಾಣ ಕಾಮಗಾರಿಯನ್ನು ಮುಂದುವರಿಸಿದ್ದಾರೆ.

ಸಮೀಪದಲ್ಲಿ ದ್ರಾಕ್ಷಿ ತೋಟಗಳಿವೆ. ರೈತರು ಬೆಳೆಗಳು ಬೆಳೆಯುತ್ತಾರೆ. ಕಸ ವಿಲೇವಾರಿ ಘಟಕ ಸ್ಥಾಪನೆಯಾದರೆ ಬೆಳೆಗಳು ನಾಶವಾಗುತ್ತವೆ. ಆದ್ದರಿಂದ ಸಂಬಂಧಪಟ್ಟ ಅಧಿಕಾರಿಗಳು ಗಮನಹರಿಸಿ ಘಟಕ ಸ್ಥಾಪನೆ ಕಾಮಗಾರಿಯನ್ನು ನಿಲ್ಲಿಸಿ ಸೂಕ್ತ ಜಾಗವನ್ನು ಮಾಡಬೇಕು.

ಚೌಡಪ್ಪ, ಚನ್ನರಾಯಪಟ್ಟಣ.

ಕೈಗಾರಿಕಾ ತ್ಯಾಜ್ಯದ ಹಾವಳಿ

ಆನೇಕಲ್– ಜಿಗಣಿ ಕೈಗಾರಿಕಾ ಪ್ರದೇಶ ವ್ಯಾಪ್ತಿಯ ಮಾಸ್ತೇನಹಳ್ಳಿ ದಿಣ್ಣೆ ರಸ್ತೆಯಲ್ಲಿ ಕೈಗಾರಿಕೆಗಳ ತ್ಯಾಜ್ಯ ಮತ್ತು ಕಸವನ್ನು ಎಸೆಯಲಾಗಿದೆ. ಇದರಿಂದ ಸುತ್ತಮುತ್ತಲ ಪ್ರದೇಶ ಗಬ್ಬುನಾರುತ್ತಿದೆ.

ಮಳೆ ಬಂದರೆ ತ್ಯಾಜ್ಯ ಕೊಳೆತು ಮೂಗು ಮುಚ್ಚಿಕೊಂಡು ಓಡಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ.

ಸಂಬಂಧಪಟ್ಟರು ಕಸವನ್ನು ತೆರವು ಮಾಡುವ ಮೂಲಕ ಈ ಭಾಗದ ಜನರು ನೆಮ್ಮದಿಯಿಂದ ಓಡಾಡಲು ಅನುಕೂಲ ಮಾಡಿಕೊಡಬೇಕು.

ಪ್ರಕಾಶ್‌, ರಾಜಾಪುರ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.