ಶುಕ್ರವಾರ, ಸೆಪ್ಟೆಂಬರ್ 17, 2021
26 °C
ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ ಕಾರ್ಯಾಗಾರದಲ್ಲಿ ಸಲಹೆ

ಬೆಂಗಳೂರು ಗ್ರಾಮಾಂತರ: ‘ನರೇಗಾದಡಿ ₹150 ಕೋಟಿ ವೆಚ್ಚ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Deccan Herald

ದೇವನಹಳ್ಳಿ: 2018ನೇ ಸಾಲಿನ ಅಂತ್ಯಕ್ಕೆ ನರೇಗಾ ಯೋಜನೆಯಡಿ ಕನಿಷ್ಠ ₹150 ಕೋಟಿ ವೆಚ್ಚದ ಅಭಿವೃದ್ಧಿ ಕಾಮಗಾರಿ ಆಗಬೇಕು ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಆರ್.ಲತಾ ತಿಳಿಸಿದರು.

ಇಲ್ಲಿನ ಡಾ.ಬಿ.ಆರ್ ಅಂಬೇಡ್ಕರ್ ಭವನದಲ್ಲಿ ಶುಕ್ರವಾರ ಜಿಲ್ಲಾ ಪಂಚಾಯಿತಿ ವತಿಯಿಂದ ನಡೆದ ‘ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ ಕಾರ್ಯಾಗಾರ ಮತ್ತು ದನದ ಕೊಟ್ಟಿಗೆ ನಿರ್ಮಾಣ ಅಭಿಯಾನ’ದಲ್ಲಿ ಅವರು ಮಾತನಾಡಿದರು.

ಜಿಲ್ಲೆಯಲ್ಲಿ 70 ಸಾವಿರ ಜಾಬ್‌ಕಾರ್ಡ್ ಹೊಂದಿದವರು ಇದ್ದಾರೆ. ನಾಲ್ಕೂವರೆ ವರ್ಷಗಳಲ್ಲಿ ಕೇವಲ ₹80 ಕೋಟಿಗಷ್ಟೇ ಕಾಮಗಾರಿ ಎಂದರೆ ಫಲಾನುಭವಿಗಳಿಗೆ ಅರಿವಿನ ಕೊರತೆ ಇದೆ. ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಜಾಗೃತಿ ಮೂಡಿಸಬೇಕು ಎಂದರು.

ಪ್ರತಿಯೊಂದು ಜಿಲ್ಲಾ ಪಂಚಾಯಿತಿ ವ್ಯಾಪ್ತಿ 4 ರಿಂದ 5 ಗ್ರಾಮ ಪಂಚಾಯಿತಿಯನ್ನು ಒಳಗೊಂಡಿದೆ. ಸ್ಥಳೀಯ ಜನ ಪ್ರತಿನಿಧಿಗಳು ಮತ್ತು ವಿವಿಧ ಸಹಕಾರ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಪಂಚಾಯಿತಿ ವ್ಯಾಪ್ತಿಯಲ್ಲಿ ಭೇಟಿ ನೀಡಿ ಜನರಿಗೆ ಮನವರಿಕೆ ಮಾಡಬೇಕು ಎಂದು ತಿಳಿಸಿದರು.

ಸರ್ಕಾರ ₹2ಕೋಟಿ ಶಾಸಕರ ವಿಶೇಷ ಅನುದಾನ ನೀಡುತ್ತದೆ. ಇಡೀ ಕ್ಷೇತ್ರದಲ್ಲಿ ಕಾಮಗಾರಿ ನಡೆಸಬೇಕು. ಇಲಾಖೆವಾರು ಅನುದಾನವು ಬರುತ್ತದೆ. ಒಂದು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ನರೇಗಾ ಯೋಜನೆಯಡಿ ₹4.5 ಕೋಟಿಗಿಂತ ಹೆಚ್ಚು ಅನುದಾನ ಬಳಕೆಗೆ ಅವಕಾಶವಿದೆ. ಒಂದು ತಾಲ್ಲೂಕಿನಲ್ಲಿ ಕನಿಷ್ಠ ₹65 ರಿಂದ ₹75 ಕೋಟಿ ಅನುದಾನದ ಕಾಮಗಾರಿ ನಡೆಸಬಹುದು; ಇದಕ್ಕೆ ಇಚ್ಛಾಶಕ್ತಿ ಬೇಕು ಎಂದರು.

ಜಿಲ್ಲೆಯಲ್ಲಿ 25 ಸಾವಿರ ಕುಟುಂಬಗಳಿಗೆ ದನದ ಕೊಟ್ಟಿಗೆ ಇಲ್ಲ. ಈ ಪೈಕಿ 2 ಸಾವಿರ ಕುಟುಂಬಗಳಿಗೆ ಕೊಟ್ಟಿಗೆ ನಿರ್ಮಾಣಕ್ಕೆ ಜಾಗವಿಲ್ಲ. 23 ಸಾವಿರ ಕುಟುಂಬಗಳಿಗೆ ಕೊಟ್ಟಿಗೆ ನಿರ್ಮಾಣ ಮಾಡಲು ನರೇಗಾದಲ್ಲಿ ಅವಕಾಶವಿದೆ. ಎರಡು ವರ್ಷಗಳ ಹಿಂದೆ ರಾಮನಗರ ಜಿಲ್ಲೆಯಲ್ಲಿ 2 ಸಾವಿರ ಪಶುಗಳು ವಿವಿಧ ರೋಗಗಳಿಂದ ಸಾವನ್ನಪ್ಪಿದ್ದವು. ಸಮಗ್ರ ತನಿಖೆ ನಡೆಸಿ 70 ಸಾವಿರ ದನ ಕೊಟ್ಟಿಗೆ ನಿರ್ಮಾಣ ಮಾಡಲಾಯಿತು. ಇದರ ಫಲವಾಗಿ ಪಶುಗಳಿಗೆ ರಕ್ಷಣೆಯ ಜತೆಗೆ ಶೇ 11 ರಷ್ಟು ಹಾಲು ಉತ್ಪಾದನೆಯಾಗಿದೆ ಎಂದು ವಿವರಿಸಿದರು.

ಹಾಲು ಉತ್ಪಾದಕರ ಸಹಕಾರ ಸಂಘಗಳ ಪದಾಧಿಕಾರಿಗಳು ಇದನ್ನು ಅರ್ಥ ಮಾಡಿಕೊಂಡು ಕೊಟ್ಟಿಗೆ ನಿರ್ಮಾಣಕ್ಕೆ ಸಹಕರಿಸಬೇಕು. ಅಂತರ್ಜಲ ಎದುರಿಸುತ್ತಿರುವ ಜಿಲ್ಲೆಯಲ್ಲಿ ಚೆಕ್ ಡ್ಯಾಂಗಳ ಅವಶ್ಯಕತೆ ಇದೆ. ಜಿಲ್ಲೆಯಲ್ಲಿ 600 ರಿಂದ 700 ಚೆಕ್‌ ಡ್ಯಾಂ ನಿರ್ಮಾಣವಾಗಲೇಬೇಕು. ಪಕ್ಷಾತೀತವಾಗಿ ಎಲ್ಲರ ಸಹಕಾರ ಬೇಕು ಎಂದರು.

ಜಿಲ್ಲಾ ಪಂಚಾಯಿತಿ ಪ್ರಭಾರ ಅಧ್ಯಕ್ಷೆ ಅನಂತಕುಮಾರಿ ಮಾತನಾಡಿ, ನರೇಗಾ ಯೋಜನೆ ಎಂದರೆ ಹಣ ಬರುವುದಿಲ್ಲ ಎಂಬ ಭಾವನೆ ಎಲ್ಲೆಡೆ ಇದೆ. ಹಣ ಬರುವ ಬಗ್ಗೆ ಫಲಾನುಭವಿಗಳಿಗೆ ಖಾತ್ರಿ ನೀಡಬೇಕು. ಚುನಾಯಿತ ಸದಸ್ಯರು ಕ್ಷೇತ್ರ ವ್ಯಾಪ್ತಿಯಲ್ಲಿ ಸ್ಥಳೀಯರಿಗೆ ಮನವರಿಕೆ ಮಾಡಬೇಕು ಎಂದರು.

ಪಶು ಪಾಲನಾ ಇಲಾಖೆ ಜಿಲ್ಲಾ ಉಪನಿರ್ದೇಶಕ ಟಿ.ಜಯರಾಮ್, ಸಹಾಯಕ ನಿರ್ದೇಶಕ ಡಾ.ರಮೇಶ್ ಮಾತನಾಡಿದರು. ಶಾಸಕ ನಿಸರ್ಗ ನಾರಾಯಣಸ್ವಾಮಿ, ಜಿಲ್ಲಾ ಪಂಚಾಯಿತಿ ಸಾಮಾಜಿಕ ನ್ಯಾಯ ಸಮಿತಿ ಅಧ್ಯಕ್ಷೆ ರಾಧಮ್ಮ ಮುನಿರಾಜು, ಜಿಲ್ಲಾ ಪಂಚಾಯಿತಿ ಸದಸ್ಯ ಕೆ.ಸಿ.ಮಂಜುನಾಥ್, ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ಭಾರತಿ , ಉಪಾಧ್ಯಕ್ಷೆ ನಂದಿನಿ, ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ಕರಿಯಣ್ಣ, ಯೋಜನಾಧಿಕಾರಿ ವಿನುತಾರಾಣಿ, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಮರುಡಯ್ಯ,ಸಹಾಯಕ ನಿರ್ದೇಶಕ ಪ್ರದೀಪ್,ತಾಲ್ಲೂಕು ಗ್ರಾಮಪಂಚಾಯಿತಿ ನೌಕರರ ಘಟಕದ ಅಧ್ಯಕ್ಷ ಬೀರೇಶ್,ತಾಲ್ಲೂಕು ಪಂಚಾಯಿತಿ ಸದಸ್ಯರು, ಗ್ರಾಮ ಪಂಚಾಯಿತಿ ಅಧ್ಯಕ್ಷರು ಮತ್ತು ಉಪಾಧ್ಯಕ್ಷರು ಹಾಗೂ ಕಾರ್ಯದರ್ಶಿಗಳು, ಹಾಲು ಉತ್ಪಾದಕ ಸಹಕಾರ ಸಂಘದ ಅಧ್ಯಕ್ಷರು ಮತ್ತು ಕಾರ್ಯದರ್ಶಿಗಳು ಭಾಗಹಿಸಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು