ರೇಷ್ಮೆ ಗೂಡಿನ ಬೆಲೆ ಇಳಿಕೆ: ಆತಂಕ

ಶುಕ್ರವಾರ, ಏಪ್ರಿಲ್ 26, 2019
35 °C

ರೇಷ್ಮೆ ಗೂಡಿನ ಬೆಲೆ ಇಳಿಕೆ: ಆತಂಕ

Published:
Updated:
Prajavani

ವಿಜಯಪುರ: ರೇಷ್ಮೆ ಉದ್ಯಮ ದುಬಾರಿಯಾಗುತ್ತಿದ್ದು, ಇದೇ ಪರಿಸ್ಥಿತಿ ಮುಂದುವರಿದರೆ ಭವಿಷ್ಯದಲ್ಲಿ ಉದ್ಯಮ ಕನಸಿನ ಮಾತಾಗಲಿದೆ ಎಂದು ರೈತ ಮುಖಂಡ ರವಿಪ್ರಕಾಶ್ ಆತಂಕ ವ್ಯಕ್ತಪಡಿಸಿದರು.

ಹಾಲು ಮತ್ತು ರೇಷ್ಮೆ ಈ ಭಾಗದಲ್ಲಿನ ಪ್ರಮುಖ ಉದ್ಯಮಗಳು. ತೋಟಗಾರಿಕೆ ಬೆಳೆಗಳಿಗೆ ನೀರಿಲ್ಲ. ಕೆರೆಗಳು ಬಿರುಕು ಬಿಟ್ಟಿವೆ. ಅಂತರ್ಜಲದ ಮಟ್ಟ 1800 ಅಡಿಗೆ ಹೋಗಿದೆ. ಅಷ್ಟು ಆಳದಿಂದ ನೀರು ಹೊರಗೆ ತೆಗೆಯಬೇಕಾದರೆ ಒಂದು ಕೊಳವೆಬಾವಿಗೆ ಸುಮಾರು ₹8 ಲಕ್ಷ ಖರ್ಚು ಬರಲಿದೆ ಎಂದು ‌ತಿಳಿಸಿದರು.

ರೈತ ರಾಮ್‌ಕುಮಾರ್ ಮಾತನಾಡಿ, ಇಲ್ಲಿನ ಮಾರುಕಟ್ಟೆಗೆ ಬರುತ್ತಿರುವ ಗೂಡಿನ ಲಾಟುಗಳ ಸಂಖ್ಯೆ 119ಕ್ಕೆ ಇಳಿಮುಖವಾಗಿದೆ. ಗೂಡಿನ ಬೆಲೆಯೂ ಕೆ.ಜಿ.ಗೆ ₹500ರಿಂದ ಗರಿಷ್ಠ ₹350 ಕ್ಕೆ ಇಳಿಕೆಯಾಗಿದೆ. ಇದರಿಂದ ರೈತರು ಸಂಕಷ್ಟಕ್ಕೆ ಸಿಲುಕುವಂತಾಗಿದೆ.

ಹಿಪ್ಪುನೇರಳೆ ಸೊಪ್ಪಿನ ಬೆಲೆ ಒಂದು ಮೂಟೆಗೆ ₹ 500 ರೂಪಾಯಿ ಇದೆ. ಆದ್ದರಿಂದ ಸ್ವಂತವಾಗಿಯೇ ಸೊಪ್ಪು ಬೆಳೆದು  ರೇಷ್ಮೆ ಬೆಳೆಯುವ ರೈತರ ಸಂಖ್ಯೆ ಕಡಿಮೆಯಾಗಿದೆ.

ರೈತ ಮುನಿರಾಜು ಮಾತನಾಡಿ, ಸರ್ಕಾರ ಯಾವುದಾದರೂ ಯೋಜನೆಗಳಿಂದ ಈ ಭಾಗಕ್ಕೆ ನೀರು ತರಬೇಕು. ಇಲ್ಲವಾದರೆ ರೈತ ಸಂಕುಲ ಗೂಳೆ ಹೊರಡಬೇಕಾದಂತಹ ಪರಿಸ್ಥಿತಿ ನಿರ್ಮಾಣವಾಗಬಹುದು ಎಂದು ತಿಳಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !