ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಹಿಳೆಯರ ಸಬಲೀಕರಣ ಸಂಸ್ಥೆಯ ಉದ್ದೇಶ 

ವಿಶ್ವನಾಥಪುರ ವಲಯ ಒಕ್ಕೂಟದ ಪದಾಧಿಕಾರಿಗಳ ಪದಗ್ರಹಣ
Last Updated 20 ಜನವರಿ 2020, 14:27 IST
ಅಕ್ಷರ ಗಾತ್ರ

ದೇವನಹಳ್ಳಿ: ಮಹಿಳೆಯರನ್ನು ಸಬಲೀಕರಣಗೊಳಿಸಿ ಸಮಾಜದ ಮುಖ್ಯವಾಹಿನಿಗೆ ತರುವುದೇ ಸಂಸ್ಥೆಯ ಮುಖ್ಯ ಉದ್ದೇಶ ಎಂದು ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನಾ ಸಂಸ್ಥೆ ಗ್ರಾಮಾಂತರ ಜಿಲ್ಲಾ ಘಟಕದ ನಿರ್ದೇಶಕ ಸತೀಶ್ ಹೇಳಿದರು.

ಇಲ್ಲಿನ ವಿಹಾನ್ ಪಬ್ಲಿಕ್ ಶಾಲೆ ಸಹಯೋಗದಲ್ಲಿ ನಡೆದ ವಿಶ್ವನಾಥಪುರ ವಲಯದ 13 ಒಕ್ಕೂಟದ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮದಲ್ಲಿ ಮಾತನಾಡಿದರು.

‘ಶ್ರೀಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಅವರ ದೂರದೃಷ್ಟಿಯ ಚಿಂತನೆಯಿಂದ 30 ವರ್ಷಗಳ ಹಿಂದೆ ಒಂದು ಸಣ್ಣ ಗ್ರಾಮದಿಂದ ಆರಂಭಗೊಂಡ ಸ್ವಸಹಾಯ ಗುಂಪುಗಳ ರಚನೆ ಮಾಡಿ ಆರ್ಥಿಕ ವಹಿವಾಟು ವಿಸ್ತಾರಗೊಳಿಸಿದೆ. ಸ್ವಾವಲಂಬನೆ ಜೀವನಕ್ಕೆ ಸಹಕಾರ ಇಂದು ಇಡಿರಾಜ್ಯದಲ್ಲಿ ವಿಸ್ತರಿಸಿಕೊಂಡು ಪ್ರಬಲವಾಗಿ ಬೆಳೆಯುತ್ತಿದೆ’ ಎಂದು ಹೇಳಿದರು.

‘ಸಂಸ್ಥೆ ಮಹಿಳೆಯರಿಗೆ ಆರ್ಥಿಕ ಚೈತನ್ಯದ ಜತೆಗೆ ಅಕ್ಷರದ ಜ್ಞಾನ, ಧಾರ್ಮಿಕ ಸಂಸ್ಕಾರ, ಕಾನೂನು ತಿಳಿವಳಿಕೆ, ಆರೋಗ್ಯ, ಪರಿಸರ ಸ್ವಚ್ಛತೆ ಬಗ್ಗೆಯ ಜಾಗೃತಿ ಮೂಡಿಸುತ್ತಿದೆ. ದೇಶದ ಪ್ರಗತಿಯಲ್ಲಿ ಮಹಿಳೆಯರ ಪಾತ್ರ ಅತಿಮುಖ್ಯ ಎಂಬುದನ್ನು ಸಂಸ್ಥೆ ಅರ್ಥ ಮಾಡಿಕೊಂಡು ಮಹಿಳೆಯರು ಎಲ್ಲಾ ಕ್ಷೇತ್ರದಲ್ಲಿ ತೊಡಗಿಸಿಕೊಳ್ಳಬೇಕು. ಪುರುಷರಿಗೆ ಸಮಾನವಾಗಿ ನಿಲ್ಲಬೇಕು ಎಂಬುದನ್ನು ಮಹಿಳೆಯರು ಅರ್ಥ ಮಾಡಿಕೊಂಡಿದ್ದಾರೆ ಎನ್ನುವ ವಿಶ್ವಾಸವಿದೆ’ ಎಂದು ಹೇಳಿದರು

ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಅಂಗಸಂಸ್ಥೆ ಜನ ಜಾಗೃತಿ ಜಿಲ್ಲಾ ಘಟಕದ ಉಪಾಧ್ಯಕ್ಷ ಬಿ.ಕೆ.ನಾರಾಯಣಸ್ವಾಮಿ ಮಾತನಾಡಿ, ‘ಧರ್ಮಸ್ಥಳ ಸಂಸ್ಥೆ ಗ್ರಾಮಾಂತರ ಜಿಲ್ಲೆಯಲ್ಲಿ ಕಳೆದ ಹತ್ತು ವರ್ಷಗಳಿಂದ ಗ್ರಾಮಾಂತರ ಪ್ರದೇಶದಲ್ಲಿನ ಮಹಿಳೆಯರನ್ನು ಸ್ವಸಹಾಯ ಗುಂಪುಗಳಡಿಯಲ್ಲಿ ತಂದು ಎಲ್ಲಾ ರೀತಿಯಿಂದ ತರಬೇತಿ ನೀಡಿ ಮಹಿಳೆಯರ ಜೀವನದ ಚಿತ್ರಣವನ್ನೆ ಬದಲಾಯಿಸಿರುವುದು ಶ್ಲಾಘನೀಯ. ಸರ್ಕಾರದ ವಿವಿಧ ಇಲಾಖೆಗಳು ಮಾಡದ ಕೆಲಸವನ್ನು ಸಂಸ್ಥೆ ಮಾಡುತ್ತಿದೆ’ ಎಂದು ಹೇಳಿದರು.

‘ಮಹಿಳೆಯರ ಹಕ್ಕು ಮತ್ತು ಕರ್ತವ್ಯಗಳೇನು ಎಂಬುದನ್ನು ಪರಿಚಯಿಸಿ ಸಣ್ಣ ಪುಟ್ಟ ವೆಚ್ಚಕ್ಕೂ ಕುಟುಂಬದ ಯಜಮಾನನ ಮುಂದೆ ಕೈ ಚಾಚದೆ ಸ್ವಂತ ದುಡಿಮೆಗೆ ಅವಕಾಶ ಕಲ್ಪಿಸಿರುವುದರ ಜತೆಗೆ ಸಾವಿರಾರು ವ್ಯಸನಿಗಳನ್ನು ಮದ್ಯವರ್ಜನ ಶಿಬಿರದ ಮೂಲಕ ನವ ಜೀವನಕ್ಕೆ ಎಡೆ ಮಾಡಿಕೊಟ್ಟಿದೆ. ನೂತನ ಪದಾಧಿಕಾರಿಗಳು ತಮ್ಮ ಜವಾಬ್ದಾರಿಯಿಂದ ಮಹಿಳೆಯರನ್ನು ಮತ್ತಷ್ಟು ಸಬಲೀಕರಣಗೊಳಿಸುವತ್ತ ಚಿಂತನೆ ನಡೆಸಬೇಕು’ ಎಂದು ಹೇಳಿದರು.

‘ಕುಂದಾಣ ಹೋಬಳಿ ವ್ಯಾಪ್ತಿಯಲ್ಲಿ 67 ಗ್ರಾಮಗಳಿದ್ದು ಹಲವಾರು ಕೆರೆ ಕುಂಟೆಗಳಿವೆ. ಅಂತರ್ಜಲ ಸಮಸ್ಯೆಯಿಂದ ತತ್ತರಿಸುತ್ತಿರುವ ರೈತರಿಗೆ ಮೂಲ ಕೆರೆಗಳನ್ನು ಅಭಿವೃದ್ಧಿಪಡಿಸಬೇಕು. ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆ ವತಿಯಿಂದ ಬನ್ನಿಮಂಗಲ ಕೆರೆ ಅಭಿವೃದ್ಧಿ ಪಡಿಸಲಾಗಿದೆ. ರಾಜ್ಯ ಸರ್ಕಾರ ಬೆಂಗಳೂರಿನ ನಾಗವಾರ ಮತ್ತು ಹೆಬ್ಬಾಳ ಕೆರೆ ತ್ಯಾಜ್ಯ ನೀರು ಸಂಸ್ಕರಿಸಿ ಕೆರೆಗಳಿಗೆ ತುಂಬಿಸುವ ಯೋಜನೆ ಕಾಮಗಾರಿ ನಡೆಸುತ್ತಿದೆ. ಕಾಮಗಾರಿ ಪೂರ್ಣಗೊಳಿಸುವ ಮೊದಲು ಸರ್ಕಾರ ಕೆರೆಗಳನ್ನು ದುರಸ್ತಿ ಮಾಡಬೇಕು’ ಎಂದು ಒತ್ತಾಯಿಸಿದರು.

ಕಾಳಿತನಯ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಜಿಲ್ಲಾ ಪಂಚಾಯಿತಿ ಸದಸ್ಯೆ ರಾಧಮ್ಮ ಮುನಿರಾಜು, ಜನಜಾಗೃತಿ ವೇದಿಕೆ ರಾಜ್ಯ ಘಟಕದ ಅಧ್ಯಕ್ಷ ರಾಮಸ್ವಾಮಿ, ವಿಹಾನ್ ಪಬ್ಲಿಕ್‌ ಶಾಲೆಯ ಆಡಳಿತ ಮಂಡಳಿ ಸಂಸ್ಥಾಪಕ ಅಧ್ಯಕ್ಷ ಪ್ರತಾಪ್ ಯಾದವ್, ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆ ತಾಲ್ಲೂಕು ಘಟಕ ಯೋಜನಾಧಿಕಾರಿ ಅಕ್ಷತಾ ರೈ, ವಲಯ ಮೇಲ್ವಿಚಾರಕ ವೇದಾವತಿ ಹಾಗೂ ವಲಯ ಸೇವಾ ಪ್ರತಿನಿಧಿಗಳು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT