ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಂಗಳೂರು ಗ್ರಾಮಾಂತರ: ಕಳ್ಳರ ಕೈಯಲ್ಲೇ ಕೀಲಿ...!

ಗಣಿ ಮಾಲೀಕರ ಮುಟ್ಟುಗೋಲಾದ ಕಲ್ಲು ದಿಮ್ಮಿ
ಅಕ್ಷರ ಗಾತ್ರ

ದೇವನಹಳ್ಳಿ: ಕೊಯಿರಾ ಪುರಾತನ ಇತಿಹಾಸದ ಜತೆಗೆ ಬಿಳಿ ಚಿನ್ನವೆಂದು ಖ್ಯಾತಿ ಪಡೆದುಕೊಂಡಿರುವ ಕಲ್ಲುಗಣಿ ಇತಿಹಾಸಕ್ಕೂ ಹೆಸರಾಗಿದೆ. ಆದರೆ, ಕಳೆದ ಆರೇಳು ವರ್ಷಗಳ ಹಿಂದೆ ಅಕ್ರಮ ಗಣಿಕಾರಿಕೆ ನಡೆಸಿದವರ ಕಥೆ ಏನಾಯಿತು ಎಂಬುದೇ ಸಾರ್ವಜನಿಕರ ಪ್ರಶ್ನೆ.

ಅಧಿಕಾರಿಗಳು ಹೆಸರಿಗೊಂದಿಷ್ಟು ದಾಳಿ ಮಾಡಿ ಮುಟ್ಟುಗೋಲಾದ ಕಲ್ಲು ದಿಮ್ಮಿಗಳನ್ನು ಗಣಿ ಮಾಲೀಕರ ಸುಪರ್ದಿಗೇ ಬಿಟ್ಟು ಕಳ್ಳರ ಕೈಗೆ ಕೀಲಿ ಕೊಟ್ಟಂತಾದ ಸಂಗತಿ ಇಲ್ಲಿದೆ.

ಮೊದಲ ಹೊಡೆತ: ಅರ್ಕಾವತಿ ನದಿ ಪಾತ್ರದ ಜತೆಗೆ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ತಾಲ್ಲೂಕಿನಲ್ಲಿ ಅಸ್ತಿತ್ವಕ್ಕೆ ಬಂದ ನಂತರ ಬಿ.ಎಂ.ಆರ್.ಡಿ, ಪರಿಸರ ಮತ್ತು ಮಾಲಿನ್ಯ ಇಲಾಖೆ, ಬೈಯಾಪ, ಜಿಲ್ಲಾಡಳಿತ ಮತ್ತು ಸರ್ಕಾರದ ಉನ್ನತ ಮಟ್ಟದ ಕಾರ್ಯದರ್ಶಿಗಳು ನಡೆಸಿದ ಮೊದಲ ಸಭೆಯಲ್ಲಿ ಬೈಯಾಪ 15ರಿಂದ 25 ಕಿ.ಮೀ ವ್ಯಾಪ್ತಿಯಲ್ಲಿನ ಗಣಿಗಾರಿಕೆ ಪರವಾನಗಿ ರದ್ದುಗೊಳಿಸಬೇಕೆಂದು ನಿರ್ಣಯಿಸಿ ಕೊಯಿರಾ, ಮನೆಗೊಂಡನಹಳ್ಳಿ, ಮಾಯಸಂದ್ರ, ಚಿಕ್ಕಗೊಲ್ಲಹಳ್ಳಿ ಮೀಸಗಾನಹಳ್ಳಿ ಸುತ್ತಮುತ್ತ ನಡೆಯುತ್ತಿರುವ ಗಣಿಗಾರಿಕೆಯನ್ನು ಸರ್ಕಾರ ಸ್ಥಗಿತಗೊಳಿಸಿ ಆದೇಶ ನೀಡಿತ್ತು. ಇದು ಗಣಿ ಪರವಾನಗಿ ಪಡೆದ ಮಾಲೀಕರಿಗೆ ನುಂಗಲಾರದ ತುತ್ತಾಯಿತು.

ಕಳ್ಳ ಸಾಗಾಟ ಶುರು: ಗಣಿ ನಿಷೇಧದಿಂದ ತತ್ತರಿಸಿದ ಮಾಲೀಕರು ಹಗಲು– ರಾತ್ರಿ ಬೃಹತ್ ಗಾತ್ರದ ಕಲ್ಲು ದಿಮ್ಮಿಗಳನ್ನು ರಾಜಾರೋಷವಾಗಿ ಸಾಗಣೆ ಮಾಡುತ್ತಲೇ ಇದ್ದರು. ಈ ಬಗ್ಗೆ ಯಾವ ಅಧಿಕಾರಿ ಕೂಡ ಚಕಾರ ಎತ್ತಿರಲಿಲ್ಲ. ಸಾರ್ವಜನಿಕರಿಂದ ದೂರು ಬಂದ ಮೇಲೆ ಎಚ್ಚೆತ್ತುಕೊಂಡ ಜಿಲ್ಲಾಧಿಕಾರಿ, ಗಣಿ ಇಲಾಖೆ ಅಧಿಕಾರಿಗಳು ಮತ್ತು ಪೊಲೀಸರು 2014 ಮೇ24ರಂದು ಏಕಕಾಲದಲ್ಲಿ ಚಿಕ್ಕಗೊಲ್ಲಹಳ್ಳಿ ಬಳಿಯ ಬೊಡುಬಂಡೆ ಕಲ್ಲುಗಣಿ, ಮೀಸಗಾನಹಳ್ಳಿ, ಮಾಯಸಂದ್ರ, ಸ.ನಂ.ವ್ಯಾಪ್ತಿಯಲ್ಲಿ ಅಕ್ರಮವಾಗಿ ತೆಗೆದಿದ್ದ ಗ್ರೇ ಗ್ರಾನೈಟ್‌ ಕಲ್ಲು ದಿಮ್ಮಿಗಳ ಪ್ರದೇಶಕ್ಕೆ ದಾಳಿ ನಡೆಸಿದ ಗಣಿ ಇಲಾಖೆಯು ಇಲ್ಲಿನ ಸ್ಥಿತಿಗತಿ ಬಗ್ಗೆ ನಿರ್ದೇಶಕರಿಗೆ ವರದಿ ನೀಡಿತ್ತು.

ಗಣಿ ಮಾಲೀಕರಿಗೇ ಹೊಣೆಗಾರಿಕೆ!: ಅಕ್ರಮ ಕಲ್ಲು ದಿಮ್ಮಿಗಳನ್ನು ವಶಕ್ಕೆ ಪಡೆದ ಅಧಿಕಾರಿಗಳು ಒಂದೆಡೆ ದಾಸ್ತಾನು ಮಾಡದೆ ಐದಾರು ಕಿ.ಮೀ. ವ್ಯಾಪ್ತಿಯಲ್ಲಿ ಎಲ್ಲೆಂದರಲ್ಲಿ ಹಾಗೆಯೇ ಬಿಟ್ಟು ಸುಮ್ಮನಾಗಿದ್ದರು. ಲಕ್ಷಾಂತರ ರೂಪಾಯಿ ಬೆಲೆ ಬಾಳುವ ಕಲ್ಲು ದಿಮ್ಮಿಗಳು ಹಲವರ ಪಾಲಾದವು. ಇನ್ನೊಂದೆಡೆ, ಗಣಿ ಗುತ್ತಿಗೆ ಪಡೆದ ಮಾಲೀಕರ ಬಳಿಯೇ ಮುಚ್ಚಳಿಕೆ ಬರೆಸಿಕೊಂಡು ಅವರ ಸುಪರ್ದಿಗೆ ಈ ಕಲ್ಲು ದಿಮ್ಮಿಗಳನ್ನು ನೀಡಲಾಯಿತು. ಕಳ್ಳನ ಕೈಗೆ ಕೀಲಿ ಕೊಟ್ಟಂತೆ ಆಯಿತು ಎನ್ನುತ್ತಾರೆ ಸ್ಥಳೀಯರು. ಮಾಹಿತಿ ಹಕ್ಕಿನಡಿ ದಾಖಲೆಗಳನ್ನು ಪರಿಶೀಲಿಸಿದಾಗ ಅಧಿಕಾರಿಗಳ ಕಣ್ಣಾಮುಚ್ಚಾಲೆ ಅ‌ರ್ಥವಾಗುತ್ತದೆ ಎನ್ನುತ್ತಾರೆ ಆರ್‌.ಟಿ.ಐ ಕಾರ್ಯಕರ್ತ ಚಿಕ್ಕೇಗೌಡ.

2014 ಡಿ.23ರಂದು ತಾಲ್ಲೂಕು ಬಂಡೆ ಮಾಲೀಕರ ಕ್ಷೇಮಾಭಿವೃದ್ಧಿ ಸಂಘ ಜಿಲ್ಲಾಧಿಕಾರಿಗೆ ಮನವಿಯೊಂದನ್ನು ಸಲ್ಲಿಸಿತು. ಮುಚ್ಚಳಿಕೆ ಬರೆಸಿಕೊಂಡು ತಮ್ಮ ಸುಪರ್ದಿಗೆ ನೀಡಿರುವ ಕಲ್ಲು ದಿಮ್ಮಿಗಳನ್ನು ಆರು ತಿಂಗಳಾದರೂ ಮುಟ್ಟುಗೋಲು ಹಾಕಿಕೊಂಡಿಲ್ಲ. ರಾತ್ರೋರಾತ್ರಿ ಕಣ್ಮರೆಯಾಗುತ್ತಿವೆ ಎಂದು ಜಿಲ್ಲಾಧಿಕಾರಿಗೆ ದೂರು ಸಲ್ಲಿಸಿದ್ದರು.

ಜಿಲ್ಲಾಧಿಕಾರಿ ನೇತೃತ್ವದ ಕಾರ್ಯಪಡೆ ಸಮಿತಿ ನೀಡಿದ ಪ್ರಸ್ತಾವದಂತೆ 2016 ಏ.11ರಂದು 2848 ಕಲ್ಲು ದಿಮ್ಮಿಗಳಿಗೆ ಹರಾಜು ಪ್ರಕ್ರಿಯೆ ನಡೆಯಲಿದೆ ಎಂದು ಇಲಾಖೆ ಜಾಹೀರಾತು ನೀಡಿತು. ಆದರೆ, ವಿವಿಧ ಕಾರಣದಿಂದ ಹರಾಜು ಪ್ರಕ್ರಿಯೆ ನಡೆಯಲೇ ಇಲ್ಲ.

2018 ಜೂನ್ ‌8ರಂದು ಎರಡನೇ ಬಾರಿ ನಡೆದ ಹರಾಜಿನಲ್ಲಿ ಬಿಡ್ಡುದಾರರು ಭಾಗವಹಿಸಲಿಲ್ಲ. ಇದೇ ಸಮಯಕ್ಕೆ ಒಂದು ಸಾವಿರ ಅಲಂಕಾರಿಕ ಕಲ್ಲು ದಿಮ್ಮಿಗಳ ಬಗ್ಗೆ ವಿವರವಿಲ್ಲ ಎಂದು ಗಣಿ ಮತ್ತು ಭೂವಿಜ್ಞಾನ ಇಲಾಖೆ ಜಿಲ್ಲಾ ಉಪನಿರ್ದೇಶಕರು, ಗಣಿ ಇಲಾಖೆ ಆಯುಕ್ತರಿಗೆ ಪತ್ರದ ಮೂಲಕ ತಿಳಿಸುತ್ತಾರೆ.

ಮುಂದುವರಿಯುವುದು...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT