ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವೈದ್ಯಾಧಿಕಾರಿ ನಾಪತ್ತೆ ಹಿಂದೆ ಷಡ್ಯಂತ್ರ

ಸುದ್ದಿಗೋಷ್ಠಿಯಲ್ಲಿ ಬಿಜೆಪಿ ನಗರ ಘಟಕದ ಅಧ್ಯಕ್ಷ ಸಿ. ಜಯರಾಜ್ ಆರೋಪ
Last Updated 23 ಡಿಸೆಂಬರ್ 2020, 2:41 IST
ಅಕ್ಷರ ಗಾತ್ರ

ಹೊಸಕೋಟೆ: ‘ಆಯುರ್ವೇದ ವೈದ್ಯರಿಗೆ ಸಹಾಯ ಮಾಡಲು ಮುಂದಾಗಿ ತಾಲ್ಲೂಕು ವೈದ್ಯಾಧಿಕಾರಿ ಬಳಿ ಔಷಧಿ ವಾಪಸ್ ನೀಡುವಂತೆ ಮನವಿ ಮಾಡಲು ಅವರ ಕಚೇರಿಗೆ ತೆರಳಿದ್ದೆ. ಅವರು ನನ್ನ ಮಾತನ್ನು ರೆಕಾರ್ಡ್‌ ಮಾಡಿಕೊಳ್ಳುತ್ತಿದ್ದರು. ಇದನ್ನು ಗಮನಿಸಿ ಅವರ ಮೇಲೆ ರೇಗಿದ್ದು ನಿಜ. ಇದಾದ ಬಳಿಕ ಅವರ ಮುಂದೆ ದಯವಿಟ್ಟು ಕ್ಷಮಿಸಿ ಎಂದು ಕೇಳಿಕೊಂಡಿದ್ದೆ’ ಎಂದು ಬಿಜೆಪಿ ನಗರ ಘಟಕದ ಅಧ್ಯಕ್ಷ ಸಿ. ಜಯರಾಜ್ ತಿಳಿಸಿದರು.

ನಗರದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಶಾಸಕ ಶರತ್ ಬಚ್ಚೇಗೌಡ ಬೆಂಬಲಿಗರು ಈ ಪ್ರಕರಣವನ್ನು ರಾಜಕೀಯವಾಗಿ ಬಳಸಿಕೊಂಡಿದ್ದಾರೆ. ನನ್ನ ತೇಜೋವಧೆಗೆ ಮುಂದಾಗಿ ವೈದ್ಯಾಧಿಕಾರಿಯ ನಾಪತ್ತೆಯ ನಾಟಕವಾಡಿದ್ದಾರೆ’ ಎಂದು ದೂರಿದರು.

‘ಮಾಧ್ಯಮಗಳಲ್ಲಿ ನನ್ನನ್ನು ಎಂ.ಟಿ.ಬಿ. ನಾಗರಾಜ್ ಆಪ್ತ ಎಂದು ವರದಿ ಮಾಡಲಾಗಿದೆ. ಆದರೆ ನಾನು ಸಂಸದ ಬಿ.ಎನ್. ಬಚ್ಚೇಗೌಡರ ಗರಡಿಯಲ್ಲಿ ಬೆಳೆದವ. 10 ವರ್ಷಗಳ ಹಿಂದೆ ರಾಜಕೀಯ ಪ್ರವೇಶಿಸಿದೆ. ಎಂ.ಟಿ.ಬಿ. ನಾಗರಾಜ್ ಕಾಂಗ್ರೆಸ್ ಪಕ್ಷದಲ್ಲಿ ಸಚಿವ ಸ್ಥಾನ ತೊರೆದು ಬಿಜೆಪಿಗೆ ಸೇರಿದರು. ಇದರ ಬೆನ್ನಲ್ಲಿ ನಾನು ಅವರ ಜೊತೆ ಉತ್ತಮ ಒಡನಾಟ ಹೊಂದಿದ್ದೇನೆ. ಗ್ರಾಮ ಪಂಚಾಯತಿ ಚುನಾವಣೆಯಲ್ಲಿ ಗೆಲ್ಲಲು, ನನ್ನನ್ನು ರಾಜಕೀಯವಾಗಿ ಮುಗಿಸಲು ಸುಳ್ಳು ಆರೋಪ ಮಾಡುತ್ತಿದ್ದಾರೆ’ ಎಂದು ಆರೋಪಿಸಿದರು.

ಡಿ. 9ರಂದು ತಾಲ್ಲೂಕು ವೈದ್ಯಾಧಿಕಾರಿ ಡಾ.ಮಂಜುನಾಥ್ ಸುಜಾತ ಕ್ಲಿನಿಕ್‌ಗೆ ದಾಳಿ ನಡೆಸಿದರು. ಅಲ್ಲಿ ದೊರೆತ ಸುಮಾರು ₹ 2 ಲಕ್ಷ ಮೌಲ್ಯದ ಆಯುರ್ವೇದ ಔಷಧಿ ಹಾಗೂ ತುರ್ತು ಪರಿಸ್ಥಿತಿಗೆ ಬಳಸಲು ಇಟ್ಟಿದ್ದ ಆಲೋಪತಿ ಔಷಧಿಗಳನ್ನು ವಶಕ್ಕೆ ಪಡೆದರು. ಈ ಬೆಳವಣಿಗೆ ನಂತರ ನಾನು ವೈದ್ಯಾಧಿಕಾರಿಗೆ ಬೆದರಿಕೆ ಹಾಕಿದ್ದೆ ಎಂದು ದೂರು ದಾಖಲಾಗಿತ್ತು. ಕಳೆದ 15 ವರ್ಷಗಳಿಂದ ಜನರ ಆರೋಗ್ಯಕ್ಕೆ ಉತ್ತಮ ಚಿಕಿತ್ಸೆ ನೀಡುತ್ತಿರುವವರನ್ನು ಬೆಂಬಲಿಸಿ ಔಷಧಿ ವಾಪಸ್ ನೀಡಿ ಎಂದು ಮನವಿ ಮಾಡಿದ್ದು ತಪ್ಪೇ ಎಂದು ಪ್ರಶ್ನಿಸಿದರು.

ಎಂ.ಟಿ.ಬಿ. ನಾಗರಾಜ್ ಸಹ ವೈದ್ಯಾಧಿಕಾರಿಗೆ ಔಷಧಿ ವಾಪಸ್ ನೀಡಲು ತಿಳಿಸಿದ್ದರು. ಜೊತೆಗೆ ಜಿಲ್ಲಾಧಿಕಾರಿ ಅವರೂ ವಾಪಸ್ ನೀಡಲು ಸೂಚಿಸಿದ್ದರು. ನಂತರ ಆಯುರ್ವೇದ ವೈದ್ಯ ಡಾ.ಮೋಹನ್ ಅವರಿಂದ ಮುಚ್ಚಳಿಕೆ ಪತ್ರ ಬರೆಸಿಕೊಂಡ ಔಷಧಿ ವಾಪಸ್ ನೀಡಿದ ಮೇಲೆ ಇದನ್ನೇ ಬಂಡವಾಳ ಮಾಡಿಕೊಂಡು ನಾಪತ್ತೆ ನಾಟಕವಾಡಿ ನನ್ನ ಮೇಲೆ ಸುಳ್ಳು ದೂರು ದಾಖಲಿಸಿದ್ದಾರೆ ಎಂದು ಹೇಳಿದರು.

ವೈದ್ಯಾಧಿಕಾರಿ ಮಾಡಿಕೊಂಡಿದ್ದ ಆಡಿಯೊ ರೆಕಾರ್ಡಿಂಗ್ ಕೇಳಿದ ವಿರೋಧ ಪಕ್ಷದವರು ಈ ಪಿತೂರಿಯ ಸೂತ್ರದಾರರಾಗಿದ್ದಾರೆ. ಪಂಚಾಯಿತಿ ಚುನಾವಣೆಯಲ್ಲಿ ಮತದಾರರಿಗೆ ತಪ್ಪು ಮಾಹಿತಿ ನೀಡಲು ಈ ರೀತಿಯ ಷಡ್ಯಂತ್ರ ರೂಪಿಸಿದ್ದಾರೆ ಎಂದು ಹೇಳಿದರು.

ಟೌನ್ ಬ್ಯಾಂಕ್ ಅಧ್ಯಕ್ಷ ಪಿ. ಕೃಷ್ಣಪ್ಪ, ನಿರ್ದೇಶಕರಾದ ಜಿ.ಟಿ. ಮೋಹನ್, ಅಪ್ಸರ್‍, ನಗರಸಭೆಯ ಸದಸ್ಯ ನಿತಿನ್ ಸುದ್ದಿಗೋಷ್ಠಿಯಲ್ಲಿ
ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT