ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜ್ಯ ಮಟ್ಟದ ಜಾಂಬೋರೆಟ್‌ ನಾಳೆಯಿಂದ

ಡಿ. 27ರಿಂದ ಜ. 2ರವರೆಗೆ ಕರ್ನಾಟಕ ರಾಜ್ಯ ಸ್ಕೌಟ್ಸ್ - ಗೈಡ್ಸ್ 28ನೇ ಜಾಂಬೋರೆಟ್ ಆಯೋಜನೆ
Last Updated 25 ಡಿಸೆಂಬರ್ 2019, 16:30 IST
ಅಕ್ಷರ ಗಾತ್ರ

ದೊಡ್ಡಬಳ್ಳಾಪುರ: ‘ಇಲ್ಲಿನ ಆ್ಯನಿಬೆಸೆಂಟ್ ಸ್ಕೌಟ್ಸ್ ಮತ್ತು ಗೈಡ್ಸ್ ರಾಜ್ಯ ತರಬೇತಿ ಮತ್ತು ಶಿಬಿರ ಕೇಂದ್ರದಲ್ಲಿ ಡಿ. 27ರಿಂದ ಜ. 2ರವರೆಗೆ ಕರ್ನಾಟಕ ರಾಜ್ಯಸ್ಕೌಟ್ಸ್ - ಗೈಡ್ಸ್28ನೇ ಜಾಂಬೋರೆಟ್ ನಡೆಯಲಿದೆ’ ಎಂದು ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್‌ನ ರಾಜ್ಯ ಮುಖ್ಯ ಆಯುಕ್ತ ಪಿ.ಜಿ.ಆರ್.ಸಿಂಧ್ಯ ತಿಳಿಸಿದ್ದಾರೆ.

ಬೆಸೆಂಟ್‌ ಪಾರ್ಕ್‌ನಲ್ಲಿ ನಡೆಯಲಿರುವ ಜಾಂಬೋರೆಟ್ ಕುರಿತು ಮಾಹಿತಿ ನೀಡಿದ ಅವರು, ‘ರಾಜ್ಯದ ‌35 ಶೈಕ್ಷಣಿಕ ಜಿಲ್ಲೆಗಳಿಂದ 5 ಸಾವಿರ ಮಂದಿ ವಿದ್ಯಾರ್ಥಿಗಳು ಭಾಗವಹಿಸಲಿದ್ದಾರೆ. ಡಿ. 27ರಂದು ಮಧ್ಯಾಹ್ನ 3 ಗಂಟೆಗೆ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಸಮಾರಂಭದ ಅಧ್ಯಕ್ಷತೆಯನ್ನು ಶಾಸಕ ಟಿ.ವೆಂಕಟರಮಣಯ್ಯ ವಹಿಸಲಿದ್ದಾರೆ’ ಎಂದು ಹೇಳಿದರು.

‘ಗಾಂಧೀಜಿ ಅವರ 150ನೇ ಜನ್ಮದಿನಾಚರಣೆ ಅಂಗವಾಗಿ ಗಾಂಧೀಜಿ ಕುರಿತ ವಿಶೇಷ ವಸ್ತು ಪ್ರದರ್ಶನ ನಡೆಯಲಿದೆ. ಇದೇ ಸಂದರ್ಭದಲ್ಲಿ ರಾಜ್ಯ ಅಂಚೆ ಇಲಾಖೆ ಮುಖ್ಯಸ್ಥರಾದ ಚಾರ್ಲ್‌ ಲೇನನ್‌ ಅವರು ಅಂಚೆ ಚೀಟಿ ಬಿಡುಗಡೆ ಮಾಡಲಿದ್ದಾರೆ. ದೊಡ್ಡಬಳ್ಳಾಪುರದ ಬೆಸೆಂಟ್‌ ಪಾರ್ಕ್‌ನಲ್ಲಿ ನಡೆಯುತ್ತಿರುವ 3ನೇ ಜಾಂಬೋರೆಟ್ ಇದಾಗಿದೆ. ಇಲ್ಲಿನ ಬೆಸೆಂಟ್‌ ಪಾರ್ಕ್‌ ಅನ್ನು ಅಂತರರಾಷ್ಟ್ರೀಯ ತರಬೇತಿ ಕೇಂದ್ರವನ್ನಾಗಿ ರೂಪಿಸುವ ಗುರಿ ಹೊಂದಲಾಗಿದೆ’ ಎಂದು ಹೇಳಿದರು.

‘ದೇಶದಲ್ಲೇ ಕರ್ನಾಟಕ ಭಾರತ್‌ ಹಾಗೂ ಸ್ಕೌಟ್ಸ್‌ ಮತ್ತು ಗೈಡ್ಸ್‌ ಪ್ರಥಮ ಸ್ಥಾನ ಪಡೆದಿದ್ದು 7 ಬಹುಮಾನಗಳನ್ನು ಗಳಿಸಿದೆ. ಮುಂದಿನ ವರ್ಷ ಅಂತರರಾಷ್ಟ್ರೀಯ ಜಾಂಬೋರೆಟ್ ನಡೆಸಲು ಅನುಮತಿ ನೀಡುವಂತೆ ಕೋರಿ ವಿಶ್ವಸಂಸ್ಥೆಗೆ ಮನವಿ ಸಲ್ಲಿಸಲಾಗಿದೆ’ ಎಂದರು.

‘ರಾಜ್ಯದ 17 ವಿಶ್ವವಿದ್ಯಾಲಯಗಳಲ್ಲಿ ರೋಜರ್ಸ್‌ ಮತ್ತು ರೇಂಜರ್ಸ್‌ ವಿಭಾಗಗಳನ್ನು ಆರಂಭಿಸಲಾಗಿದೆ. ಸ್ಕೌಟ್ಸ್ ಮತ್ತು ಗೈಡ್ಸ್‌ ತರಬೇತಿ ಪಡೆದವರಿಗೆ ಸ್ನಾತಕೋತ್ತರ, ತಾಂತ್ರಿಕ, ವೈದ್ಯಕೀಯ ಪ್ರವೇಶದಲ್ಲಿ ಹೆಚ್ಚಿನ ಮೀಸಲಾತಿ ನೀಡುವಂತೆ ಕೋರಲಾಗಿದೆ’ ಎಂದು ಹೇಳಿದರು.

ಸ್ಕೌಟ್ಸ್‌ ಮತ್ತು ಗೈಡ್ಸ್‌ನ ರಾಜ್ಯ ಸಂಘಟಕರಾದ ಮಂಜುಳಾ, ತರಬೇತಿ ಮುಖ್ಯಸ್ಥ ಜನಾರ್ಧನ್‌, ರಾಜ್ಯ ಉಪಾಧ್ಯಕ್ಷ ಪಳನಿ, ಎಂ.ಎಚ್‌.ಯಲ್ಲಪ್ಪ, ಶೇಷಾದ್ರಿ, ಗೀತಾ ನಟರಾಜ್‌, ಪ್ರೊ.ಎಂ.ಜಿ.ಚಂದ್ರಶೇಖರ್‌ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT