ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಸಮಾಜಕ್ಕೆ ಸ್ಪಂದಿಸುವ ಗುಣಬೆಳೆಸಿಕೊಳ್ಳಿ’

ದೇಗುಲಗಳು ಸಾಂಸ್ಕೃತಿಕ ಕೇಂದ್ರಗಳಾಗಿ ರೂಪಗೊಳ್ಳಲಿ: ಬಿ.ಆರ್.ಲಕ್ಷ್ಮಣ್‌ ರಾವ್
Last Updated 22 ಫೆಬ್ರುವರಿ 2020, 13:54 IST
ಅಕ್ಷರ ಗಾತ್ರ

ಆನೇಕಲ್ : ಭಾರತೀಯ ಪರಂಪರೆಯಲ್ಲಿ ದೇವಾಲಯಗಳು ಧಾರ್ಮಿಕ ವಿಚಾರಗಳಿಗೆ ಮಾತ್ರ ಸೀಮಿತವಾಗದೇ ಸಾಂಸ್ಕೃತಿಕ ಕೇಂದ್ರಗಳಾಗಿಯೂ ಜನರೊಂದಿಗೆ ಬೆರೆತಿವೆ. ಈ ಪರಂಪರೆ ಉಳಿಸುವುದು ಎಲ್ಲರ ಜವಬ್ದಾರಿ ಎಂದು ಕವಿ ಬಿ.ಆರ್‌.ಲಕ್ಷ್ಮಣ್‌ರಾವ್‌ ಅಭಿಪ್ರಾಯಪಟ್ಟರು.

ಅವರು ತಾಲ್ಲೂಕಿನ ತಿಮ್ಮಸಂದ್ರ ಗೇಟ್‌ ಬಳಿಯ ಎಸ್‌ಎಸ್‌ಎನ್‌ ಪ್ರತಿಷ್ಠಾನದ ವತಿಯಿಂದ ನಿರ್ಮಿಸಿರುವ ಶಿವ ದೇವಾಲಯದ ವಾರ್ಷಿಕೋತ್ಸವ ಮತ್ತು ಉಚಿತ ಆರೋಗ್ಯ ತಪಾಸಣಾ ಶಿಬಿರ ಉದ್ಘಾಟಿಸಿ ಮಾತನಾಡಿದರು.

ದೇಗುಲಗಳನ್ನು ಧಾರ್ಮಿಕ ವಿಚಾರ ಜತೆಗೆ ಸಾಂಸ್ಕೃತಿಕ ಕೇಂದ್ರಗಳಾಗಿಯೂ ಬೆಳೆಸಬೇಕಾಗಿದೆ. 12ನೇ ಶತಮಾನದಲ್ಲಿ ಬಸವಣ್ಣ ಧಾರ್ಮಿಕ, ಸಾಂಸ್ಕೃತಿಕ ವಿಚಾರಗಳ ಜತೆಗೆ ಸಾಮಾಜಿಕ ಕ್ಷೇತ್ರದಲ್ಲೂ ಬೆಳೆಸುವ ನಿಟ್ಟಿನಲ್ಲಿ ದೇಸಿ ಚಳವಳಿ ಹುಟ್ಟುಹಾಕಿದರು. ಪುರೋಹಿತಶಾಯಿ ಮತ್ತು ವೇದಗಳ ತಾರತಮ್ಯ, ಸಂಸ್ಕತದ ದಬ್ಬಾಳಿಕೆ ವಿರೋಧಿಸಿ ವಚನ ಚಳವಳಿಗೆ ಚಾಲನೆ ನೀಡಿದರು. ಈ ಮೂಲಕ ಜನರಲ್ಲಿ ಜಾಗೃತಿ ಮೂಡಿಸಿ ಮೌಲ್ಯಗಳನ್ನು ಬೆಳೆಸಿದರು. ಸಮಾಜಕ್ಕೆ ಸ್ಪಂದಿಸುವ ಗುಣಗಳನ್ನು ಪ್ರತಿಯೊಬ್ಬರು ಬೆಳೆಸಿಕೊಂಡಲ್ಲಿ ಮಾತ್ರ ಉತ್ತಮ ಸಮಾಜ ನಿರ್ಮಾಣ ಸಾಧ್ಯ. ಬಸವಣ್ಣ ಕಾಯಕ ಮತ್ತು ದಾಸೋಹ ಕಲ್ಪನೆಯನ್ನು ಜನರಲ್ಲಿ ಬಿತ್ತುವ ಮೂಲಕ ಶ್ರಮಸಮಾಜ ರೂಪಿಸಲು ಶ್ರಮಿಸಿದ ಮಹಾನ್‌ ವ್ಯಕ್ತಿ ಎಂದು ಹೇಳಿದರು.

ಹಿನ್ನೆಲೆ ಗಾಯಕಿ ಬಿ.ಕೆ.ಸುಮಿತ್ರಾ ಮಾತನಾಡಿ, ನಗು ಮನುಷ್ಯನಲ್ಲಿನ ಆರೋಗ್ಯ ಹೆಚ್ಚಾಗಲು ಔಷಧ. ಯಾವುದೇ ಸಮಸ್ಯೆ ಬಗ್ಗೆ ಅತಿಯಾಗಿ ಚಿಂತಿಸುವುದರಿಂದ ಆರೋಗ್ಯ ಹಾಳಾಗುತ್ತದೆ. ಹಾಗಾಗಿ ಚಿಂತಿಸದೆ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.

ಎಸ್‌ಎಸ್‌ಎನ್‌ ಪ್ರತಿಷ್ಠಾನದ ವತಿಯಿಂದ ತಾಲ್ಲೂಕಿನ ಶಿಕ್ಷಕರಿಗೆ ಮತ್ತು ಆಸಕ್ತರಿಗೆ ಎರಡು ದಿನಗಳ ಗಾಯನ ಶಿಬಿರ ನಡೆಸಿಕೊಡಲು ಚಿಂತನೆ ನಡೆದಿದೆ ಎಂದರು.

ಎಸ್‌ಎಸ್‌ಎನ್‌ ಪ್ರತಿಷ್ಠಾನದ ಸಂಸ್ಥಾಪಕ ಕೆ.ಆರ್‌.ಸೋಮಶೇಖರ್‌, ತೋಟಗಾರಿಕೆ ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ಎಂ.ಕೆಂಪರಾಜು, ಪುರಸಭಾ ಸದಸ್ಯೆ ಮಂಜುಳ ನೀಲಕಂಠಯ್ಯ, ಗ್ರಾಮ ಪಂಚಾಯಿತಿ ಸದಸ್ಯ ಹಿನ್ನಕ್ಕಿ ಜಯಣ್ಣ, ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಎಂ.ಶಿವಣ್ಣ, ವಿಧಾತ್‌ ವಿದ್ಯಾ ಸಂಸ್ಥೆ ಸಂಸ್ಥಾಪಕ ಕಾರ್ಯದರ್ಶಿ ತಾ.ನಂ.ಕುಮಾರಸ್ವಾಮಿ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಶಿವಶಂಕರರೆಡ್ಡಿ, ಪ್ರಧಾನ ಕಾರ್ಯದರ್ಶಿ ಆರ್.ನಾರಾಯಣ್, ಖಜಾಂಚಿ ಟಿ.ವಿ.ಉಮೇಶ್, ಸರ್ಕಾರಿ ನೌಕರರ ಸಂಘದ ಕಾರ್ಯದರ್ಶಿ ಎಚ್.ಮಂಜುನಾಥ್‌, ದೈಹಿಕ ಶಿಕ್ಷಣಾಧಿಕಾರಿ ಡಿ.ಎನ್‌.ವೀರಭದ್ರಪ್ಪ, ಎಸ್‌ಆರ್‌ಎಸ್‌ ಸಂಸ್ಥೆಯ ಎನ್.ಚಂದ್ರಶೇಖರ್‌, ಹೊಸಬೆಳಕು ಟ್ರಸ್ಟ್‌ನ ಅಧ್ಯಕ್ಷ ಜಿಗಣಿ ರಾಮಕೃಷ್ಣ ಇದ್ದರು.

ಕಾರ್ಯಕ್ರಮದಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರ, ವಿದ್ಯಾರ್ಥಿಗಳಿಗೆ ಕ್ರೀಡಾ ಪರಿಕರಗಳು ಮತ್ತು ನಲಿಕಲಿ ಪೀಠೋಪಕರಣ ವಿತರಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT