ಶನಿವಾರ, ಡಿಸೆಂಬರ್ 7, 2019
22 °C
ಪುರಾಣ ಪ್ರಸಿದ್ಧ ಗುಮ್ಮಳಾಪುರ ಗೌರಿದೇವಿ ಆರಾಧನೆ * ಭಕ್ತರ ನೆಚ್ಚಿನ ತಾಣ

ಆನೇಕಲ್ | ವರ್ಷದಲ್ಲಿ ಒಂದೇ ಮಾಸ ತೆರೆಯುವ ದೇಗುಲ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಆನೇಕಲ್ : ವರ್ಷದ ಕೆಲ ದಿನಗಳು ಮಾತ್ರ ತೆರೆಯುವ ಇತಿಹಾಸ ಪ್ರಸಿದ್ಧ ಗುಮ್ಮಳಾಪುರದ ಗೌರಿ ದೇವಾಲಯ ಅಪಾರ ಭಕ್ತರನ್ನು ಆಕರ್ಷಿಸುವ ಅಪರೂಪದ ತಾಣ.

ಆನೇಕಲ್‌ನಿಂದ ಸುಮಾರು 6 ಕಿ.ಮೀ ದೂರ ಥಳಿ ರಸ್ತೆಯಲ್ಲಿ ಸಾಗಿದರೆ ತಮಿಳುನಾಡಿನ ಗುಮ್ಮಳಾಪುರ ಎಂಬ ಪ್ರಮುಖ ಶರಣ ಕ್ಷೇತ್ರ ತಲುಪಬಹುದು. ಇಲ್ಲಿಯ ಗೌರಿದೇವಿಮೂರ್ತಿ ಪ್ರತಿಷ್ಠಾಪನೆಯೇ ಅತ್ಯಂತ ವಿಶಿಷ್ಟವಾದುದು. ಗೌರಿಹಬ್ಬದ ದಿನದಂದು ಮೂರ್ತಿ ಪ್ರತಿಷ್ಠಾಪಿಸಲಾಗುತ್ತದೆ. ಈ ಮೂರ್ತಿಯನ್ನು ಗುಮ್ಮಳಾಪುರದ ಹಿರೇಮಠದಲ್ಲಿಯೇ ತಿದ್ದಿ ಸಿದ್ಧಪಡಿಸುವುದು ವಿಶೇಷ. ನಂತರ ಗಣೇಶ ಚತುರ್ಥಿ ದಿನದಂದು ಗುಡಿಯಲ್ಲಿ ಪ್ರತಿಷ್ಠಾಪಿಸಲಾಗುತ್ತದೆ. ಅಂದಿನಿಂದ ಒಂದು ತಿಂಗಳವರೆಗೂ ಮಾತ್ರ ದೇವಾಲಯ ತೆರೆದಿರುತ್ತದೆ.

ಕೈಲಾಸದಿಂದ ತವರು ಮನೆಗೆ ಬರುವ ಗೌರಿಯನ್ನು ಭೂಲೋಕದಲ್ಲಿ ಭಕ್ತರು ತವರು ಮನೆಗೆ ಬಂದ ಮಗಳೆಂಬಂತೆ ಪ್ರೀತಿ ಭಕ್ತಿಯಿಂದ ಪೂಜಿಸಿ ಆರಾಧಿಸಿವುದು ಧಾರ್ಮಿಕ ನಂಬಿಕೆ. ಮಡಿಲಕ್ಕಿ ತುಂಬಲು ಬೆಂಗಳೂರು, ಕನಕಪುರ, ತುಮಕೂರು, ದೊಡ್ಡಬಳ್ಳಾಪುರ, ತಮಿಳುನಾಡಿನ ಹೊಸೂರು, ಡೆಂಕಣಿಕೋಟೆ, ಥಳಿ ಸೇರಿದಂತೆ ವಿವಿಧ ಭಾಗಗಳಿಂದ ಮಹಿಳೆಯರು ಬಂದು ಪಾಲ್ಗೊಳ್ಳಲಿದ್ದಾರೆ. ಹೊಸದಾಗಿ ಮದುವೆಯಾದ ದಂಪತಿ ತಪ್ಪದೇ ಬಂದು ಪೂಜೆ ಸಲ್ಲಿಸುವುದು ಈ ಭಾಗದ ಸಂಪ್ರದಾಯ.

ಒಂದು ತಿಂಗಳಕಾಲ ಗೌರಿ ದೇವಿ ಆರಾಧಿಸುವ ಭಕ್ತರು ಜಾತ್ರೆ ದಿನದಂದು ಗೌರಮ್ಮನ ಕೆರೆವರೆಗೂ ಗಣಪತಿ ಮತ್ತು ಗೌರಿಯ ಪ್ರತ್ಯೇಕ ತೇರುಗಳನ್ನು ನಿರ್ಮಿಸಿ ಉತ್ಸವದೊಂದಿಗೆ ಕೊಂಡೊಯ್ದು ವಿಸರ್ಜಿಸುವುದು ಪದ್ಧತಿ. ತೇರಿನ ತಯಾರಿಯೇ ಒಂದು ವಿಶಿಷ್ಟ. ಗೌರಿ ಮತ್ತು ಗಣಪತಿ ತೇರುಗಳನ್ನು ಬಿದರಿನಿಂದ ಸಿದ್ಧಪಡಿಸಲಾಗುತ್ತದೆ. ಎಲ್ಲೆಡೆ ತೇರುಗಳನ್ನು ಎಳೆದರೆ ಇಲ್ಲಿ ತೇರುಗಳನ್ನು ನೂರಾರು ಭಕ್ತರು ಹೊತ್ತು ವೇಗವಾಗಿ ಓಡುತ್ತಾ ಕೊಂಡೊಯ್ಯುವುದೇ ರೋಮಾಂಚನ.

ತೇರಿನ ಉತ್ಸವ ಕೆರೆಗೆ ತೆರಳುವ ಮುನ್ನ ಗುಮ್ಮಳಾಪುರದ ಹಿರೇಮಠದ ಶ್ರೀಗಳು ದೇವಿಗೆ ಮಡಿಲಕ್ಕಿ ಸಲ್ಲಿಸುವುದರೊಂದಿಗೆ ಆಯಾ ವರ್ಷದ ಗೌರಿ ಜಾತ್ರೆ ಮುಕ್ತಾಯವಾಗುತ್ತದೆ. ಒಂದು ಮಾಸವಿಡೀ ಗುಮ್ಮಳಾಪುರದಲ್ಲಿ ಜಾತ್ರೆ ಜನಜಂಗುಳಿ ತುಂಬಿರುತ್ತದೆ. ನಂತರ ಮುಂದಿನ ಗೌರಿ ಹಬ್ಬದವರೆಗೂ ದೇವಾಲಯ ಮುಚ್ಚಲಾಗುತ್ತದೆ.

ಇತಿಹಾಸ: ಗುಮ್ಮಳಾಪುರವನ್ನು ಕೈಲಾಸಪುರ, ಕಮಲಾಪುರ, ಕಲ್ಯಾಣಪುರವೆಂಬ ಹೆಸರಿನಲ್ಲಿ ಕರೆಯುತ್ತಿದ್ದರು ಎಂಬುದಕ್ಕೆ ಕೆಲ ಪುರಾವೆಗಳಿವೆ. ಭೂಕೈಲಾಸವೆಂದು ಹೆಸರುಗಳಿಸಿರುವ ಪುರಾಣ ಪ್ರಸಿದ್ಧ ಗುಮ್ಮಳಾಪುರದಲ್ಲಿ 101 ಬಾವಿ, 101 ಕೆರೆ, 101 ಕಟ್ಟೆ, 101 ಗವಿ, 101 ದೇವಾಲಯ,101 ಬಿಲ್ವವೃಕ್ಷಗಳು ಹಾಗೂ 771 ಮಂದಿ ಶಿವಶರಣರು ವಾಸವಾಗಿದ್ದರು ಎನ್ನುವುದು ಐಹಿತ್ಯ.

ಬಾಳೆಹೊನ್ನೂರು ರಂಭಾಪುರಿಪೀಠದ ಶಾಖಾ ಮಠವಾಗಿರುವ ಹಿರೇಮಠದ ಶ್ರೀಗಳ ನೇತೃತ್ವದಲ್ಲಿ ಧಾರ್ಮಿಕ ಕಾರ್ಯ ನಡೆಯುತ್ತದೆ.

ವಿಜಯನಗರ ಅರಸ ವೆಂಕಟಪತಿ ದೇವ ಮಹಾರಾಯ ಆಳ್ವಿಕೆಯಲ್ಲಿ ಯಲಹಂಕ ನಾಡಪ್ರಭು ಇಮ್ಮುಡಿ ಕೆಂಪೇಗೌಡರು ಹಿರೇಮಠದ ಪೀಠಾಧಿಪತಿಗೆ ಗುಮ್ಮಳಾಪುರ ದಾನ ಮಾಡಿದ ಬಗ್ಗೆ ಇಲ್ಲಿ ಪತ್ತೆಯಾಗಿರುವ ಶಾಸನವೊಂದರಲ್ಲಿ ಉಲ್ಲೇಖಿಸಲಾಗಿದೆ.

ಉರಿಸಿಂಗಿ, ಕಕ್ಕಮಲ್ಲೇಶ, ವೀರಭದ್ರ, ರಂಗ, ಮಾರ್ಕಾಂಡೇಯ, ಗೌರಮ್ಮ ಸೇರಿದಂತೆ ಹಲವು ಹೆಸರಿನ ಗವಿಗಳು ಇಲ್ಲಿವೆ. ಪಕ್ಕದಲ್ಲಿಯೇ ಗೌರಿಕೆರೆ ಇದೆ. ಗವಿಯು ಐದು ಪ್ರಾಕಾರಗಳನ್ನು ಹೊಂದಿವೆ. ಐದನೇ ಪ್ರಾಕಾರದ ಕೊನೆಯಲ್ಲಿ ನೀರು ನಿಂತಿದೆ. ಮುಂದೆ ಜನ ಹೋಗದಂತೆ ಕಬ್ಬಿಣದ ಸರಳುಗಳಿಂದ ಮುಚ್ಚಲಾಗಿದೆ ಎಂಬುದು ಇತಿಹಾಸ ತಜ್ಞ ಗುಮ್ಮಳಾಪುರದ ಎಂ.ದೇವರಕೊಂಡಪ್ಪ ಬರಹವೊಂದರಲ್ಲಿ ಉಲ್ಲೇಖಿಸಿದ್ದಾರೆ.

ಹಲವು ಕವಿಗಳು, ಶಿವಶರಣರು ಗುಮ್ಮಳಾಪುರದಲ್ಲಿ ವಾಸವಾಗಿದ್ದರು ಎಂಬ ಮಾಹಿತಿಯನ್ನು ಸಂಶೋಧಕರು ಪತ್ತೆ ಹಚ್ಚಿದ್ದಾರೆ. ಸಿದ್ದಲಿಂಗ ಯತಿಗಳು ಶೂನ್ಯ ಸಂಪಾದನೆ ಕೃತಿ ಸಂಪಾದಿಸಿರುವ ಬಗ್ಗೆಯೂ ಉಲ್ಲೇಖ ಇದೆ. ಗುಮ್ಮಣ್ಣ, ಪೆಮಣ್ಣ, ಬಿಟ್ಟಮುಂಡೆಪ್ರಭು, ಬೊಮ್ಮರಸ ಸೇರಿದಂತೆ ಕೆಲ ಕವಿಗಳು, ಮಹನೀಯರು ವಾಸವಾಗಿದ್ದರು ಎನ್ನುತ್ತದೆ ಇತಿಹಾಸ.

ಪ್ರತಿಕ್ರಿಯಿಸಿ (+)