ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕುರಿ, ಮೇಕೆ ಕಳವು: ತನಿಖೆಗೆ ನಿರ್ಲಕ್ಷ್ಯ

ದೊಡ್ಡಬಳ್ಳಾಪುರ ತಾಲ್ಲೂಕು ಕಚೇರಿ ಮುಂಭಾಗ ಸಂತ್ರಸ್ತ ರೈತರ ಪ್ರತಿಭಟನೆ
Last Updated 1 ನವೆಂಬರ್ 2022, 6:04 IST
ಅಕ್ಷರ ಗಾತ್ರ

ದೊಡ್ಡಬಳ್ಳಾಪುರ:ಗ್ರಾಮೀಣ ಪ್ರದೇಶದಲ್ಲಿ ನಡೆಯುತ್ತಿರುವ ಸರಣಿ ಕುರಿ, ಮೇಕೆ ಕಳ್ಳತನ ಪ್ರಕರಣದ ಹಿನ್ನೆಲೆಯಲ್ಲಿ ಸಂತ್ರಸ್ತ ರೈತರಿಗೆ ಸೂಕ್ತ ಪರಿಹಾರ ನೀಡಬೇಕು ಹಾಗೂ ಇಂತಹ ಕಳವು ಪ್ರಕರಣವನ್ನು ಪೊಲೀಸರು ಗಂಭೀರವಾಗಿ ಪರಿಗಣಿಸಿ ತನಿಖೆ ಚುರುಕುಗೊಳಿಸಬೇಕು ಎಂದು ಒತ್ತಾಯಿಸಿ ತಾಲ್ಲೂಕು ಕಚೇರಿ ಆವರಣದಲ್ಲಿ ಕರವೇ(ಪ್ರವೀಣ್ ಕುಮಾರ್ ಶೆಟ್ಟಿ ಬಣ)ಯಿಂದ ಸೋಮವಾರ ಪ್ರತಿಭಟನೆ ನಡೆಯಿತು.

ನಾವು ರೈತನ ಮಿತ್ರ ನಮಗೆ ರಕ್ಷಣೆ ನೀಡಿ, ಕಳ್ಳರಿಂದ ನಮ್ಮನ್ನು ರಕ್ಷಿಸಿ ಎನ್ನುವ ಫಲಕ ಹೊತ್ತ ಕುರಿ, ಮೇಕೆಗಳೊಂದಿಗೆ ರೈತರು ಆಗಮಿಸಿ ಘೋಷಣೆ ಕೂಗಿದರು.

ಕರವೇ ರಾಜ್ಯ ಪ್ರಧಾನ ಕಾರ್ಯದರ್ಶಿ ರಾಜಘಟ್ಟ ರವಿ ಮಾತನಾಡಿ, ತಾಲ್ಲೂಕಿನ ಹಲವಾರು ಗ್ರಾಮಗಳಲ್ಲಿ ಕುರಿಗಳನ್ನು ರಾತ್ರೋರಾತ್ರಿ ಕಳ್ಳರು ದೋಚಿಕೊಂಡು ಹೋಗುತ್ತಿದ್ದಾರೆ. ಕಳವು ಪ್ರಕರಣಗಳು ವರದಿಯಾಗುತ್ತಿದ್ದರೂ ಇದುವರೆವಿಗೂ ಒಂದೂ ಪ್ರಕರಣ ಪತ್ತೆಯಾಗಿಲ್ಲ
ಎಂದು ದೂರಿದರು.

ಕುರಿ ಸಾಕಾಣಿಕೆಯನ್ನೇ ಮುಖ್ಯ ಕಸುಬಾಗಿಸಿಕೊಂಡಿದ್ದ ರೈತರ ಬದುಕು ಬೀದಿಗೆ ಬಿದ್ದಿದೆ. ಲಕ್ಷಾಂತರ ರೂಪಾಯಿ ಕಳೆದುಕೊಂಡು ಕಣ್ಣೀರಿಡುತ್ತಿದ್ದಾರೆ. ಮುಂದಿನ ಜೀವನ ನಿರ್ವಹಣೆ ಬಹಳ ಕಷ್ಟಕರವಾಗಿದೆ. ರೈತರು ಆತ್ಮಹತ್ಯೆ ಮಾಡಿಕೊಂಡ ನಂತರ ಪರಿಹಾರ ನೀಡುವ ಬದಲು ಸಂಕಷ್ಟದಲ್ಲಿರುವ ರೈತರ ನೆರವಿಗೆ ತಾಲ್ಲೂಕು ಆಡಳಿತ ಬರಬೇಕಿದೆ. ಶಾಸಕರು ಹಾಗೂ ತಹಶೀಲ್ದಾರ್ ಅವರು ಕೂಡಲೇ ಪಶುಪಾಲನೆ ಇಲಾಖೆ, ಪೊಲೀಸ್ ಇಲಾಖೆಯೊಂದಿಗೆ ಸಭೆ ನಡೆಸಿ ರೈತರಿಗೆ ನ್ಯಾಯ ದೊರಕಿಸಬೇಕು ಎಂದು ಒತ್ತಾಯಿಸಿದರು.

ಕರವೇ ತಾಲ್ಲೂಕು ಘಟಕದ ಅಧ್ಯಕ್ಷ ಹಮಾಮ್ ವೆಂಕಟೇಶ್ ಮಾತನಾಡಿ, ತಾಲ್ಲೂಕಿನ ರಾಜಘಟ್ಟ, ಕೋಡಿಹಳ್ಳಿ, ಹಾಡೋನಹಳ್ಳಿ, ಸೊಣ್ಣಮಾರನಹಳ್ಳಿಯಲ್ಲಿ ಒಂದೇ ಮಾದರಿಯಲ್ಲಿ ನೂರಾರು ಕುರಿಗಳನ್ನು ಕಳವು ಮಾಡಲಾಗಿದೆ. ದೊಡ್ಡಬೆಳವಂಗಲ ಠಾಣೆಯಲ್ಲಿ ಕುರಿ ಕಳವಿನ ಬಗ್ಗೆ ರೈತರಿಂದ ದೂರು ಸ್ವೀಕರಿಸುತ್ತಿಲ್ಲ. ಗ್ರಾಮಾಂತರ ಠಾಣೆಯಲ್ಲಿ ದೂರು ದಾಖಲಿಸಿದರೂ ಕಳ್ಳರು ಮಾತ್ರ ಇದುವರೆಗೂ ಪತ್ತೆಯಾಗಿಲ್ಲ ಎಂದು ದೂರಿದರು.

ರೈತರಿಂದ ಮನವಿ ಪತ್ರ ಸ್ವೀಕರಿಸಿದ ತಹಶೀಲ್ದಾರ್ ಮೋಹನಕುಮಾರಿ, ಜಿಲ್ಲಾಧಿಕಾರಿ ಅವರ ಗಮನಕ್ಕೆ ತಂದು ಸೂಕ್ತ ಪರಿಹಾರ ಕಲ್ಪಿಸಲಾಗುವುದು ಎಂದು ಭರವಸೆ ನೀಡಿದರು.

ಪ್ರತಿಭಟನೆಯಲ್ಲಿ ಕರವೇ ಪ್ರಧಾನ ಕಾರ್ಯದರ್ಶಿ ಎಸ್.ಎನ್. ವೇಣು, ಖಜಾಂಚಿ ಆನಂದ್ ಕುಮಾರ್, ಕಾರ್ಯದರ್ಶಿ ಜೋಗಹಳ್ಳಿ ಅಮ್ಮು, ಕಾನೂನು ಸಲಹೆಗಾರ ಆನಂದ, ನಗರ ಘಟಕದ ಅಧ್ಯಕ್ಷ ಶ್ರೀನಗರ ಬಶೀರ್, ಕಾರ್ಯಕರ್ತರಾದ ಘಾಟಿ ತಿಮ್ಮರಾಜು, ರವಿ, ಸೂರಿ, ರಘುನಂದನ್, ನವೀನ್, ಅಯ್ಯಪ್ಪ ಸೇರಿದಂತೆ ಸಂತ್ರಸ್ತ ರೈತರಾದ ಚಿಕ್ಕಆಂಜಿನಪ್ಪ, ಚಂದ್ರಪ್ಪ, ಸುಬ್ರಮಣಿ, ಕಾರ್ತಿಕ್, ಮುನಿರಾಜು ಸೇರಿದಂತೆ ರೈತರು ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT