ಶನಿವಾರ, ಆಗಸ್ಟ್ 17, 2019
24 °C

‘ಸೂ.ರಂ. ರಾಮಯ್ಯ ಶಾಶ್ವತ ಅಭಿವೃದ್ಧಿಯ ಹರಿಕಾರ’

Published:
Updated:
Prajavani

ಸೂಲಿಬೆಲೆ: ‘ರಾಜ್ಯದ ಪ್ರಪ್ರಥಮವಾಗಿ ದ್ವಿ-ವಿಧಾನ ಸಭಾ ಕ್ಷೇತ್ರದಲ್ಲಿ ಆಯ್ಕೆಯಾಗುವ ಮೂಲಕ ಮಾಡಿದ ಅಭಿವೃದ್ಧಿ ಕಾಮಗಾರಿಗಳು ಇಂದಿಗೂ ಜೀವಂತವಾಗಿದ್ದು, ಶಾಶ್ವತವಾದ ಅಭಿವೃದ್ಧಿಯ ಹರಿಕಾರರನ್ನು ಜನರು ಎಂದಿಗೂ ಮರೆಯುವುದಿಲ್ಲ’ ಎಂದು ಬಿಜೆಪಿ ಯುವ ಮೋರ್ಚಾ ರಾಜ್ಯ ಕಾರ್ಯದರ್ಶಿ ಶರತ್ ಬಚ್ಚೇಗೌಡ ಹೇಳಿದರು.

ಸೂಲಿಬೆಲೆ ವಿವೇಕಾನಂದ ಪ್ರೌಢಶಾಲೆಯಲ್ಲಿ ಹಮ್ಮಿಕೊಳ್ಳಲಾಗಿದ್ದ ಮಾಜಿ ಶಾಸಕ, ಸ್ವಾತಂತ್ರ್ಯ ಹೋರಾಟಗಾರ ಸೂ.ರಂ. ರಾಮಯ್ಯ ಅವರ 101 ನೇ ಜನ್ಮದಿನಾಚರಣೆಯಲ್ಲಿ ಶುಭಾಶಯ ಕೋರಿ ಮಾತನಾಡಿದರು.

‘ನೀರಿನ ಸಮಸ್ಯೆಯ ಬಗ್ಗೆ ದೂರದೃಷ್ಟಿ ಇಟ್ಟುಕೊಂಡಿದ್ದು ಏತನೀರಾವರಿ ಯೋಜನೆಯ ಪರಿಕಲ್ಪನೆ ಹೊಂದಿದ್ದರು. 25 ವರ್ಷಗಳ ಹಿಂದೆಯೇ ತಾಲ್ಲೂಕಿನ ಕೆರೆಗಳ ಅಭಿವೃದ್ಧಿಯ ಕನಸನ್ನು ಕಂಡ ನಾಯಕ ಅವರು. ಸಮಾಜಸೇವೆಗಾಗಿಯೇ ಜೀವನವನ್ನು ಮುಡುಪಾಗಿಟ್ಟ ಧೀಮಂತ ನಾಯಕರು. ನಮ್ಮಂತಹ ಯುವಕರಿಗೆ ರಾಜಕೀಯ ಮಾರ್ಗದರ್ಶಕರು’ ಎಂದರು.

ವಿವೇಕಾನಂದ ಪ್ರೌಢಶಾಲೆಯ ಹಿರಿಯ ವಿದ್ಯಾರ್ಥಿಗಳ ಸಂಘದ ಅಧ್ಯಕ್ಷ ರಾಮಕೃಷ್ಣರಾಜು ಅವರು ಮಾತನಾಡಿ, 1957 ರಲ್ಲಿಯೇ ಸೂಲಿಬೆಲೆ ಗ್ರಾಮಕ್ಕೆ ಪ್ರೌಢಶಾಲೆಯನ್ನು ಸ್ಥಾಪಿಸಿ ಅನಕ್ಷರಸ್ಥ ರೈತರ ಮಕ್ಕಳಿಗೆ ವಿದ್ಯೆ ಜ್ಞಾನ ಮತ್ತು ಸಂಸ್ಕಾರವನ್ನು ಕಲಿಸಿದ ಮಾರ್ಗದರ್ಶಕರು ಎಂದರು.

ಜಿಲ್ಲಾ ಪಂಚಾಯಿತಿ ಸದಸ್ಯ ವಿ.ಪ್ರಸಾದ್ ಮಾತನಾಡಿ, ಗಾಂಧಿ ಯುಗದ ಕೊನೆಯ ಕೊಂಡಿ ಎಂದೇ ಬಿಂಬಿತವಾಗಿರುವ ಸೂ.ರಂ. ರಾಮಯ್ಯ ಅವರು ಶಿಕ್ಷಣ ಕ್ಷೇತ್ರಕ್ಕೆ ಜೀವನವನ್ನೇ ಮುಡುಪಾಗಿಟ್ಟಿದ್ದಾರೆ. ಹೊಸಕೋಟೆ ತಾಲ್ಲೂಕಿನಲ್ಲಿ ಕ್ರಾಂತಿಕಾರಿ ಶಿಕ್ಷಣ ಪ್ರೇಮಿ ಎಂದರೆ ಸೂ.ರಂ.ರಾಮಯ್ಯ ಒಬ್ಬರೇ ಎಂದು ಹೇಳಿದರು.

ವಿವೇಕಾನಂದ ವಿದ್ಯಾಭಿವೃದ್ಧಿ ಸಂಘ ಮತ್ತು ವಿವೇಕಾನಂದ ಪ್ರೌಢಶಾಲೆಯ ಹಿರಿಯ ವಿದ್ಯಾರ್ಥಿಗಳ ಸಂಘದ ಸಂಯುಕ್ತ ಆಶ್ರಯದಲ್ಲಿ ಜನ್ಮ ದಿನಾಚರಣೆ ಹಮ್ಮಿಕೊಳ್ಳಲಾಗಿತ್ತು.

ಗಾಯಕರಾದ ಶಶಿಧರ್ ಕೋಟೆ ಅವರಿಂದ ಗೀತಗಾಯನ ಕಾರ್ಯಕ್ರಮ ಆಯೋಜಿಸಲಾಗಿತ್ತು. ಸಹಕಾರ ಬ್ಯಾಂಕ್ ಅಧ್ಯಕ್ಷ ಬಿ.ವಿ.ಸತೀಶ್ ಗೌಡ, ಸೂಲಿಬೆಲೆ ಪ್ರಥಮ ದರ್ಜೆ ಕಾಲೇಜು, ಪದವಿ ಪೂರ್ವ ಕಾಲೇಜು ಸಿಬ್ಬಂದಿ, ವಾಲ್ಮೀಕಿ ಸೇವಾ ಬಳಗ ಮತ್ತು ಶಾಲೆಯ ಹಳೆಯ ವಿದ್ಯಾರ್ಥಿಗಳು ಶತಾಯುಷಿಗೆ ಶುಭಾಶಯ ಕೋರಿದರು.

Post Comments (+)