ಮಂಗಳವಾರ, ಸೆಪ್ಟೆಂಬರ್ 28, 2021
20 °C

ಸೊಣ್ಣೇನಹಳ್ಳಿ: ಮತ್ತೆ ಚಿರತೆ ದಾಳಿ, 16 ಕುರಿ ಸಾವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ದೊಡ್ಡಬಳ್ಳಾಪುರ: ತಾಲ್ಲೂಕಿನ ಹೊಸಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸೊಣ್ಣೇನಹಳ್ಳಿ ಗ್ರಾಮಕ್ಕೆ ಮತ್ತೆ ಮತ್ತೆ ಚಿರತೆ ದಾಳಿ ಮಾಡಿದ್ದು ಕುರಿ, ಮೇಕೆಗಳನ್ನು ಕಚ್ಚಿ ಗಾಯಗೊಳಿಸಿದೆ.

ಮಾಕಳಿ ಬೆಟ್ಟದ ಸಮೀಪದಲ್ಲಿನ ಸೊಣ್ಣೇನಹಳ್ಳಿ ಗ್ರಾಮಸ್ಥರು ಚಿರತೆ ದಾಳಿಯಿಂದ ಕಂಗೆಟ್ಟು ಹೋಗಿದ್ದು ಆತಂಕದಲ್ಲಿ ದಿನಕಳೆಯುವಂತಹ ಪರಿಸ್ಥಿತಿ ಎದುರಾಗಿದೆ.

ಏ.5ರಂದು ಇದೇ ಗ್ರಾಮಕ್ಕೆ ಚಿರತೆ ನುಗ್ಗಿ ನಾಲ್ಕು ಕುರಿಗಳನ್ನು ಬಲಿ ಪಡೆದಿದ್ದ ಘಟನೆ ಮಾಸುವ ಮುನ್ನವೆ, ಭಾನುವಾರ ಒಂದೇ ದಿನ ಎರಡು ಬಾರಿ ಗ್ರಾಮಕ್ಕೆ ನುಗ್ಗಿ 5 ಮೇಕೆ, 11 ಕುರಿಗಳನ್ನು ಕಚ್ಚಿ ಹಾಕಿದೆ. ಭಾನುವಾರ ಮಧ್ಯಾಹ್ನ ಗ್ರಾಮಕ್ಕೆ ನುಗ್ಗಿರುವ ಚಿರತೆ, ಗ್ರಾಮ ನಡುವಿರುವ ಮಂಜುನಾಥರೆಡ್ಡಿ ಎಂಬುವವರ ಮನೆಗೆ ಹೊಂದಿಕೊಂಡಂತಿರುವ ಕೊಟ್ಟಿಗೆಯಲ್ಲಿದ್ದ 5 ಮೇಕೆಗಳನ್ನು ಬಲಿ ಪಡೆದು, 3 ಮೇಕೆಗಳನ್ನು ಗಾಯಗೊಳಿಸಿತ್ತು. ಈ ಕುರಿತು ವಿಷಯ ತಿಳಿದ ಅರಣ್ಯ ಅಧಿಕಾರಿ ಚೇತನ್ ಸ್ಥಳಕ್ಕೆ ಭೇಟಿ ನೀಡಿದ್ದು, ಚಿರತೆ ಸೆರೆ ಹಿಡಿಯಲು ಬೋನ್ ಅಳವಡಿಸಿ ಸಿದ್ಧತೆ ನಡೆಸಲಾಗಿದೆ ಹಾಗೂ ರೈತರಿಗೆ ಪರಿಹಾರ ಕೊಡಿಸುವ ಭರವಸೆ ನೀಡಿ ತೆರಳಿದ್ದರು.

ಈ ಘಟನೆಯ ಬೆನ್ನಲ್ಲೆ ಮತ್ತೆ ರಾತ್ರಿ ಗ್ರಾಮಕ್ಕೆ ನುಗ್ಗಿರುವ ಚಿರತೆ, ಮಲ್ಲಪ್ಪ ಎಂಬುವವರಿಗೆ ಸೇರಿದ್ದ ಕುರಿ ದೊಡ್ಡಿಗೆ ನುಗ್ಗಿ 11 ಕುರಿಗಳನ್ನು ಕಚ್ಚಿಹಾಕಿದೆ. ಅಲ್ಲದೆ 12 ಕುರಿಗಳನ್ನು ಗಾಯಗೊಳಿಸಿದೆ. ಪದೇ ಪದೇ ಗ್ರಾಮಕ್ಕೆ ಚಿರತೆ ನುಗ್ಗುತ್ತಿರುವ ಆತಂಕ ಒಂದೆಡೆಯಾದರೆ,ಕುರಿ,ಮೇಕೆ ಸಾಕಿ ಜೀವನ‌ ನಡೆಸುತ್ತಿರುವ ಬಡ ರೈತರನ್ನು ನಷ್ಟಕ್ಕೆ ಕಾರಣವಾಗುತ್ತಿರುವುದು ಗ್ರಾಮಸ್ಥರ ಆಕ್ರೋಶಕ್ಕೆ ಕಾರಣವಾಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು