ಬುಧವಾರ, ನವೆಂಬರ್ 20, 2019
21 °C
ಅಂತರರಾಷ್ಟ್ರೀಯ ಸಮ್ಮೇಳನದ ಸಮಾರೋಪ ಸಮಾರಂಭದಲ್ಲಿ ಸಚಿವ ಡಿವಿಎಸ್‌ ಅಭಿಮತ

ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆ ವಿಶ್ವಕ್ಕೆ ಮಾದರಿ: ಕೇಂದ್ರ ಸಚಿವ ಸದಾನಂದಗೌಡ

Published:
Updated:

ದೇವನಹಳ್ಳಿ: ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆ (ಎಸ್‌ಕೆಡಿಆರ್‌ಡಿಪಿ) ವಿಶ್ವಕ್ಕೆ ಮಾದರಿಯಾಗಿದೆ ಎಂದು ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ ಹೇಳಿದರು.

ಇಲ್ಲಿ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆ ವತಿಯಿಂದ ನಡೆದ ಅಂತರರಾಷ್ಟ್ರೀಯ ಸಮ್ಮೇಳನದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.

ನೂತನ ಚಿಂತನೆ, ಕಾರ್ಯಸೂಚಿ ಇಲ್ಲದೆ ಯಾವುದೇ ಯೋಜನೆಗಳು ಸಫಲತೆಯಾಗುವುದಿಲ್ಲ. ಗ್ರಾಮೀಣಾಭಿವೃದ್ಧಿ ಯೋಜನೆಯು ಸತತ 35 ವರ್ಷಗಳಿಂದ ಮಹಿಳೆಯರ ಆರ್ಥಿಕ ಸಬಲೀಕರಣಕ್ಕಾಗಿ ಶ್ರಮಿಸುತ್ತಿದೆ ಎಂದು ಹೇಳಿದರು.

ಧರ್ಮಸ್ಥಳಕ್ಕೆ ಭೇಟಿ ನೀಡಿದ್ದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಈ ಯೋಜನೆಯನ್ನು ಶ್ಲಾಘಿಸಿದ್ದಾರೆ. ಮದ್ಯವರ್ಜನೆ, ಸ್ವಸಹಾಯ ಗುಂಪುಗಳ ರಚನೆ, ಕಾನೂನು ಅರಿವು, ಶಿಕ್ಷಣದ ಮಹತ್ವ ಮತ್ತು ಬ್ಯಾಂಕಿನ ವಹಿವಾಟು ಕುರಿತ ಮಾಹಿತಿ ಕಾರ್ಯಾಗಾರ ನಡೆಸಿದೆ. ವಾರ್ಷಿಕ ಹತ್ತು ಸಾವಿರ ದೇವಾಲಯಗಳನ್ನು ಸ್ವಚ್ಛಗೊಳಿಸುತ್ತಿರುವುದು ಸಂಸ್ಥೆಗಿರುವ ಪರಿಸರ ಮತ್ತು ಸ್ವಚ್ಛತೆಯೆ ಕಾಳಜಿಯನ್ನು ತೊರಿಸುತ್ತದೆ ಎಂದು ಮೆಚ್ಚುಗೆ ಸೂಚಿಸಿದರು.

ಹಣಕಾಸು ಸಲಹೆಗಾರ ಹೈದರಾಬಾದ್‌ನ ಡಿ.ಎಸ್.ಕೆ ರಾವ್ ಮಾತನಾಡಿ, ಸಂಸ್ಥೆಯು ಸಾಮಾಜಿಕ ಹೊಣೆಗಾರಿಕೆ ಅರಿತು ಗ್ರಾಮೀಣ ಜನರ ಅಭ್ಯುದಯಕ್ಕಾಗಿ ಶ್ರಮಿಸುತ್ತಿದೆ. ಬಡತನ ರೇಖೆಗಿಂತ ಕೆಳಗೆ ಇರುವ ಅರ್ಹರನ್ನು ಗುರುತಿಸಿ ಆರ್ಥಿಕವಾಗಿ ಸದೃಢರಾಗಲು ಸಂಸ್ಥೆ ವಿಭಿನ್ನ ಯೋಜನೆಗಳನ್ನು ಜಾರಿ ಮಾಡುತ್ತಿದೆ. ಅದಕ್ಕಾಗಿ ಸಾವಿರಾರು ಘಟಕಗಳನ್ನು ಆರಂಭಿಸಿ ಕಾರ್ಯ ಪ್ರವೃತ್ತರಾಗಿರುವುದು ಉತ್ತಮ ಬೆಳವಣಿಗೆ ಎಂದು ಹೇಳಿದರು.

ಕೇಂದ್ರ ಗ್ರಾಮೀಣಾಭಿವೃದ್ಧಿ ಇಲಾಖೆ ಕಾರ್ಯದರ್ಶಿ ಅಮರ್‌ಜಿತ್ ಸಿನ್ಹ ಮಾತನಾಡಿ, ಕೇಂದ್ರ ಸರ್ಕಾರ 65 ಸಾವಿರ ಗ್ರಾಮಗಳಲ್ಲಿನ ಕುಟುಂಬಗಳಿಗೆ ಆಡುಗೆ ಅನಿಲ ವ್ಯವಸ್ಥೆ ಮಾಡಿದೆ. ಜನ್ ಧನ್ ಮೂಲಕ ಬ್ಯಾಂಕ್ ಖಾತೆಗೆ ಹಣ ನೀಡಲಾಗಿದೆ. ದೇಶದಲ್ಲಿ ಪ್ರಸ್ತುತ 2.38 ಲಕ್ಷ ಸ್ವಸಹಾಯ ಗುಂಪುಗಳಿದ್ದು ವಾರ್ಷಿಕ ₹700 ಕೋಟಿ ವಹಿವಾಟು ನಡೆಸುತ್ತಿವೆ ಎಂದರು.

ಗ್ರಾಮ ಪಂಚಾಯಿತಿ, ಸ್ಥಳೀಯ ಬ್ಯಾಂಕ್‌ಗಳು ಸ್ವಸಹಾಯ ಗುಂಪುಗಳೊಂದಿಗೆ ಹೊಂದಾಣಿಕೆಯಿಂದ ಕೆಲಸ ಮಾಡಬೇಕಾಗಿದೆ. 90 ವರ್ಷದ ವಿಧವೆಯೊಬ್ಬರು ಬ್ಯಾಂಕಿನಲ್ಲಿ ವಹಿವಾಟು ಮಾಡುತ್ತಾರೆ ಎಂದರೆ ಅಚ್ಚರಿಯ ವಿಷಯವಲ್ಲವೇ ಎಂದು ಕೇಳಿದರು.

ದೇಶದ ಆರ್ಥಿಕ ಶಕ್ತಿಯ ಮೂಲಗಳೇ ಸ್ವಸಹಾಯ ಗುಂಪುಗಳು. ಬಡತನ ನಿರ್ಮೂಲನೆ, ಉದ್ಯೋಗ ಸೃಷ್ಟಿ ದೇಶದ ಮೊದಲ ಆದ್ಯತೆ. ದೇಶದಲ್ಲಿರುವ 60 ಲಕ್ಷ ಕುಟುಂಬಗಳು ಸಮಾಜದ ಮುಖ್ಯವಾಹಿನಿಗೆ ಬರಬೇಕು ಎಂಬುದು ಕೇಂದ್ರ ಸರ್ಕಾರದ ಉದ್ದೇಶ. ಸಮುದಾಯ ಸಹಭಾಗಿತ್ವ ಬಲಗೊಳ್ಳಬೇಕು ಎಂದು ಹೇಳಿದರು.

ಧರ್ಮಸ್ಥಳದ ಧರ್ಮಾಧಿಕಾರಿ ಡಿ.ವೀರೇಂದ್ರ ಹೆಗ್ಗಡೆ ಮಾತನಾಡಿ, ದೂರದೃಷ್ಟಿ ಚಿಂತನೆಗಳನ್ನಿಟ್ಟುಕೊಂಡು ರೂಪಿಸಿದ ಯೋಜನೆಗಳು ಫಲ ನೀಡುತ್ತಿವೆ. ಆರೋಗ್ಯಯುತ ಸಮಾಜ ನಿರ್ಮಾಣ, ಸ್ವಚ್ಛ ಪರಿಸರ, ಕುಟುಂಬದಲ್ಲಿ ಆರ್ಥಿಕ ಬೆಳವಣಿಗೆ, ಧಾರ್ಮಿಕ ಕ್ಷೇತ್ರಗಳ ರಕ್ಷಣೆ, ಅಂತರ್ಜಲ ವೃದ್ಧಿ ಮತ್ತಿತರ ಅನೇಕ ಯೋಜನೆಗಳನ್ನು ಜಾರಿಗೊಳಿಸಲಾಗುತ್ತಿದೆ ಎಂದರು.

ಇದಕ್ಕೆ ಸ್ಥಳೀಯರು ಹೃದಯಪೂರ್ವಕವಾಗಿ ಒಪ್ಪಿ ಸಹಕರಿಸುತ್ತಿರುವ ಕಾರಣ ಅಂತರರಾಷ್ಟ್ರೀಯ ಸಮ್ಮೇಳನ ನಡೆಸಲು ಸಾಧ್ಯವಾಗಿದೆ ಎಂದು ಹೇಳಿದರು.

ಯೋಜನೆ ವ್ಯವಸ್ಥಾಪಕ ರಾಜೇಶ್, ತಾಂಜೀನಿಯ ದೇಶದ ಕಾರ್ಯದರ್ಶಿ ಮಾರಿಯಾ ಮೊಗಾಂಬೆ ಉಪಸ್ಥಿತರಿದ್ದರು.

ಪ್ರತಿಕ್ರಿಯಿಸಿ (+)