ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆನೇಕಲ್: ಕಿರು ಜಲಾಶಯ ಲೋಕಾರ್ಪಣೆ

ಚೂಡೇನಹಳ್ಳಿ ಬಳಿ ಚೆಕ್‌ ಡ್ಯಾಂ ನಿರ್ಮಾಣಕ್ಕೆ ಸಿಎಸ್‌ಆರ್‌ ನಿಧಿ ಬಳಕೆ
Last Updated 22 ಜುಲೈ 2022, 5:34 IST
ಅಕ್ಷರ ಗಾತ್ರ

ಆನೇಕಲ್:ತಾಲ್ಲೂಕಿನ ವಣಕನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಚೂಡೇನಹಳ್ಳಿ ಸಮೀಪ 1,050 ಎಕರೆ ಜಲಾನಯನಪ್ರದೇಶ ಹೊಂದಿರುವ ಪರ್ಲ್‌ ವ್ಯಾಲಿ ಜಲಾಶಯ ಮತ್ತು ನಾಲ್ಕು ಚೆಕ್‌ ಡ್ಯಾಂಗಳನ್ನು ಕಾಂಟಿನೆಂಟಲ್‌ ಕಂಪನಿ ಮತ್ತು ಯುನೈಟೆಡ್‌ ವೇ ಬೆಂಗಳೂರು ಕಂಪನಿಯ ಸಿಎಸ್‌ಆರ್‌ ನಿಧಿಯಡಿ ನಿರ್ಮಿಸಲಾಗಿದ್ದು ಗುರುವಾರ ಲೋಕಾರ್ಪಣೆಗೊಳಿಸಲಾಯಿತು.

ನೀರಿನ ಸಂರಕ್ಷಣೆ, ಸುಸ್ಥಿರ ಅಭಿವೃದ್ಧಿಯನ್ನು ಗುರಿಯಾಗಿಸಿಕೊಂಡು ಈ ಯೋಜನೆಯಲ್ಲಿ ಕಿರು ಜಲಾಶಯ, ನಾಲ್ಕು ಚೆಕ್‌ ಡ್ಯಾಂ ನಿರ್ಮಿಸಲಾಗಿದೆ. ಇದರಿಂದ ನೀರು ಹರಿದು ಹೋಗುವುದನ್ನು ತಡೆಯುವುದು, ಪ್ರವಾಹ ನಿಯಂತ್ರಣ, ಮಳೆ ನೀರು ಸಂಗ್ರಹಕ್ಕೆ ಒತ್ತು, ಸಸ್ಯ ಮತ್ತು ಪ್ರಾಣಿಗಳಿಗೆ ನೀರು ಒದಗಿಸುವುದು, ಕಣಿವೆಯಲ್ಲಿ ಅಂತರ್ಜಲ ಮರುಪೂರಣಕ್ಕೆ ಒತ್ತು ನೀಡಲಾಗಿದೆ ಎಂದುಕಾಂಟಿನೆಂಟಲ್‌ ಇಂಡಿಯಾ ಕಂಪನಿ ಅಧ್ಯಕ್ಷ ಪ್ರಶಾಂತ್‌ ದೊರೆಸ್ವಾಮಿ ತಿಳಿಸಿದರು.

ನೈಸರ್ಗಿಕ ಸಸ್ಯವರ್ಗ ಮತ್ತು ಜೀವವೈವಿಧ್ಯದ ಹೆಚ್ಚಳ, ಮಾನವ-ಸಸ್ಯ-ಪ್ರಾಣಿಗಳ ಜೀವವೈವಿಧ್ಯತೆಯ ಸಕಾರಾತ್ಮಕ ಪರಿಣಾಮ ಉಂಟು ಮಾಡುವ ನಿಟ್ಟಿನಲ್ಲಿ ವೈಜ್ಞಾನಿಕವಾಗಿ ಚೆಕ್‌ ಡ್ಯಾಂಗಳು ಮತ್ತು ಜಲಾಶಯ ನಿರ್ಮಿಸಲಾಗಿದೆ ಎಂದರು.

ಸಮುದಾಯದ ಅಗತ್ಯಗಳಿಗೆ ನೀರು ಒದಗಿಸುವ ನಿಟ್ಟಿನಲ್ಲಿ ಈ ಯೋಜನೆ ಅತ್ಯಂತ ಉಪಯುಕ್ತ ಯೋಜನೆಯಾಗಿದೆ. ಫಲಾನುಭವಿಗಳು ಇದರ ಸದುಪಯೋಗ ಮಾಡಿಕೊಳ್ಳಬೇಕು. ಜೊತೆಗೆ, ವಾರ್ಷಿಕ ನಿರ್ವಹಣೆಯನ್ನು ಸುಗಮವಾಗಿ ಮಾಡುವ ಮೂಲಕ ಯೋಜನೆಗೆ ಬಲ ನೀಡಬೇಕು ಎಂದು ಹೇಳಿದರು.

ಯುನೈಟೆಡ್‌ ವೇ ಬೆಂಗಳೂರು ಕಂಪನಿಯ ಸಿಇಒ ರಾಜೇಶ್‌ ಕೃಷ್ಣನ್‌ ಮಾತನಾಡಿ, ಸಿಎಸ್‌ಆರ್‌ ಯೋಜನೆಗಳು ಶಾಲೆ, ಆಸ್ಪತ್ರೆ ಸೇರಿದಂತೆ ವಿವಿಧ ಕ್ಷೇತ್ರಗಳಿಗೆ ನೆರವು ನೀಡುವುದರ ಜೊತೆಗೆ ಸಮುದಾಯದ ಸಮಗ್ರ ಅಭಿವೃದ್ಧಿಗೆ ನೆರವು ನೀಡುವ ಯೋಜನೆಗಳಿಗೆ ಅನುಷ್ಠಾನಗೊಳಿಸಬೇಕೆಂಬ ನಿಟ್ಟಿನಲ್ಲಿ ಪರ್ಲ್‌ ವ್ಯಾಲಿ ಜಲಾಶಯ ಯೋಜನೆಯನ್ನು ಕೈಗೊಳ್ಳಲಾಗಿದೆ ಎಂದರು.

ಇದರಿಂದ ಅಂತರ್ಜಲ ಹೆಚ್ಚಳ, ಕುಡಿಯುವ ನೀರಿನ ಸಮಸ್ಯೆ ನಿವಾರಣೆ, ಕೃಷಿ ಚಟುವಟಿಕೆಗಳಿಗೆ ನೀರಾವರಿ ಸೌಲಭ್ಯ ಕಲ್ಪಿಸಲು ಮತ್ತು ಮುತ್ಯಾಲಮಡುವು ಪ್ರದೇಶದ ಪ್ರಾಣಿಗಳ ಆವಾಸಕ್ಕೆ ಪೂರಕವಾಗಿ ನೀರು ದೊರೆಯುವಂತೆ ಯೋಜನೆ ರೂಪಿಸಲಾಗಿದೆ ಎಂದು
ವಿವರಿಸಿದರು.

ಯೋಜನಾ ಪ್ರದೇಶದಲ್ಲಿ 1,600ಕ್ಕೂ ಹೆಚ್ಚು ವಿವಿಧ ಜಾತಿಯ ಗಿಡಗಳನ್ನು ನೆಡಲಾಗಿದೆ. ಈ ಮೂಲಕ ಪರಿಸರ ಸ್ನೇಹಿ ವಾತಾವರಣ ನಿರ್ಮಿಸಲು ಕಂಪನಿಯ ಸಿಎಸ್‌ಆರ್‌ ನಿಧಿ ಬಳಕೆ ಬಳಸಲಾಗಿದೆ. ದುಡಿಯುವ ಒಂದು ಭಾಗ ನೀರಿಗೆ ವೆಚ್ಚ ಮಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಯೋಜನೆಯಿಂದ ಸುತ್ತಮುತ್ತಲಿನ ಪ್ರದೇಶದಲ್ಲಿ ಅಂತರ್ಜಲ ಹೆಚ್ಚಳದಿಂದ ನೀರಿನ ಸಮಸ್ಯೆ ನಿವಾರಣೆಯಾಗಲಿದೆ ಎಂದರು.

ವಿಧಾನ ಪರಿಷತ್‌ ಸದಸ್ಯ ಗೋಪಿನಾಥ ರೆಡ್ಡಿ, ಯುನೈಟೆಡ್‌ ವೇ ಬೆಂಗಳೂರು ಕಂಪನಿಯ ಡೇವಿಡ್‌, ಸಿಎಸ್‌ಆರ್‌ ಮುಖ್ಯಸ್ಥೆ ದೀಪಾ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಸಂಗಪ್ಪ, ಉಪ ಕಾರ್ಯದರ್ಶಿ ನೋಮೇಶ್‌ಕುಮಾರ್, ಗ್ರಾಮ ಪಂಚಾಯಿತಿ ಅಧ್ಯಕ್ಷ ಆರ್‌. ಶ್ರೀನಿವಾಸ್‌, ಉಪಾಧ್ಯಕ್ಷೆ ಸವಿತಾ ಸನತ್‌ಕುಮಾರ್‌, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಗಂಗಾಧರ್‌, ಸದಸ್ಯರಾದ ಆರ್‌. ದೇವರಾಜು, ಕಾರ್ತಿಕ್‌, ಗಿರೀಶ್‌, ಶ್ರೀನಿವಾಸರೆಡ್ಡಿ, ಚಂದ್ರಾರೆಡ್ಡಿ, ಸರಸ್ವತಿ ಅಶ್ವಥ್‌, ಚೈತ್ರ ಬಾಬು, ವಿ.ವಿ. ನಾರಾಯಣಸ್ವಾಮಿ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT