ಅರಣ್ಯ ನಾಶ ತಡೆ ಜಾಗೃತಿಗೆ ಬೀದಿ ನಾಟಕ ಪ್ರದರ್ಶನ

7

ಅರಣ್ಯ ನಾಶ ತಡೆ ಜಾಗೃತಿಗೆ ಬೀದಿ ನಾಟಕ ಪ್ರದರ್ಶನ

Published:
Updated:
Prajavani

ದೊಡ್ಡಬಳ್ಳಾಪುರ: ತಾಲ್ಲೂಕಿನ ಸಾಸಲು ಹಾಗೂ ತೂಬಗೆರೆ ಹೋಬಳಿಯ ಬೆಟ್ಟದ ತಪ್ಪಲಿನಲ್ಲಿ ಬರುವ ಗ್ರಾಮಗಳಲ್ಲಿ ಯುವ ಸಂಚಲನ ಹಾಗೂ ವಲಯ ಅರಣ್ಯ ಇಲಾಖೆ ಸಹಯೋಗದಲ್ಲಿ, ಅರಣ್ಯ ಸಂಪತ್ತು ಬೆಂಕಿಗಾಹುತಿಯಾಗುವುದನ್ನು ತಡೆಗಟ್ಟುವ ಕುರಿತು ಜಾಗೃತಿ ಮೂಡಿಸುವಂತಹ ಬೀದಿ ನಾಟಕ ಹಾಗೂ ಜಾಗೃತಿ ಗೀತೆಗಳನ್ನು ಹಾಡಲಾಯಿತು.

ಯುವ ಸಂಚಲನ ಅಧ್ಯಕ್ಷ ಚಿದಾನಂದ್ ಮಾತನಾಡಿ, ‘ಬೆಟ್ಟದಲ್ಲಿ ಸಹಜವಾಗಿ ಹತ್ತಾರು ಜಾತಿಯ ಸಸಿಗಳು ಬೆಳೆಯುತ್ತವೆ. ಆದರೆ, ಬೆಟ್ಟದ ತಪ್ಪಲಿನ ಗ್ರಾಮಗಳಲ್ಲಿನ ಜನರು ತಪ್ಪು ತಿಳಿವಳಿಕೆಯಿಂದ ಬೇಸಿಗೆಯಲ್ಲಿ ಬೆಟ್ಟಕ್ಕೆ ಬೆಂಕಿ ಹಚ್ಚುತ್ತಾರೆ. ಇದರಿಂದಾಗಿ ಅಪಾರ ಪ್ರಮಾಣದಲ್ಲಿ ಅರಣ್ಯ, ಸಸ್ಯ, ಕೀಟ, ಸಣ್ಣ ಪುಟ್ಟ ಪ್ರಾಣಿಸಂಕುಲ ನಾಶವಾಗುತ್ತಿದೆ. ಜತೆಗೆ ಬೆಟ್ಟ ಬೋಳು ಬೋಳಾಗಿ, ಮೋಡಗಳನ್ನು ತಡೆದು ಮಳೆ ಸುರಿಸುವುದನ್ನೇ ನಿಲ್ಲಿಸಿವೆ’ ಎಂದರು.

‘ಪ್ರತಿ ವರ್ಷ ಅರಣ್ಯ ಇಲಾಖೆ ಹಾಗೂ ಇತರೆ ಸಂಘ ಸಂಸ್ಥೆಗಳು ಬೆಟ್ಟದ ತಪ್ಪಲಿನಲ್ಲಿ ಸಸಿಗಳನ್ನು ನೆಡುತ್ತಾರೆ. ಆದರೆ, ನಮ್ಮ ಬೇಜವಾಬ್ದಾರಿತನದಿಂದ ಹಚ್ಚುವ ಬೆಂಕಿಗೆ ಸಸಿಗಳು ಸುಟ್ಟು ನಾಶವಾಗುತ್ತವೆ. ಮಳೆ ಇಲ್ಲದೆ ಕುಡಿಯುವ ನೀರಿಗೂ ತತ್ವಾರ ಉಂಟಾಗಿರುವ ದಿನಗಳಲ್ಲಿ ಬೆಟ್ಟ ಗುಡ್ಡಗಳಲ್ಲಿನ ಅರಣ್ಯ ಸಂಪತ್ತು ಸೇರಿದಂತೆ ಸಾಧ್ಯವಾದಷ್ಟು ಎಲ್ಲ ಕಡೆ ಸಸಿಗಳನ್ನು ನೆಟ್ಟು ಪೋಷಿಸಬೇಕು. ಬೆಂಕಿ ಹಚ್ಚಿರುವುದು ಸಾಬೀತಾದರೆ ಅರಣ್ಯ ಕಾಯ್ದೆ ಪ್ರಕಾರ ಆ ವ್ಯಕ್ತಿಗೆ ಕಠಿಣ ಶಿಕ್ಷೆಗೆ ಗುರಿಯಾಗಬೇಕಿದೆ. ಈ ನಿಟ್ಟಿನಲ್ಲಿ ಬೀದಿ ನಾಟಕಗಳ ಮೂಲಕ ಜನರಲ್ಲಿ ಅರಿವು ಮೂಡಿಸಿ ಅರಣ್ಯ ಸಂಪತ್ತು ಬೆಂಕಿಗೆ ಆಹುತಿಯಾಗುವುದನ್ನು ತಡೆಯುವ ಕೆಲಸ ಮಾಡಲಾಗುತ್ತಿದೆ‘ ಎಂದರು.

ಸಾಸಲು ವಿಭಾಗದ ಉಪ ಅರಣ್ಯ ಅಧಿಕಾರಿ ಸೀನಪ್ಪ, ಯುವ ಸಂಚಲನ ಬೀದಿ ನಾಟಕ ತಂಡದ ಭರತ್, ದಿವಾಕರ್ ನಾಗ್, ಕೆಂಪರಾಜ್, ಸತೀಶ್, ದಿವಾಕರ್ ಇದ್ದರು.

 

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !