ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೇಷ್ಮೆಗೂಡು ಮಾರುಕಟ್ಟೆ ವಹಿವಾಟು ಶುರು

ಸಾಮಾಜಿಕ ಅಂತರ ಕಾಪಾಡಲು ಗಮನಹರಿಸದ ಜನರು
Last Updated 3 ಏಪ್ರಿಲ್ 2020, 10:40 IST
ಅಕ್ಷರ ಗಾತ್ರ

ವಿಜಯಪುರ: ರೇಷ್ಮೆಗೂಡು ಮಾರುಕಟ್ಟೆ ಏ.2ರಿಂದ ಪುನಃ ಆರಂಭವಾಗಿದ್ದು, 200 ಕ್ಕೂ ಹೆಚ್ಚು ಮಂದಿ ಸೇರಿದ್ದರು. ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಕಡೆಗೆ ಜನರು ಗಮನಹರಿಸಲಿಲ್ಲ.

ಮಾರುಕಟ್ಟೆಯ ಅಧಿಕಾರಿಗಳು ಪ್ರವೇಶದ್ವಾರದಲ್ಲೆ ನಿಂತು, ಒಳಬರುವ ರೈತರು ಹಾಗೂ ನೂಲುಬಿಚ್ಚಾಣಿಕೆದಾರರಿಗೆ ಸ್ಯಾನಿಟೈಸರ್ ಮೂಲಕ ಕೈಗಳನ್ನು ಶುಚಿಗೊಳಿಸಿ, ಮಾಸ್ಕ್ ಧರಿಸಿರುವವರನ್ನು ಮಾತ್ರವೇ ಒಳಬಿಡುತ್ತಿದ್ದರು.ಇಲ್ಲಿನ ರೇಷ್ಮೆಗೂಡು ಮಾರುಕಟ್ಟೆಗೆ ಸುತ್ತಮುತ್ತಲಿನ ಹಳ್ಳಿಗಳಿಂದ ಮಾತ್ರವಲ್ಲದೆ ಕೋಲಾರ, ಎಚ್.ಕ್ರಾಸ್, ಕುಪ್ಪಂ, ಸೇರಿದಂತೆ ಅನೇಕ ಭಾಗಗಳಿಂದ ರೈತರು ಬರುತ್ತಾರೆ. ಮಾರುಕಟ್ಟೆಗಳಲ್ಲಿ ಜನಸಂದಣಿ ಹೆಚ್ಚಾಗಿರುವ ಕಾರಣ ಸೋಂಕಿತರು ಯಾರಾದರೂ ಪ್ರವೇಶ ಮಾಡಿದರೆ ಸಮಸ್ಯೆಯಾಗುತ್ತದೆ ಎನ್ನುವ ಕಾರಣದಿಂದಾಗಿ ಮಾರುಕಟ್ಟೆಯನ್ನು ಬಂದ್ ಮಾಡಲಾಗಿತ್ತು. ಈಗ ಮಾರುಕಟ್ಟೆಯಲ್ಲಿ ಹರಾಜು ಪ್ರಕ್ರಿಯೆಗೆ ಅವಕಾಶ ನೀಡಲಾಗಿದೆ. ಸಾಮಾಜಿಕ ಅಂತರ ಕಾಯ್ದುಕೊಳ್ಳದ ಕಾರಣ ರೈತರೂ ಸೇರಿದಂತೆ ನೂಲು ಬಿಚ್ಚಾಣಿಕೆದಾರರಲ್ಲಿ ಆತಂಕ ಮನೆ ಮಾಡಿದೆ.

ಗೂಡಿನ ಲಾಟುಗಳನ್ನು ರೀಲರುಗಳು ಪರಿಶೀಲನೆ ನಡೆಸುತ್ತಾರೆ. ನಿಗದಿತ ಸಮಯದಲ್ಲೆ ಹರಾಜು ನಡೆಯುತ್ತದೆ. ಮೊಬೈಲ್‌ಗಳ ಮೂಲಕ ಬಿಡ್ ಮಾಡಬೇಕಾಗಿರುವುದರಿಂದ ನೂಲುಬಿಚ್ಚಾಣಿಕೆದಾರರು ಗುಂಪು ಗುಂಪಾಗಿ ಗೂಡುಪರಿಶೀಲನೆ ಮಾಡುವುದರಿಂದ ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಸಾಧ್ಯವಾಗುತ್ತಿಲ್ಲ ಎಂದು ನೂಲು ಬಿಚ್ಚಾಣಿಕೆದಾರರೊಬ್ಬರು ತಿಳಿಸಿದರು.

ಸಹಾಯಕ ನಿರ್ದೇಶಕಿ ಗಂಗರತ್ನಮ್ಮ ಮಾತನಾಡಿ, ‘ಈಗಾಗಲೇ ಮಾರುಕಟ್ಟೆಯಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಬಾಕ್ಸ್‌ಗಳನ್ನು ಹಾಕಿಸುತ್ತಿದ್ದೇವೆ. ಮೈಕ್‌ಗಳಲ್ಲೂ ಸೋಂಕಿನ ಕುರಿತು ಜಾಗೃತಿ ಮೂಡಿಸುತ್ತಿದ್ದೇವೆ. ಸ್ಯಾನಿಟೈಸರ್‌ನಿಂದ ಸ್ವಚ್ಚಗೊಳಿಸಿಕೊಳ್ಳುವಂತೆ ಮಾಡಿದ್ದೇವೆ. ಇದು ಬೇರೆ ಮಾರುಕಟ್ಟೆಗಳಿಗಿಂತ ವಿಭಿನ್ನವಾಗಿರುವುದರಿಂದ ಸಾಮಾಜಿಕ ಅಂತರ ಕಾಪಾಡಿಕೊಳ್ಳುವಂತೆ ಮಾಡಲು ಕಷ್ಟವಾಗುತ್ತಿದೆ. ಆದರೂ ಜಾಗೃತಿ ಮೂಡಿಸುತ್ತಿದ್ದೇವೆ’ ಎಂದರು.

ನೂಲು ಬಿಚ್ಚಾಣಿಕೆದಾರ ಬಹದ್ದೂರ್‌ಪಾಷ ಮಾತನಾಡಿ, ನಾವು ಇಲ್ಲಿಂದ ಗೂಡು ಖರೀದಿ ಮಾಡಿಕೊಂಡು ಹೋದರೂ ಪುರಸಭೆಯ ಅಧಿಕಾರಿಗಳು ನೂಲು ಬಿಚ್ಚಾಣಿಕೆ ಮಾಡಲಿಕ್ಕೆ ಅವಕಾಶ ನೀಡುತ್ತಿಲ್ಲ. ಸಾಮಾಜಿಕ ಅಂತರ ಕಾಯ್ದುಕೊಳ್ಳಲಿಕ್ಕೆ ಟೇಬಲ್‌ಗಳನ್ನು ಪ್ರತ್ಯೇಕವಾಗಿ ಜೋಡಿಸಲು ಆಗುತ್ತದೆಯೇ ? ನಮಗೆ ನೂಲು ಬಿಚ್ಚಾಣಿಕೆ ಮಾಡಲು ಅವಕಾಶ ನೀಡಲಿ ಎಂದು ಒತ್ತಾಯಿಸಿದರು.

ನೂಲು ಬಿಚ್ಚಾಣಿಕೆದಾರ ಬಾಬಾಜಾನ್ಮಾತನಾಡಿ, ‘ನಾವು ನೂಲು ಬಿಚ್ಚಾಣಿಕೆ ಮಾಡಿದರೂ ಖರೀದಿ ಮಾಡಿಕೊಳ್ಳುವವರು ಇಲ್ಲ. ಕಳೆದ ವಾರ ಒಂದೇ ದಿನದಲ್ಲಿ ₹ 1 ಸಾವಿರ ನಷ್ಟವಾಗಿದೆ. ಇದುವರೆಗೂ ಮಾರುಕಟ್ಟೆ ಬಂದ್ ಆಗಿದ್ದರಿಂದ ಬಿಚ್ಚಾಣಿಕೆ ಮಾಡಿದ್ದ ನೂಲು ಮಾರಾಟ ಮಾಡಿಲ್ಲದ ಕಾರಣ ಬಂಡವಾಳಕ್ಕೂ ಕಷ್ಟವಾಗಿದೆ. ಅನುಕೂಲಸ್ಥರು ಮಾತ್ರ ನೇರವಾಗಿ ರೈತರಿಂದ ಖರೀದಿ ಮಾಡಿಕೊಂಡು ಬಿಚ್ಚಾಣಿಕೆ ಮಾಡಿಕೊಳ್ಳುತ್ತಿದ್ದಾರೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT