ಇಂದಿನಿಂದ ಎಸ್‌ಎಸ್‌ಎಲ್‌ಸಿ ಪರೀಕ್ಷೆ

ಗುರುವಾರ , ಏಪ್ರಿಲ್ 25, 2019
33 °C
ಪರೀಕ್ಷಾ ಸಮಯಕ್ಕಿಂತ 30 ನಿಮಿಷ ಮೊದಲು ಪರೀಕ್ಷಾ ಕೇಂದ್ರದಲ್ಲಿ ಹಾಜರಾಗಲು ಸಲಹೆ

ಇಂದಿನಿಂದ ಎಸ್‌ಎಸ್‌ಎಲ್‌ಸಿ ಪರೀಕ್ಷೆ

Published:
Updated:
Prajavani

ದೇವನಹಳ್ಳಿ: ಎಸ್ಸೆಸ್ಸೆಲ್ಸಿ ವಾರ್ಷಿಕ ಪರೀಕ್ಷೆ ಮಾರ್ಚ್‌ 21ರಿಂದ ಆರಂಭವಾಗುತ್ತಿದ್ದು ವಿದ್ಯಾರ್ಥಿಗಳು ಆತ್ಮವಿಶ್ವಾಸದಿಂದ ಪರೀಕ್ಷೆ ಬರೆಯಬೇಕು ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಗಾಯಿತ್ರಿದೇವಿ ಹೇಳಿದರು.

ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿಯಲ್ಲಿ ವಾರ್ಷಿಕ ಪರೀಕ್ಷೆ ಪೂರ್ವಭಾವಿ ಸಿದ್ಧತೆ ಕುರಿತು ಮಾತನಾಡಿದ ಅವರು, ’ಪರೀಕ್ಷೆ ಬರೆಯುವ ವಿದ್ಯಾರ್ಥಿಗಳು ಆತಂಕಕ್ಕೆ ಒಳಗಾಗಬಾರದು. ಪರೀಕ್ಷಾ ಸಮಯಕ್ಕಿಂತ 30 ನಿಮಿಷ ಮೊದಲು ಪರೀಕ್ಷಾ ಕೇಂದ್ರದಲ್ಲಿ ಹಾಜರಾಗಬೇಕು. ಪೋಷಕರು ಮಕ್ಕಳ ಮೇಲೆ ಒತ್ತಡ ತರಬಾರದು. ವಿದ್ಯಾರ್ಥಿಗಳು ಪ್ರತಿಯೊಂದು ಪ್ರಶ್ನೆಗೂ ಉತ್ತರಿಸಬೇಕು’ ಎಂದು ಕಿವಿ ಮಾತು ಹೇಳಿದರು.

’ಶೇ 40ಕ್ಕಿಂತ ಕಡಿಮೆ ಅಂಕ ಗಳಿಸಿರುವ ವಿದ್ಯಾರ್ಥಿಗಳ ಗುಂಪನ್ನು ಪರಿಗಣಿಸಿ ಅವರಿಗೆ ವಿಶೇಷ ಭೋದನೆ ಮತ್ತು ಪರೀಕ್ಷೆಯಲ್ಲಿ ಅಂಕಗಳಿಸುವ ಸುಲಭ ಮಾರ್ಗಗಳನ್ನು ಹೇಳಿಕೊಡಲಾಗಿದೆ. ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಆರ್.ಲತಾ, ಜಿಲ್ಲಾಧಿಕಾರಿ ಕರೀಗೌಡ, ಜಿಲ್ಲಾ ಪಂಚಾಯಿತಿ ಲೆಕ್ಕಾಧಿಕಾರಿ ಶೋಭಾ ಅವರು ಈ ವಿಚಾರದಲ್ಲಿ ವಿಶೇಷ ಆಸಕ್ತಿ ವಹಿಸಿದ್ದರು. ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಕೃಷ್ಣಮೂರ್ತಿ ಅವರ ಕಾಳಜಿಯಿಂದ ತರಗತಿಗಳು ನಡೆದಿವೆ. ಈ ಬಾರಿ ಉತ್ತಮ ಫಲಿತಾಂಶ ಬರುವ ನಿರೀಕ್ಷೆ ಇದೆ’ ಎಂದರು.

’ತಾಲ್ಲೂಕಿನ ಒಟ್ಟು 12 ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆ ನಡೆಯಲಿದೆ. ಪ್ರತಿಯೊಂದು ಪರೀಕ್ಷಾ ಕೇಂದ್ರದಲ್ಲಿ 4 ರಿಂದ 5 ಸಿ.ಸಿ. ಟಿವಿ ಕ್ಯಾಮೆರಾ ಅಳವಡಿಸಲಾಗಿದೆ. 10 ನೇ ತರಗತಿ ನೂತನ ವಿದ್ಯಾರ್ಥಿಗಳ ಒಟ್ಟು ಸಂಖ್ಯೆ 2,907. ಪುನರಾವರ್ತಿತ ವಿದ್ಯಾರ್ಥಿಗಳು 39. ಖಾಸಗಿ ಅಭ್ಯರ್ಥಿಗಳು 200 ಜನ ಇದ್ದಾರೆ. ಒಟ್ಟು ಈ ಬಾರಿ ತಾಲ್ಲೂಕಿನಲ್ಲಿ 3,146 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ’ ಎಂದರು.

ಪರೀಕ್ಷೆಗೆ ಮೊಬೈಲ್, ಸ್ಮಾರ್ಟ್ ವಾಚ್ ನಿಷೇಧಿಸಲಾಗಿದೆ. ಪರೀಕ್ಷೆ ಸಂದರ್ಭದಲ್ಲಿ 144ನೇ ಸೆಕ್ಷನ್‌ ಜಾರಿಯಲ್ಲಿರುತ್ತದೆ. ಸರ್ಕಾರಿ ಪ್ರೌಢಶಾಲೆ 19, ಅನುದಾನಿತ ಪ್ರೌಢಶಾಲೆ 9, ಖಾಸಗಿ ಪ್ರೌಢ ಶಾಲೆ 31 ಸೇರಿ ಒಟ್ಟು 59 ಶಾಲೆಗಳ ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ ಎಂದು ವಿವರಿಸಿದರು.

ಪರೀಕ್ಷೆ ಪ್ರಕ್ರಿಯೆಯಲ್ಲಿ 13 ಮುಖ್ಯ ಅಧೀಕ್ಷಕರು, 12 ಸಹಾಯಕ ಅಧೀಕ್ಷಕರು, 12 ಸ್ಥಾನಿಕ ಜಾಗೃತದಳಗಳು ಕಾರ್ಯವೆಸಗಲಿವೆ. 8 ಮಾರ್ಗಾಧಿಕಾರಿಗಳು, 252 ಕೊಠಡಿ ಮೇಲ್ವಿಚಾರಕರು, ತಾಲ್ಲೂಕು ಮಟ್ಟದ 4 ಜಾಗೃತದಳ,  ಜಿಲ್ಲಾ ಹಂತದ 12 ಜಾಗೃತದಳಗಳು ಕಾರ್ಯನಿರ್ವಹಿಸಲಿವೆ ಎಂದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !