ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿರಿಧಾನ್ಯಗಳು ಸಂಜೀವಿನಿ ಇದ್ದಂತೆ

ಸಾವಯವ ವಿಧಾನದಿಂದ ಬೆಳೆಗಲ್ಲಿವೆ ಅಗಾಧವಾದ ಜೀವಸತ್ವ
Last Updated 30 ಮಾರ್ಚ್ 2019, 14:01 IST
ಅಕ್ಷರ ಗಾತ್ರ

ದೇವನಹಳ್ಳಿ: ಹುರುಳಿ ಪಾಯಸ, ಸಾಮೆ ಅಕ್ಕಿ ಇಡ್ಲಿ, ಜತೆಗೆ ಚಟ್ನಿ. ಅಲಸಂದೆ ಕಾಳಿನ ವಡೆ, ಬಾಳೆ ಹೂವಿನ ಪಕೋಡ. ಬಾಯಲ್ಲಿ ನೀರೂರಿಸುವ ತರಹೇವಾರಿ ಖಾದ್ಯಗಳು. ಇವೆಲ್ಲ ಸಾವಯವ ಸಿರಿ ಧಾನ್ಯಗಳಿಂದ ತಯಾರಾದ ಭೋಜನಕ್ಕೆ ಸಿದ್ಧ ಪಡಿಸಿದ್ದ ಆಹಾರ.

ಇದೆಲ್ಲಾ ಕಂಡು ಬಂದಿದ್ದು ತೇಜಾ ಸಾವಯವ ನರ್ಸರಿ ಆವರಣದಲ್ಲಿ ‘ಸಹಜ ಸಮೃದ್ಧ ಸಾವಯವ ಕೃಷಿ ಬಳಗ’ದ ವತಿಯಿಂದ ಏರ್ಪಡಿಸಿದ್ದ ಕೃಷಿ ಗ್ರಾಮೀಣ ಪತ್ರಿಕೋದ್ಯಮ ಕೈಪಿಡಿ ಬಿಡುಗಡೆ ಮತ್ತು ಸಿರಿಧಾನ್ಯಗಳಲ್ಲಿ ರುಚಿಕರ ಆಹಾರ ಪದ್ಧತಿ ಜಾಗೃತಿ ಕುರಿತು ನಡೆದ ಕಾರ್ಯಕ್ರಮದಲ್ಲಿ.

ಈ ಕುರಿತು ಮಾತನಾಡಿದ ಸಾವಯವ ಕೃಷಿಕ ಶಿವನಾಪುರ ರಮೇಶ್ ‘ಸುವರ್ಣ ಆಹಾರ ಪದ್ಧತಿ ಕ್ರಮ ಎಂಬುದು ಹಿಂದಿನ ತಲೆಮಾರುಗಳಲ್ಲಿ ಇತ್ತು. ಸಿರಿಧಾನ್ಯಗಳನ್ನು ಬಳಸಿ ಸಿದ್ಧ ಪಡಿಸಬಹುದಾದ ಅನೇಕ ಆಹಾರಗಳಿವೆ. ಅಂತಹ ಆಹಾರಗಳ ಸೇವನೆಯಿಂದ ಉತ್ತಮ ಆರೋಗ್ಯದ ಜತೆಗೆ ಮನುಷ್ಯನ ಆಯಸ್ಸು ನೂರು ವರ್ಷಗಳಿಗಿಂತ ಹೆಚ್ಚು ಇರುತ್ತಿತ್ತು. ಆದರೆ ಪ್ರಸ್ಥುತ ಮನುಷ್ಯನ ಸರಾಸರಿ ಆಯುಸ್ಸಿನ ಪ್ರಮಾಣ ಶೇಕಡ 52 ರಷ್ಟಿದೆ’ ಎಂದರು.

‘ನಮ್ಮ ಹಿರಿಯರಿಗೆ ಸಿರಿಧಾನ್ಯಗಳನ್ನು ಬೆಳೆಯುವ ಮತ್ತು ‍ಬಳಕೆ ಮಾಡುವ ವಿಧಾನ ಚೆನ್ನಾಗಿ ಗೊತ್ತಿದೆ. ಆಧುನಿಕತೆಯಲ್ಲಿ ಬದಲಾವಣೆ ಸಹಜ, ಆದರೆ ಆಹಾರ ಪದ್ಧತಿಯಲ್ಲಿ ಬದಲಾವಣೆಯಾಗಬಾರದು. ರಾಸಾಯನಿಕಗಳನ್ನು ಬಳಸಿ ಬೆಳೆದ ಯಾವುದೇ ಆಹಾರ ಧಾನ್ಯಗಳಲ್ಲಿ ಪೌಷ್ಟಿಕಾಂಶ ಇರುವುದಿಲ್ಲ. ರುಚಿಕರವಾಗಿಯೂ ಇರುವುದಿಲ್ಲ. ಸಿರಿಧಾನ್ಯಗಳ ಆಹಾರ ಸರಳವಾಗಿ ಜೀರ್ಣವಾಗುತ್ತದೆ. ಸಿರಿಧಾನ್ಯಗಳು ಮಾನವನ ನಿತ್ಯ ಸೇವನೆಗೆ ಸಂಜೀವಿನಿ ಇದ್ದಂತೆ’ ಎಂದರು.

‘ಸಾವಯವ ವಿಧಾನದಿಂದ ಬೆಳೆಯುವ ತರಕಾರಿ ಮತ್ತು ಸೊಪ್ಪುಗಳಲ್ಲಿ ಅಗಾಧವಾದ ಜೀವಸತ್ವಗಳಿವೆ. ರಾಸಾಯನಿಕಗಳನ್ನು ಬಳಕೆ ಮಾಡಿ ಬೆಳೆಯುವ ಧಾನ್ಯಗಳ ಬಳಕೆ ವಿವಿಧ ರೋಗಗಳಿಗೆ ಆಹ್ವಾನ ನೀಡಿದಂತೆ. ರೈತರು ಸಿರಿ ಧಾನ್ಯಗಳ ಕೃಷಿಗೆ ಒತ್ತು ನೀಡಬೇಕು’ ಎಂದು ಅವರು ಹೇಳಿದರು.

ಸಹಜ ಸಮೃದ್ಧ ಸಾವಯವ ಕೃಷಿಕರ ಬಳಗದ ಸದಸ್ಯ ಶಶಿಧರ್ ಮಾತನಾಡಿ ‘ಸಿರಿಧಾನ್ಯಗಳಲ್ಲಿ ಆಹಾರ ಪದ್ಧತಿ ಕುರಿತು ಮೊದಲ ಬಾರಿಗೆ ಅರಿವು ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಇಲ್ಲಿ ನವಣೆ ಕೋಸಂಬರಿ, ಪಾಲಕ್ ಕೋಸಂಬರಿ, ರೆಡ್ ರಾಜಿನಿಲ್ ಉಸುಲಿ, ಮಿಡಿಕೆ ಕೋಸಂಬರಿ, ಅಮಟೇಕಾಯಿ ಗೊಜ್ಜು, ನವಣೆ ಮಸಾಲೆ ದೋಸೆ, ಹಲಸಿನಕಾಯಿ ಬಿರಿಯಾನಿ, ಗೊಂಗರ ಸೊಪ್ಪಿನ ಚಟ್ನಿ, ಹಾರಕ ಅಕ್ಕಿ ಮೊಸರನ್ನ ಮುಂತಾದ 15 ವಿವಿಧ ಬಗೆಯ ಆಹಾರಗಳನ್ನು ಸಿರಿಧಾನ್ಯಗಳಿಂದ ತಯಾರಿಸಲಾಗಿದೆ. ನಿರೀಕ್ಷೆಗೂ ಮೀರಿ ಸ್ಪಂದನೆ ದೊರೆತಿದೆ’ ಎಂದರು.

ಪತ್ರಕರ್ತರಾದ ನಾಗೇಶ್ ಹೆಗಡೆ, ಕೆ.ಪಿ.ಸುರೇಶ್, ಜಿ.ಕೃಷ್ಣಪ್ರಸಾದ್, ಎನ್.ಆರ್.ಶೆಟ್ಟಿ ಸಾಮೂಹಿಕ ಭೋಜನದಲ್ಲಿ ಪಾಲ್ಗೊಂಡ ನಂತರ ಶಿವರಾಂ ಪೈಲೂರು ಬರೆದ ‘ಕೃಷಿ ಗ್ರಾಮೀಣ ಪತ್ರಿಕೋದ್ಯಮ’ ಎಂಬ ಕೈಪಿಡಿ ಬಿಡುಗಡೆ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT