ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಡಿಎಪಿ ಗೊಬ್ಬರ ಕೊರತೆ: ರೈತರ ಆಕ್ರೋಶ

ಪೂರೈಕೆಗೆ ಕೃಷಿ ಇಲಾಖೆ ನಿರ್ಲಕ್ಷ್ಯ: ಆರೋಪ
Last Updated 28 ಆಗಸ್ಟ್ 2022, 3:08 IST
ಅಕ್ಷರ ಗಾತ್ರ

ವಿಜಯಪುರ(ಬೆಂ.ಗ್ರಾಮಾಂತರ): ಎರಡು ದಿನಗಳಿಂದ ಮಳೆ ಸುರಿಯುತ್ತಿರುವ ಕಾರಣ ಹೋಬಳಿಯಲ್ಲಿ ಕೃಷಿ ಚಟುವಟಿಕೆ ಗರಿಗೆದರಿದೆ. ಮಳೆಯಿಂದ ಸಂತಸಗೊಂಡಿರುವ ರೈತರು ಬಿತ್ತನೆಗೆ ಸಿದ್ಧತೆ ನಡೆಸಿಕೊಳ್ಳುತ್ತಿದ್ದಾರೆ.

ಆದರೆ, ರೈತರಿಗೆ ಅಗತ್ಯವಾಗಿರುವ ಡಿಎಪಿ ರಸಗೊಬ್ಬರ ಸಿಗದೆ ಅನಿವಾರ್ಯವಾಗಿ 20:20:13 ಗೊಬ್ಬರದ ಮೊರೆ ಹೋಗಬೇಕಾಗಿದೆ ಎಂದು ತಿಮ್ಮಹಳ್ಳಿಯ ರೈತ ಶ್ರೀರಾಮಪ್ಪ ಬೇಸರ ತೋಡಿಕೊಂಡರು.

ರೈತರಿಗೆ ಬಿತ್ತನೆಬೀಜ ಮತ್ತು ರಸಗೊಬ್ಬರದ ಕೊರತೆ ಉಂಟಾಗದಂತೆ ಅಗತ್ಯ ಕ್ರಮವಹಿಸುವುದಾಗಿ ಸರ್ಕಾರ ಹೇಳುತ್ತದೆ. ನಾವು ಹಲವು ಅಂಗಡಿಗಳಿಗೆ ಅಲೆದಾಡಿದರೂ ಡಿಎಪಿ ಸಿಕ್ಕಿಲ್ಲ. ಕೆಲವು ಅಂಗಡಿಗಳಲ್ಲಿ ಡಿಎಪಿ ಐಪಿಎಲ್ ಇದೆ. ಮೂಟೆಗೆ ₹ 1,300 ನೀಡಬೇಕು. ಅದರ ಜೊತೆಯಲ್ಲಿ ಅವರು ನೀಡುವ ಟಾನಿಕ್ ಖರೀದಿಸಿದರೆ ಮಾತ್ರ ಡಿಎಪಿ ಮಾರಾಟ ಮಾಡುತ್ತಾರೆ ಎಂದು ದೂರಿದರು.

₹ 300 ಕೊಟ್ಟು ಟಾನಿಕ್ ಖರೀದಿ ಮಾಡದಿದ್ದರೆ ರಸಗೊಬ್ಬರ ನೀಡುವುದಿಲ್ಲ. ಟಾನಿಕ್ ತೆಗೆದುಕೊಂಡು ಬಂದರೆ ನಮಗೇನು ಉಪಯೋಗವಿಲ್ಲ. ಡಿಎಪಿ ಬಿಟ್ಟು ಬೇರೆ ಗೊಬ್ಬರ ಹಾಕಿದರೆ ತೆನೆಕಚ್ಚುವ ಹಂತದಲ್ಲಿ ಪುನಃ ಗೊಬ್ಬರ ನೀಡಬೇಕಾಗುತ್ತದೆ ಎನ್ನುತ್ತಾರೆ ಅವರು.

ಬಿತ್ತನೆ ಸಮಯದಲ್ಲಿ ರಸಗೊಬ್ಬರಕ್ಕೆ ಬೇಡಿಕೆ ಸೃಷ್ಟಿಯಾಗುವುದು ಸರ್ವೆ ಸಾಮಾನ್ಯ. ಅದರಲ್ಲೂ ಹೊಲಗಳಲ್ಲಿ ಬಿತ್ತನೆ ಮಾಡಲು ಡಿಎಪಿ ಬೇಕೇ ಬೇಕು. ರೈತರಿಗೆ ಬಿತ್ತನೆ ಸಮಯದಲ್ಲಿ ಈ ಸಮಸ್ಯೆ ಪ್ರತಿವರ್ಷ ಎದುರಾಗುತ್ತದೆ. ಈ ಬಾರಿಯೂ ಸಮಸ್ಯೆ ಸೃಷ್ಟಿಯಾಗಿದೆ ಎಂದುರೈತ ಆಂಜಿನಪ್ಪ ತಿಳಿಸಿದರು.

ಪ್ರತಿವರ್ಷ ಡಿಎಪಿಗೆ ಎಷ್ಟು ಬೇಡಿಕೆ ಬರುತ್ತದೆ ಎನ್ನುವುದು ಕೃಷಿ ಅಧಿಕಾರಿಗಳು ಹಾಗೂ ಮಾರಾಟಗಾರರಿಗೆ ಗೊತ್ತಿದ್ದರೂ ಅವರು ರೈತರ ಬೇಡಿಕೆಗೆ ತಕ್ಕಂತೆ ಪೂರೈಕೆ ಮಾಡುತ್ತಿಲ್ಲ. ಇದರಿಂದ ಬಿತ್ತನೆ ಸಮಯದಲ್ಲಿ ರೈತರು ದುಬಾರಿ ಖರ್ಚು ಮಾಡಬೇಕಾದಂತಹ ಸ್ಥಿತಿ ನಿರ್ಮಾಣವಾಗಿದೆ ಎಂದು ಬೇಸರ ತೋಡಿಕೊಂಡರು.

ಮಳೆ ಬಾರದ ಕಾರಣ ಬಿತ್ತನೆ ಕಾರ್ಯ ತಡವಾಗಿ ಶುರುವಾಗಿದೆ. ತಾಲ್ಲೂಕಿನಲ್ಲಿ ಪೂರ್ಣ ಪ್ರಮಾಣದಲ್ಲಿ ಬಿತ್ತನೆ ಕಾರ್ಯವಾಗಿಲ್ಲದ ಕಾರಣ ರಸಗೊಬ್ಬರಕ್ಕಾಗಿ ರೈತರು ಅಂಗಡಿಗಳಿಗೆ ಎಡತಾಕುತ್ತಿದ್ದಾರೆ. ರೈತರ ಬೇಡಿಕೆಗೆ ಅನುಸಾರ ಡಿಎಪಿ ಸಿಗದೆ ಬದಲಿ ರಸಗೊಬ್ಬರ ಬಳಸಿ ಬಿತ್ತನೆ ಮಾಡುತ್ತಿದ್ದೇವೆ ಎಂದುರೈತ ಲಕ್ಷ್ಮಣಮೂರ್ತಿ ಹೇಳುತ್ತಾರೆ.

ಇನ್ನೊಂದೆಡೆ ಕೇಂದ್ರ ಸರ್ಕಾರ ಒಂದು ಡಿಎಪಿ ಮೂಟೆಯನ್ನು ₹ 1,200 ಮಾರಬೇಕೆಂದು ಆದೇಶ ಹೊರಡಿಸಿದೆ. ಆದರೂ, ಒಂದು ಮೂಟೆಗೆ ₹ 1,500 ನಿಗದಿಪಡಿಸಿ ಮಾರಾಟ ಮಾಡುತ್ತಿದ್ದಾರೆ.

ಬೆಲೆ ವಿಚಾರದಲ್ಲಿ ಸರ್ಕಾರ ಕಟ್ಟುನಿಟ್ಟಿನ ಆದೇಶ ಹೊರಡಿಸಿರುವುದರಿಂದ ಹೆಚ್ಚಿನ ದಾಸ್ತಾನು ತರಿಸಿಕೊಳ್ಳುತ್ತಿಲ್ಲ ಎಂದು ಕೆಲವು ವ್ಯಾಪಾರಿಗಳು ಹೇಳುತ್ತಾರೆ.

ಹೊಲ ಸೇರಿದಂತೆ ಹೂವಿನ ಬೆಳೆ, ಹಿಪ್ಪುನೇರಳೆ, ತರಕಾರಿ ಬೆಳೆಗಳಿಗೂ ಡಿಎಪಿಯನ್ನೇ ರೈತರು ಹೆಚ್ಚಾಗಿ ಬಳಕೆ ಮಾಡುತ್ತಾರೆ. ಆದರೂ, ಬೇಡಿಕೆಗೆ ತಕ್ಕಂತೆ ಗೊಬ್ಬರ ಪೂರೈಕೆಯಾಗುತ್ತಿಲ್ಲ. ಅಧಿಕಾರಿಗಳು ಮಾತ್ರ ಬೇಡಿಕೆಗೆ ತಕ್ಕಂತೆ ಸರಬರಾಜು ಆಗಲಿದೆ. ಯಾವುದೇ ಸಮಸ್ಯೆಯಾಗದು ಎನ್ನುತ್ತಾರೆ.

ಈ ಕುರಿತು ಪ್ರತಿಕ್ರಿಯೆ ಪಡೆಯಲು ಕೃಷಿ ಇಲಾಖೆ ಅಧಿಕಾರಿಗಳನ್ನು ದೂರವಾಣಿ ಮೂಲಕ ಸಂಪರ್ಕಿಸಿದರೂ ಅವರು ಸಂಪರ್ಕಕ್ಕೆ ಸಿಗಲಿಲ್ಲ.

ತಹಶೀಲ್ದಾರ್ ಶಿವರಾಜ್ ಮಾತನಾಡಿ, ರೈತರೆಲ್ಲರೂ ಡಿಎಪಿಯನ್ನೇ ಹೆಚ್ಚಾಗಿ ಬಳಕೆ ಮಾಡುತ್ತಾರೆ. ರಸಗೊಬ್ಬರ ಕೊರತೆಯಾಗದಂತೆ ಕ್ರಮವಹಿಸಲಾಗುವುದು ಎಂದು
ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT