ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಕ್ರೀಡೆಯಿಂದ ಉತ್ತಮ ಆರೋಗ್ಯ’

Last Updated 23 ಡಿಸೆಂಬರ್ 2018, 15:59 IST
ಅಕ್ಷರ ಗಾತ್ರ

ಆನೇಕಲ್: ಕ್ರೀಡಾ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳುವ ಮೂಲಕ ದೈಹಿಕ ಆರೋಗ್ಯ ಕಾಪಾಡಿಕೊಳ್ಳಿ ಎಂದು ಬೃಂದಾವನ ವಿದ್ಯಾ ಸಂಸ್ಥೆಯ ಅಧ್ಯಕ್ಷ ಬಿ.ಎಸ್.ಶೇಖರ್ ತಿಳಿಸಿದರು.

ತಾಲ್ಲೂಕಿನ ಇಂಡ್ಲವಾಡಿಯಲ್ಲಿ ಬೃಂದಾವನ ಸಮೂಹ ವಿದ್ಯಾ ಸಂಸ್ಥೆಯ ವತಿಯಿಂದ ಆಯೋಜಿಸಿದ್ದ ಅಂತರಶಾಲಾ ಗುಡ್ಡಗಾಡು ಓಟ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಿ ಅವರು ಮಾತನಾಡಿದರು.

ಕ್ರೀಡೆಗಳಲ್ಲೂ ಹೆಚ್ಚಿನ ಅವಕಾಶಗಳಿವೆ. ರಾಷ್ಟ್ರೀಯ ಅಂತರರಾಷ್ಟ್ರೀಯ ಮಟ್ಟದಲ್ಲೂ ಪಾಲ್ಗೊಳ್ಳಲು ಅವಕಾಶಗಳಿವೆ. ಇಲ್ಲಿ ಉನ್ನತ ಸಾಧನೆ ಮಾಡಿದವರಿಗೆ ಶಿಕ್ಷಣ ಮತ್ತು ಉದ್ಯೋಗದಲ್ಲಿ ಮೀಸಲಾತಿಯೂ ದೊರೆಯುತ್ತದೆ. ಹಾಗಾಗಿ ಕ್ರೀಡೆಗಳ ಬಗ್ಗೆ ತಾತ್ಸಾರ ತೋರದೇ ಕ್ರೀಡೆಗಳಲ್ಲಿ ತೊಡಗಿಸಿಕೊಳ್ಳಬೇಕು. ಗುಡ್ಡಗಾಡು ಓಟ ವಿದ್ಯಾರ್ಥಿಗಳಿಗೆ ಹೊಸ ಅನುಭವ ನೀಡುತ್ತದೆ. ಇದು ವಿದ್ಯಾರ್ಥಿಗಳ ಆರೋಗ್ಯ ಉತ್ತಮವಾಗಿರುವುದಕ್ಕೆ ಸಾಕ್ಷಿಯಾಗಿದೆ ಎಂದರು.

ಗುಡ್ಡಗಾಡು ಓಟದ ಸ್ಪರ್ಧೆಗೆ ಚಾಲನೆ ನೀಡಿದ ವೈದ್ಯ ಡಾ.ಸಿ.ಬಿ.ಮೋಹನ್ ಮಾತನಾಡಿ, ಗುಡ್ಡಗಾಡು ಓಟ ಆಯೋಜಿಸಿರುವುದು ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಪ್ರೋತ್ಸಾಹದಾಯಕವಾಗಿದೆ ಎಂದರು.

ತಾಲ್ಲೂಕು ಪಂಚಾಯಿತಿ ಸದಸ್ಯ ಮಹದೇವಪ್ಪ ಮಾತನಾಡಿ, ಗ್ರಾಮೀಣ ಭಾಗದಲ್ಲಿ ಗುಣಮಟ್ಟದ ಶಿಕ್ಷಣ ನೀಡುವ ಸಂಸ್ಥೆಗಳ ಅವಶ್ಯಕತೆಯಿದೆ. ವಿದ್ಯಾರ್ಥಿಗಳ ಸರ್ವಾಂಗೀಣ ಬೆಳವಣಿಗೆಗೆ ಪೂರಕವಾದ ಕಾರ್ಯಕ್ರಮಗಳನ್ನು ಆಯೋಜಿಸಬೇಕು. ಸೇವಾ ಚಟುವಟಿಕೆಗಳಲ್ಲಿ ವಿದ್ಯಾರ್ಥಿಗಳು ಭಾಗಿಗಳಾಗಲು ಅವಕಾಶ ಕಲ್ಪಿಸಬೇಕು. ಶಾಲೆಗಳಲ್ಲಿ ಎನ್‌ಸಿಸಿ, ಎನ್‌ಎಸ್‌ಎಸ್‌ ಸೇರಿದಂತೆ ವಿವಿಧ ಚಟುವಟಿಕೆಗಳನ್ನು ರೂಪಿಸುವ ಮೂಲಕ ಶಿಸ್ತು, ನಾಯಕತ್ವ ಗುಣಗಳು ಬೆಳೆಯಲು ಸಹಕರಿಸಬೇಕು ಎಂದರು.

ಬೃಂದಾವನ ಸಮೂಹ ಸಂಸ್ಥೆಗಳ ಹರಪನಹಳ್ಳಿ, ಇಂಡ್ಲವಾಡಿ, ಮರಳವಾಡಿ, ಬ್ಯಾಳಗೊಂಡನಹಳ್ಳಿ ಶಾಲೆಗಳ 1800 ವಿದ್ಯಾರ್ಥಿಗಳನ್ನು ನಾಲ್ಕು ವಿಭಾಗಗಳನ್ನಾಗಿ ಮಾಡಿ 8 ಕಿ.ಮೀ. ದೂರದ ನೊಸೇನೂರು, ತಮ್ಮನಾಯಕನಹಳ್ಳಿ, ಸಿದ್ಧನಪಾಳ್ಯ, ತಿಮ್ಮಸಂದ್ರದವರೆಗೆ ಗುಡ್ಡಗಾಡು ಓಟ ಆಯೋಜಿಸಲಾಗಿತ್ತು. ವಿಜೇತರಾದ ವಿದ್ಯಾರ್ಥಿಗಳಿಗೆ ನಾಲ್ಕು ವಿಭಾಗಗಳಲ್ಲಿಯೂ ಪ್ರತ್ಯೇಕ ಬಹುಮಾನ ನೀಡಲಾಯಿತು.

ಬೃಂದಾವನ ಸಂಸ್ಥೆಯ ಕಾರ್ಯದರ್ಶಿ ಪುಷ್ಪಾ, ಪ್ರಾಚಾರ್ಯರಾದ ಮಂಜುನಾಥ್, ಪ್ಯಾಟ್ರಿಕ್, ರಾಜಣ್ಣ, ಕಮಲಾ, ಜ್ಯೋತಿ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT