ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಘಾಟಿ ಕ್ಷೇತ್ರದಲ್ಲಿ ಸರಿಸೃಪ ಪಾರ್ಕ್‌ ಸ್ಥಾಪಿಸಿ

ತಾಲ್ಲೂಕು ಮಟ್ಟದ ಪರಿಸರ ಸಮ್ಮೇಳನದಲ್ಲಿ ಡಾ.ಅ.ನ.ಯಲ್ಲಪ್ಪರೆಡ್ಡಿ ಅಸಮಾಧಾನ
Last Updated 15 ಜೂನ್ 2019, 16:15 IST
ಅಕ್ಷರ ಗಾತ್ರ

ದೊಡ್ಡಬಳ್ಳಾಪುರ: ಘಾಟಿ ಕ್ಷೇತ್ರದಲ್ಲಿ ಸರಿಸೃಪ ಪಾರ್ಕ್‌ ಸ್ಥಾಪನೆ ಮಾಡುವ ಉದ್ದೇಶದಿಂದ ಒಂದು ವರ್ಷಗಳ ಕಾಲ ಅಧ್ಯಯನ ನಡೆಸಿ ಸರ್ಕಾರಕ್ಕೆ ವರದಿ ನೀಡಿದ್ದೆ.ಆದರೆ ಇದುವರೆಗೂ ಸರ್ಕಾರದಿಂದ ಯಾವುದೇ ಸ್ಪಂದನೆಯೂ ಬಂದಿಲ್ಲ ಎಂದು ಪರಿಸರವಾದಿ ಡಾ.ಅ.ನ.ಯಲ್ಲಪ್ಪರೆಡ್ಡಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.

ಅವರು ನಗರದಲ್ಲಿ ಶನಿವಾರ ನಡೆದ ತಾಲ್ಲೂಕು ಮಟ್ಟದ ಪ್ರಥಮ ಪರಿಸರ ಸಮ್ಮೇಳನದಲ್ಲಿ ಮಾತನಾಡಿದರು.

ಘಾಟಿ ಕ್ಷೇತ್ರದಲ್ಲಿ ಹಾವಿಗೆ ಪೂಜೆ ಸಲ್ಲಿಸುವ ಸಂಪ್ರದಾಯ ಮೂಢನಂಬಿಕೆಯಿಂದ ಬಂದಿರುವುದಲ್ಲ. ಘಾಟಿ ಕ್ಷೇತ್ರ ಒಂದು ಕಾಲಕ್ಕೆ ಹಾವು ಸೇರಿದಂತೆ ವೈವಿದ್ಯಮಯ ಸರಿಸೃಪಗಳ ತಾಣವಾಗಿತ್ತು. ಇತ್ತೀಚಿನ ದಿನಗಳಲ್ಲಿ ಇಲ್ಲಿ ನಡೆದಿರುವ ಅಭಿವೃದ್ದಿ ಚಟುವಟಿಕೆಗಳಿಂದಾಗಿ ಸರಿಸೃಪಗಳು ಕಣ್ಮರೆಯಾಗಿವೆ. ಈ ಬಗ್ಗೆ ಸರ್ಕಾರ ಎಚ್ಚತ್ತುಕೊಂಡು ಈ ಪ್ರದೇಶದಲ್ಲಿನ ಅರಣ್ಯದಲ್ಲಿ ಪಾರ್ಕ್‌ ಸ್ಥಾಪನೆ ಮಾಡಲು ಮುಂದಾಗಬೇಕು. ಈ ಕುರಿತಂತೆ ಆರ್ಥಿಕ ನೆರವು, ತಾಂತ್ರಿಕ ಮಾಹಿತಿ ನಿಡುತ್ತೇವೆ ಎಂದರೂ ಸ್ಪಂದಿಸುತ್ತಿಲ್ಲ ಎಂದರು.

ತಿರುಪತಿ ಸೇರಿದಂತೆ ಕಾಡು, ಬೆಟ್ಟದಲ್ಲಿದ್ದ ದೇವಾಲಯಗಳಿಗೆ ಹೋಗುವಾಗ ಯಾವುದೇ ಪ್ರಾಣಿ, ಪಕ್ಷಿಗಳು ಎಂದೂ ಮನುಷ್ಯನಿಗೆ ತೊಂದರೆ ನೀಡುತ್ತಿರಲಿಲ್ಲ. ಆದರೆ ಈಗ ಪ್ರಾಣಿಗಳು ತೊಂದರೆ ನೀಡುತ್ತೀವೆ ಎಂದು ಅವುಗಳನ್ನು ಕೊಲ್ಲುವ, ಸ್ಥಳಾಂತರ ಮಾಡುವ ಕಡೆಗೆ ಹೆಚ್ಚು ಚಿಂತನೆಗಳು ನಡೆಯುತ್ತಿರುವುದು ದುರಂತದ ಸಂಗತಿ. ಅಭಿವೃದ್ದಿ ಅಂದರೆ ರಸ್ತೆ, ವಿದ್ಯುತ್‌ ಬಗ್ಗೆ ಮಾತ್ರ ಹೆಚ್ಚು ಚರ್ಚೆಗಳಾಗುತ್ತಿವೆ. ಸಸಿ, ನೀರಿನ ಬಗ್ಗೆ ಮಾತ್ರ ಯಾರೂ ಮಾತನಾಡುವ, ಕೆಲಸ ಮಾಡುವ ಬಗ್ಗೆ ಚರ್ಚೆಗಳೇ ನಡೆಯುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಜೀವ ವೈದ್ಯತೆಯ ನಂದಿ ಬೆಟ್ಟ: ನಂದಿಬೆಟ್ಟ ಅಪಾಯದ ಅಂಚಿನಲ್ಲಿದೆ. ರಾಷ್ಟ್ರೀಯ ಕಾನೂನು ಕಾಲೇಜಿನ ವಿದ್ಯಾರ್ಥಿಗಳು ನಡೆಸಿರುವ ಅದ್ಯಯನದ ಪ್ರಕಾರ ನಂದಿಬೆಟ್ಟದಲ್ಲಿನ ಜೀವವೈವಿದ್ಯ ಕೆಲವೇ ವರ್ಷಗಳಲ್ಲಿ ಕಣ್ಮರೆಯಾಗಲಿದೆ. ಬೆಟ್ಟದ ತಪ್ಪಲಿನಲ್ಲಿ ನಿರ್ಮಾಣವಾಗುತ್ತಿರುವ ರೆಸಾರ್ಟ್‌, ಅಪಾರ್ಟ್‌ಮೆಂಟ್‌ಗಳು, ಅಕ್ರಮ ಚಟುವಟಿಕೆಗಳಿಗೆ ಕಡಿವಾಣ ಹಾಕಲೇ ಬೇಕು ಎಂದರು.

ಗಾಂದೀಜಿ ಅವರು ಅನಾರೋಗ್ಯಕ್ಕೆ ಒಳಗಾದಾಗ ವಿಶ್ರಾಂತಿಗಾಗಿ ನಂದಿಬೆಟ್ಟಕ್ಕೆ ಬರುವಂತೆ ವೈದ್ಯರು ಸಲಹೆ ನೀಡಲು ಇಲ್ಲಿನ ಜೀವ ವೈದ್ಯತೆಯೇ ಕಾರಣವಾಗಿತ್ತು. ಇಡೀ ದೇಶದಲ್ಲಿಯೇ ನಂದಿಬೆಟ್ಟದಂತಹ ಉತ್ತಮ ವಾತಾವರಣ ಇದ್ದ ಸ್ಥಳ ಬೇರೊಂದು ಇರಲಿಲ್ಲ. ನಂದಿ ಬೆಟ್ಟದ ತಪ್ಪಲಿನ ಭೋಗನಂದೀಶ್ವರ ದೇವಾಲಯದ ಸಮೀಪದಲ್ಲಿನ ಗುಂಡುತೋಪಿನಲ್ಲಿ ಸುಮಾರು 300 ವರ್ಷಗಳಷ್ಟು ಹಳೇ ಮರಗಳು ಇಂದಿಗೂ ಇವೆ. ಈ ಗುಂಡುತೋಪನ್ನು ಇತ್ತೀಚೆಗಷ್ಟೇ ಸ್ಥಳೀಯ ಪರಿಸರಾಸ್ತಕರು ಅಭಿವೃದ್ದಿಗೊಳಿಸಿ ಮರಗಳ ಉಳಿವಿಗೆ ಶ್ರಮಿಸುತ್ತಿದ್ದಾರೆ. ಇಂತಹ ಜೀವ ವೈವಿಧ್ಯತೆ ಇರುವ ಬೆಟ್ಟವನ್ನು ಉಳಿಸಿಕೊಳ್ಳುವ ಕಡೆಗೆ ಎಲ್ಲ ಪರಿಸರ ಆಸಕ್ತರು ಮುಂದಾಗಬೇಕು ಎಂದರು.

ರಸ್ತೆ ಬದಿ ಸಸಿ ಕಡ್ಡಾಯವಾಗಬೇಕು: ರಾಜ್ಯ, ರಾಷ್ಟ್ರೀಯ ಹೆದ್ದಾರಿಗಳ ಬದಿಯಲ್ಲಿ ಸರ್ವಿಸ್‌ ರಸ್ತೆಗಳ ನಿರ್ಮಾಣದಂತೆ ಸಸಿಗಳನ್ನು ನೆಟ್ಟು ಬೆಳೆಸಲು ಸಹ ಭೂ ಸ್ವಾಧಿನಮಾಡಿಕೊಳ್ಳುವ ಅಗತ್ಯ ಇದೆ ಎಂದು ಶಾಸಕ ಟಿ.ವೆಂಕಟರಮಣಯ್ಯ ಹೇಳಿದರು.

ಅವರು ಸಂವಾದದಲ್ಲಿ ಮಾತನಾಡಿ, ಈ ಬಗ್ಗೆ ವಿಧಾನ ಸಭಾ ಅಧಿವೇಶನದಲ್ಲಿ ಪ್ರಸ್ತಾಪಿಸಲಾಗುವುದು. ತಾಲ್ಲೂಕಿನ ಘಾಟಿ ಕ್ಷೇತ್ರ ಸೇರಿದಂತೆ ಇತರೆಡೆಗಳಲ್ಲಿ ವಿಶೇಷವಾಗಿ ಎರಡು ಪಾರ್ಕ್‌ಗಳನ್ನು ಅಭಿವೃದ್ದಿಪಡಿಸಲು ಚಿಂತನೆ ನಡೆಸಲಾಗಿದೆ. ನಗರದಲ್ಲಿ ರಸ್ತೆ ವಿಸ್ತರಣೆ ಕೆಲಸ ಮುಕ್ತಾಯವಾಗಿರುವ ಬಸವ ಭವನದ ವೃತ್ತದಿಂದ ನೆಲಮಂಗಲ ರಸ್ತೆಯ ಕನಕದಾಸ ವೃತ್ತದವರೆಗೂ ಅಕವಾಶ ಇರುವ ಸ್ಥಳದಲ್ಲಿ ಸಸಿಗಳನ್ನು ನೆಟ್ಟು ಪೋಷಣೆ ಮಾಡುವ ಕೆಲಸಕ್ಕೆ ಒಂದು ವಾರದಲ್ಲಿ ಚಾಲನೆ ನೀಡಲಾಗುವುದು ಎಂದರು.

ಅರಣ್ಯ ಅಧಿಕಾರಿಗಳಿಗೆ ತರಾಟೆ: ತಾಲ್ಲೂಕಿನಲ್ಲಿ ಅರಣ್ಯ ಭೂಮಿ ಇದೆ. ಆದರೆ ಅರಣ್ಯದಲ್ಲಿ ಮರಗಳಿರಲಿ, ಸಸಿಗಳೂ ಇಲ್ಲ. ಸರ್ಕಾರದಿಂದ ಹಾಗೂ ಶಾಸಕರ ನಿಧಿಯಿಂದ ಸಾಕಷ್ಟು ಹಣ ನೀಡಲಾಗಿದೆ. ಇಷ್ಟಾದರೂ ಅರಣ್ಯ ಬೆಳೆಸದೇ ಇರಲು ಏನು ಕಾರಣ ಎಂದು ಸಭೆಯಲ್ಲಿ ಹಾಜರಿದ್ದ ಜಿಲ್ಲಾ ಅರಣ್ಯ ಸಂರಕ್ಷಣಾಧಿಕಾರಿ ಪೂವಯ್ಯ ಅವರನ್ನು ತರಾಟೆಗೆ ತೆಗೆದುಕೊಂಡರು.

ಅರಣ್ಯ ಕುರಿತ ಸಂವಾದ ಗೋಷ್ಠಿಯ ಅಧ್ಯಕ್ಷತೆಯನ್ನು ವಹಿಸಿದ್ದ ವಕೀಲ ಹಾಗೂ ಪರಿಸರವಾದಿ ಕಿಶೋರ್‌ ಮಾತನಾಡಿ, ಮುಂದಿನ 200 ವರ್ಷಗಳ ಕಾಲ ಮಾತ್ರ ಮನುಷ್ಯ ಭೂಮಿಯ ಮೇಲೆ ಇರುತ್ತಾನೆ ಎಂದು ಖ್ಯಾತ ವಿಜ್ಞಾನಿ ಸ್ಟೀಫನ್‌ ಹೇಳಿದ್ದ ಮಾತನ್ನು ಎಚ್ಚರಿಕೆಯಾಗಿ ಸ್ವೀಕರಿಸಬೇಕು. ಪಶ್ಚಿಮ ಘಟ್ಟದಲ್ಲಿ ಜೇನು ಹುಳುಗಳ ಸಂತತಿ ಕ್ಷೀಣಿಸುತ್ತಿದೆ. ಜೇನು ಹುಳುಗಳು ಕಣ್ಮರೆಯಾದರೆ ಮನುಷ್ಯನ ನಾಶ ಪ್ರಾರಂಭದ ಮುನ್ಸೂಚನೆಯಾಗಲಿದೆ ಎಂದರು.

ಸಂವಾದದಲ್ಲಿ ಮಾತನಾಡಿದ ರಾಜ್ಯ ರೈತ ಸಂಘದ ಸತೀಶ್‌, ತಿಪ್ಪೂರು ಸಮೀಪದ ಗೊರವೆ ಹಳ್ಳದಲ್ಲಿ ಚಕ್‌ ಡ್ಯಾಂಗಳನ್ನು ನಿರ್ಮಿಸಿದರೆ ಈ ಭಾಗದಲ್ಲಿ ಅರಣ್ಯ ಬೆಳೆಯಲು, ಅಂತರ್ಜಲ ವೃದ್ದಿಯಾಗಲು ಸಹಕಾರಿಯಾಗಲಿದೆ ಎಂದರು.

ಸಂವಾದದಲ್ಲಿ ಮಹಿಳಾ ಸಮಾಜದ ಅಧ್ಯಕ್ಷೆ ಕೆ.ಎಸ್‌.ಪ್ರಭಾ, ನಿರ್ದೇಶಕಿ ಕವಿತಾ, ಯುವ ಸಂಚಲನ ಅಧ್ಯಕ್ಷ ಚಿದಾನಂದ್‌ ಮಾತನಾಡಿದರು. ತಾಲ್ಲೂಕು ಅರಣ್ಯ ಅಧಿಕಾರಿ ನಟರಾಜ್‌ ಭಾಗವಹಿಸಿದ್ದರು. ಅರಣ್ಯ ಕುರಿತ ವರದಿಯನ್ನು ಅನಿಕೇತನ ಟ್ರಸ್ಟ್‌ನ ಕಾರ್ಯದರ್ಶಿ ಡಿ.ಶ್ರೀಕಾಂತ ಸಂಕ್ಷಿಪ್ತವಾಗಿ ಮಂಡಿಸಿದರು. ಎಪಿಎಂಸಿ ಅಧ್ಯಕ್ಷ ಮಂಜುನಾಥ್‌ ಭಾಗವಹಿಸಿದ್ದರು. ದೇವರಾಜ ಅರಸು ಪದವಿ ಕಾಲೇಜಿನ ಪ್ರಾಂಶುಪಾಲ ಕೆ.ಆರ್‌.ರವಿಕಿರಣ್‌ ಕಾರ್ಯಕ್ರಮ ನಿರ್ವಹಿಸಿದರು.

ಡಾ.ಅ.ನ.ಯಲ್ಲಪ್ಪರೆಡ್ಡಿ ಪರಿಸರ ಧ್ವಜಾರೋಹಣ ನೆರವೇರಿಸಿ ಸಸಿಗಳನ್ನು ನೆಟ್ಟು ಸಮ್ಮೇಳನಕ್ಕೆ ಚಾಲನೆ ನೀಡಿದರು. ಭೂಮಿ ತಾಯಿ ಬಳಗದ ನಿರ್ಮಲಶಾಸ್ತ್ರಿ ಅವರು ಪರಿಸರ ಗೀತೆಗಳನ್ನು ಹಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT