ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶರಣ ಸಾಹಿತ್ಯ ಮನೋವಿಕಾಸಕ್ಕೆ ಪೂರಕ: ಡಾ.ಎಂ.ಎಸ್‌.ಆಶಾದೇವಿ ಅಭಿಮತ

ತಾಲ್ಲೂಕು ಮಟ್ಟದ ಪ್ರಥಮ ಸಮ್ಮೇಳನ
Last Updated 16 ಫೆಬ್ರುವರಿ 2020, 13:13 IST
ಅಕ್ಷರ ಗಾತ್ರ

ಆನೇಕಲ್: ಶರಣರು ಜಗತ್ತಿಗೆ ಸಂವಿಧಾನ ನೀಡಿದರು. ಶರಣ ಸಾಹಿತ್ಯ ಎಲ್ಲ ಕಾಲ, ಎಲ್ಲ ವರ್ಗಕ್ಕೂ ಪ್ರಸ್ತುತವಾಗುವ ಪ್ರತಿಪಾದನೆ ಮಾಡಿದ ಮೌಲ್ಯಗಳು ಜೀವನ ಮೌಲ್ಯಗಳು. ಇದು ಜೀವನ ಸಂವಿಧಾನಕ್ಕೆ ಶರಣರು ನೀಡಿದ ನೀತಿ ಸಂಹಿತೆಯಾಗಿದೆ ಎಂದು ಆನೇಕಲ್‌ ಶರಣ ಸಾಹಿತ್ಯ ಸಮ್ಮೇಳನದ ಅಧ್ಯಕ್ಷೆ, ಪ್ರಾಧ್ಯಾಪಕಿ ಡಾ.ಎಂ.ಎಸ್‌.ಆಶಾದೇವಿ ತಿಳಿಸಿದರು.

ಅವರು ಪಟ್ಟಣದಲ್ಲಿ ಬೆಂಗಳೂರು ನಗರ ಜಿಲ್ಲಾ ಶರಣ ಸಾಹಿತ್ಯ ಪರಿಷತ್‌ ಮತ್ತು ಆನೇಕಲ್‌ ಕ್ಷೇತ್ರ ಶರಣ ಸಾಹಿತ್ಯ ಪರಿಷತ್‌ ಸಹಯೋಗದಲ್ಲಿ ಆಯೋಜಿಸಿದ್ದ ತಾಲ್ಲೂಕು ಪ್ರಥಮ ಶರಣ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

12ನೇ ಶತಮಾನದ ಬಸವಣ್ಣನವರಲ್ಲಿ ವಿಶ್ವದ ಎಲ್ಲ ದಾರ್ಶನಿಕರನ್ನು ಕಾಣುತ್ತೇವೆ. ಬಸವಣ್ಣ ವಿಶ್ವದ ವಿಸ್ಮಯವಾಗಿದ್ದಾನೆ. ಶರಣ ಸಾಹಿತ್ಯ ಮನರಂಜನೆ ಸಾಹಿತ್ಯವಲ್ಲ. ಅದು ಮನೋವಿಕಾಸದ ಸಾಹಿತ್ಯ, ನೈತಿಕ ಮೌಲ್ಯಗಳನ್ನು ಜನರಲ್ಲಿ ಬಿತ್ತುವ ಕಾರ್ಯ ಶರಣ ಸಾಹಿತ್ಯದ ಮೂಲಕ ನಡೆದಿದೆ ಎಂದರು.

ಶರಣ ಚಳವಳಿಯು ಗಾಂಧಿ ಮತ್ತು ಅಂಬೇಡ್ಕರ್‌ ಅವರ ಸಮೀಕರಣದಂತೆ ಕಾಣುತ್ತದೆ. ಈ ಇಬ್ಬರೂ ಕಟ್ಟಲು ಬಯಸಿದ ಆರೋಗ್ಯಪೂರ್ಣ, ಮಾನವೀಯ, ಸ್ವಾವಲಂಬಿ ಸಮುದಾಯದ ಸಮಗ್ರ ಕಲ್ಪನೆಯೊಂದು 12ನೇ ಶತಮಾನದಲ್ಲಿಯೇ ಕಂಡುಬಂದಿದೆ ಎಂದರು.

ಬೇಲಿ ಮಠದ ಶಿವರುದ್ರ ಮಹಾಸ್ವಾಮೀಜಿ ಮಾತನಾಡಿ, ಕಾಯಕ ಸಂಸ್ಕೃತಿಯನ್ನು ಜಗತ್ತಿಗೆ ತೋರಿಸಿಕೊಟ್ಟ ಮಹಾನ್‌ ಪರಂಪರೆ ಶರಣ ಪರಂಪರೆಯಾಗಿದೆ. ದಾಸೋಹ, ಸಹಪಂಕ್ತಿ ಬೋಜನದ ಮೂಲಕ ಜಾತ್ಯತೀತ ತತ್ವವನ್ನು ಜನರನ್ನು ತಲುಪಿಸುವಲ್ಲಿ 12ನೇ ಶತಮಾನದಲ್ಲಿ ಬಸವಾದಿ ಶರಣರು ಪ್ರಾರಂಭಿಸಿದ ಚಳವಳಿ ಇಂದಿಗೂ ಪ್ರಸ್ತುತವಾಗಿದೆ ಎಂದರು.

ನಿವೃತ್ತ ಜಿಲ್ಲಾಧಿಕಾರಿ ಡಾ.ಸಿ.ಸೋಮಶೇಖರ್‌ ಮಾತನಾಡಿ, ಸಮಾಜದ ಭದ್ರತೆಗೆ ತಳಹದಿಯಾಗಿ ಶರಣ ಸಾಹಿತ್ಯ ನಿಂತಿದೆ. ಆರೋಗ್ಯಕರ ಸಮಾಜ ನಿರ್ಮಿಸಲು ವಚನಗಳು ದಾರಿದೀಪವಾಗಿವೆ. ಸಮಾಜದಲ್ಲಿನ ಅಂಕುಡೊಂಕುಗಳನ್ನು ತಿದ್ದಿ ಸಮಸಮಾಜ ನಿರ್ಮಿಸಲು ಶರಣ ಸಾಹಿತ್ಯದ ಮೂಲಕ ಸಾಧ್ಯ ಎಂದರು.

ಶಾಸಕ ಬಿ.ಶಿವಣ್ಣ ಮಾತನಾಡಿ, ಎಲ್ಲ ಜಾತಿಗಳಿಗೂ ಸಮಾನ ಸ್ಥಾನ ಕಲ್ಪಿಸಿಕೊಟ್ಟ ಹೆಗ್ಗಳಿಕೆ ಶರಣರಿಗೆ ಸಲ್ಲುತ್ತದೆ. ಅನುಭವ ಮಂಟಪದ ಮೂಲಕ ಪ್ರಜಾಪ್ರಭುತ್ವದ ಚಿಂತನೆಗಳನ್ನು 12ನೇ ಶತಮಾನದಲ್ಲಿಯೇ ಅಲ್ಲಮಪ್ರಭು, ಬಸವಣ್ಣನವರು ಸಮರ್ಥವಾಗಿ ರೂಪಿಸಿದರು. ಆನೇಕಲ್‌ನಲ್ಲಿ ಶರಣ ಸಾಹಿತ್ಯ ಸಮ್ಮೇಳನ ಆಯೋಜಿಸುವ ಮೂಲಕ ಜನರಲ್ಲಿ ಜಾಗೃತಿ ಮೂಡಿಸಲು ವೇದಿಕೆ ಕಲ್ಪಿಸಲಾಗಿದೆ ಎಂದರು.

ಆನೇಕಲ್‌ನಲ್ಲಿ ಶರಣ ಸಾಹಿತ್ಯ ಪರಿಷತ್‌ನ ಚಟುವಟಿಕೆಗಳನ್ನು ನಡೆಸುವ ಸಲುವಾಗಿ ಸ್ಥಳವೊಂದನ್ನು ಗುರುತಿಸಿಕೊಡುವುದಾಗಿ ತಿಳಿಸಿದರು.

ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್‌ ಅಧ್ಯಕ್ಷ ಅಪ್ಪಾರಾವ್‌ ಅಕ್ಕೋಣಿ ಭಾವ-ಲಿಂಗಭಾವ ಎಂಬ ವಚನಗಳ ಪುಸ್ತಕವನ್ನು ಬಿಡುಗಡೆ ಮಾಡಿದರು.

ವರ್ತಮಾನಕ್ಕೆ ಸಲ್ಲುವ ವಚನಕಾರರು ಎಂಬ ವಿಷಯದ ಬಗ್ಗೆ ಪ್ರೊ.ಎಲ್‌.ಜಿ.ಮೀರಾ ಮತ್ತು ಡಾ.ಅನ್ನದಾನೀಶ್‌ ವಿಷಯ ಮಂಡನೆ ಮಾಡಿದರು. ಎಚ್.ಎಸ್‌.ನಂಜಪ್ಪ ಅವರು ವಿಚಾರ ಸಂಕಿರಣದ ಅಧ್ಯಕ್ಷತೆ ವಹಿಸಿದ್ದರು. ಕದಳಿ ವೇದಿಕೆಯ ಪ್ರಧಾನ ಸಂಚಾಲಕಿ ಪ್ರೇಮಸೋಮಸುಂದರ್‌ ಉದ್ಘಾಟಿಸಿದರು. ಮಂಜುಳ ನೀಲಕಂಠಯ್ಯ ಅಧ್ಯಕ್ಷತೆ ವಹಿಸಿದ್ದರು. ವಚನಗಾಯನ, ವಚನರೂಪಕ-ನೃತ್ಯ ನಡೆಯಿತು. ಜಾನಪದ ಕಲಾತಂಡಗಳೊಂದಿಗೆ ಸಮ್ಮೇಳನಾಧ್ಯಕ್ಷರ ಮೆರವಣಿಗೆ ನಡೆಯಿತು.

ಸರ್ಪಭೂಷಣ ಮಠದ ಮಲ್ಲಿಕಾರ್ಜುನ ಮಹಾಸ್ವಾಮೀಜಿ, ದೊಡ್ಡಮರಳವಾಡಿ ಮಠದ ಮೃತ್ಯಂಜಯ ಶ್ರೀ, ಗುಮ್ಮಳಾಪುರ ಶಿವಾನಂದ ಶಿವಾಚಾರ್ಯ ಸ್ವಾಮೀಜಿ, ನಾಗಸಂದ್ರ ಮಠದ ಸಿದ್ದಲಿಂಗ ಮಹಾಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು.

ಬೆಂಗಳೂರು ನಗರ ಜಿಲ್ಲಾ ಶರಣ ಸಾಹಿತ್ಯ ಪರಿಷತ್‌ ಅಧ್ಯಕ್ಷ ಕೆ.ವಿ.ನಾಗರಾಜಮೂರ್ತಿ, ತಾಲ್ಲೂಕು ಅಧ್ಯಕ್ಷ ಎಂ.ಶಿವಣ್ಣ, ಆನೇಕಲ್‌ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಕೆ.ಜಯಣ್ಣ, ಪುರಸಭಾ ಸದಸ್ಯೆ ಭಾರತಿ ವಿರೂಪಾಕ್ಷಪ್ಪ, ತಾಲ್ಲೂಕು ಪಂಚಾಯಿತಿ ಸದಸ್ಯೆ ರೇಣುಕಾ ಜಯಣ್ಣ, ಕಲ್ಲುಬಾಳು ಗ್ರಾಮ ಪಂಚಾಯಿತಿ ಅಧ್ಯಕ್ಷ ಬಸವರಾಜು, ಸಾಹಿತಿ ತಾ.ನಂ. ಕುಮಾರಸ್ವಾಮಿ, ಮುಖಂಡರಾದ ಎಚ್‌.ಎಸ್‌.ಬಸವರಾಜು, ಕೆ.ಎಸ್‌.ನಟರಾಜ್‌, ಚಿಕ್ಕರೇವಣ್ಣ, ಕಿರಣ್‌ಪ್ರಕಾಶ್‌, ನೀಲಕಂಠಯ್ಯ, ಹಿನ್ನಕ್ಕಿ ಜಯಣ್ಣ, ಮಹೇಶ್‌, ಆರ್.ಎಂ.ಚಂದ್ರಶೇಖರ್, ಸನತ್‌ಕುಮಾರ್, ಟಿ.ವಿ.ರಾಜಶೇಖರ್ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT