ಎಸ್‌ಎಸ್‌ಎಲ್‌ಸಿಯಲ್ಲಿ ಗ್ರಾಮಾಂತರ ಜಿಲ್ಲೆ 14ನೇ ಸ್ಥಾನಕ್ಕೆ: ಪರಿಶೀಲನೆ

7

ಎಸ್‌ಎಸ್‌ಎಲ್‌ಸಿಯಲ್ಲಿ ಗ್ರಾಮಾಂತರ ಜಿಲ್ಲೆ 14ನೇ ಸ್ಥಾನಕ್ಕೆ: ಪರಿಶೀಲನೆ

Published:
Updated:
Prajavani

ದೇವನಹಳ್ಳಿ: ಎಸ್‌ಎಸ್‌ಎಲ್‌ಸಿ ಪರೀಕ್ಷಾ ಫಲಿತಾಂಶದಲ್ಲಿ ಗ್ರಾಮಾಂತರ ಜಿಲ್ಲೆ 2016ರಲ್ಲಿ ಒಂದನೇ ಸ್ಥಾನದಲ್ಲಿ ಇದುದು 2017ರಲ್ಲಿ ಹತ್ತನೇ ಸ್ಥಾನಕ್ಕೂ, 2018ರಲ್ಲಿ ಹದಿನಾಲ್ಕನೇ ಸ್ಥಾನಕ್ಕೂ ಕುಸಿದಿದೆ. ವರ್ಷದಿಂದ ವರ್ಷಕ್ಕೆ ಕುಸಿಯುತ್ತಿರುವ ಜಿಲ್ಲೆ ಫಲಿತಾಂಶ ಸುಧಾರಣೆಗೆ ಶಿಕ್ಷಕರ ಶ್ರಮ ಅಗತ್ಯ ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಆರ್.ಲತಾ ಹೇಳಿದರು.

ಬೆಂಗಳೂರು ಗ್ರಾಮಾಂತರ ಜಿಲ್ಲಾ ಪಂಚಾಯಿತಿ ಕಚೇರಿ ಸಭಾಂಗಣದಲ್ಲಿ ಗಣಿತ ವಿಷಯ ಬೋಧಿಸುವ ಸಂಪನ್ಮೂಲ ಶಿಕ್ಷಕರ ಬೋಧನಾ ಬಲವರ್ಧನೆಗಾಗಿ ನಡೆದ ವಿಚಾರ ವಿನಿಮಯ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಕಲಿಕೆಯಲ್ಲಿ ಹಿಂದುಳಿದಿರುವ ಹತ್ತನೇ ತರಗತಿ‌ ವಿಶೇಷ ಪರಿಗಣಿತ ಗುಂಪಿನ(ವಿಪಿಜೆ) ಮಕ್ಕಳಿಗಾಗಿ ವಾರಾಂತ್ಯದಲ್ಲಿ ವಿಶೇಷ ತರಗತಿಗಳನ್ನು ಜಿಲ್ಲೆಯ 42ವಿಶೇಷ ತರಗತಿ ಕೇಂದ್ರಗಳಲ್ಲಿ ನಡೆಸಲಾಗುತ್ತಿದೆ ಎಂದು ತಿಳಿಸಿದರು.

ಜಿಲ್ಲೆಯ 63 ಸರ್ಕಾರಿ ಹಾಗೂ 47 ಅನುದಾನಿತ ಪ್ರೌಢ ಶಾಲೆಗಳಲ್ಲಿ ಹತ್ತನೇ ತರಗತಿ ವಿಶೇಷ ಪರಿಗಣಿತ ಮಕ್ಕಳಿಗಾಗಿ ಗಣಿತ, ವಿಜ್ಞಾನ, ಇಂಗ್ಲಿಷ್ ಹಾಗೂ ಸಮಾಜ ವಿಜ್ಞಾನ ವಿಷಯ ಬೋಧನೆಗಾಗಿ 160 ಸಂಪನ್ಮೂಲ ಶಿಕ್ಷಕರನ್ನು ಬಳಸಿಕೊಳ್ಳಲಾಗುತ್ತಿದೆ ಎಂದರು.

ಮಕ್ಕಳು ಕಲಿಕಾ ಕೇಂದ್ರಕ್ಕೆ ಸುರಕ್ಷಿತವಾಗಿ ಬಂದು ಹೋಗಲು ಅನುಕೂಲವಾಗುವಂತೆ ವಾಹನ ಮತ್ತು ಮಧ್ಯಾಹ್ನದ ಬಿಸಿಯೂಟದ ವ್ಯವಸ್ಥೆ ಮಾಡಲಾಗಿದೆ. ಪ್ರತಿಯೊಂದು ಕೇಂದ್ರದ ಮಕ್ಕಳಿಗೂ ಪಠ್ಯಪುಸ್ತಕ, ಪೆನ್ ಇನ್ನಿತರ ಸೌಲಭ್ಯ ಒದಗಿಸಲಾಗುತ್ತಿದೆ ಎಂದು ಮಾಹಿತಿ ನೀಡಿದರು.

ಜಿಲ್ಲೆಯ 33 ತರಗತಿ ಕೇಂದ್ರಗಳಿಗೆ ಶಾಲಾ ದತ್ತು ಅಧಿಕಾರಿಗಳನ್ನು ನೇಮಿಸಲಾಗಿದ್ದು, ಇವರ ಮೇಲ್ವಿಚಾರಣೆಗಾಗಿ ತಾಲ್ಲೂಕಿಗೊಂದು ಅನ್ಯ ಇಲಾಖೆ ಅಧಿಕಾರಿಗಳನ್ನು ನೋಡೆಲ್ ಅಧಿಕಾರಿಗಳನ್ನಾಗಿ ಆಯ್ಕೆ ಮಾಡಲಾಗಿದೆ ಎಂದರು

ಬೆಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಪ್ರಾಧಿಕಾರದ ಸಾಮಾಜಿಕ ಹೊಣೆಗಾರಿಕೆ (ಸಿ.ಎಸ್.ಆರ್) ಅನುದಾನ ಬಳಸಿಕೊಂಡು 10ನೇ ತರಗತಿ ಮಕ್ಕಳಿಗಾಗಿ ವಿಶೇಷ ತರಗತಿ ಕೇಂದ್ರಗಳನ್ನು ತೆರೆಯಲಾಗಿದೆ. ಎಸ್‌ಎಸ್‌ಎಲ್‌ಸಿ ಫಲಿತಾಂಶ ಸುಧಾರಣೆಗಾಗಿ ರಾಜ್ಯದಲ್ಲಿಯೇ ಜಿಲ್ಲಾ ಪಂಚಾಯಿತಿ ಮಟ್ಟದಲ್ಲಿ ಸಮಿತಿ ರಚನೆ ಮಾಡಿಕೊಂಡು ಸಿಎಸ್‌ಆರ್‌ ಅನುದಾನ ಬಳಸಿಕೊಳ್ಳುತ್ತಿರುವ ಜಿಲ್ಲೆಯಾಗಿದೆ ಎಂದು ಸಿಇಒ ಮಾಹಿತಿ ನೀಡಿದರು.

ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕರಾದ ಕೃಷ್ಣಮೂರ್ತಿ ಮಾತನಾಡಿ, ಪ್ರಸಕ್ತ ಸಾಲಿನಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಒಟ್ಟು 236 ಸರ್ಕಾರಿ, ಅನುದಾನಿತ ಹಾಗೂ ಖಾಸಗಿ ಫ್ರೌಢಶಾಲೆಗಳಿದ್ದು ಒಟ್ಟು 11800 ಮಕ್ಕಳು 10ನೇ ತರಗತಿಯಲ್ಲಿ ಕಲಿಯುತ್ತಿದ್ದಾರೆ ಎಂದರು.

114 ಸರ್ಕಾರಿ ಹಾಗೂ ಅನುದಾನಿತ ಫ್ರೌಡಗಳಲ್ಲಿ 6887 ಮಕ್ಕಳು 10ನೇ ತರಗತಿಯಲ್ಲಿ ಕಲಿಯುತ್ತಿದ್ದಾರೆ. ಈಮಕ್ಕಳ ಕಲಿಕಾ ಗುಣಮಟ್ಟ ತಿಳಿಯಲು ಕಳೆದ ತಿಂಗಳಿನಲ್ಲಿ ವಾರಕ್ಕೊಂದು ಪರೀಕ್ಷೆ ನಡೆಸಲಾಗಿತ್ತು. ಪರೀಕ್ಷೆ ಫಲಶೃತಿಯಂತೆ ಗಣಿತ ವಿಷಯದಲ್ಲಿ ಮಕ್ಕಳ ಕಲಿಕಾ ಗುಣಮಟ್ಟ ನಿರೀಕ್ಷಿತ ಮಟ್ಟದಲ್ಲಿ ಇಲ್ಲವಾಗಿತ್ತು ಎಂದರು.

ಜಿಲ್ಲೆಯ ನಾಲ್ಕು ತಾಲ್ಲೂಕುಗಳ ವಿಷಯ ಸಂಪನ್ಮೂಲ ಶಿಕ್ಷಕರು ಭಾಗವಹಿಸಿ ‘ಗಣಿತದ ಪರಿಕಲ್ಪನೆಗಳು ಮತ್ತು ಮಕ್ಕಳ ಕಲಿಕೆ’ಯ ಕುರಿತು ಸಮಾಲೋಚನೆ ನಡೆಸಿದರು.

ಶಿಕ್ಷಣಾಧಿಕಾರಿ ಹನುಮಂತರಾಯಪ್ಪ, ವಿಮಾನ ನಿಲ್ದಾಣ ಪ್ರಾಧಿಕಾರದ ವ್ಯವಸ್ಥಾಪಕ ನಿರ್ದೇಶಕ ಹೇಮಂತ್ ಮಾದಯ್ಯ, ಸಹಾಯಕ ವ್ಯವಸ್ಥಾಪಕ ನಿರ್ದೇಶಕಿ ಪ್ರತಿಭಾ ಕುಲಕರ್ಣಿ ಸೇರಿದಂತೆ ಕ್ಷೇತ್ರ ಶಿಕ್ಷಣಾಧಿಕಾರಿಗಳು, ನೋಡೆಲ್ ಅಧಿಕಾರಿಗಳು, ವಿಷಯ ಸಂಪನ್ಮೂಲ ಶಿಕ್ಷಕರು ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !