ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಠಿಣ ಕ್ರಮ: ರೌಡಿಗಳಿಗೆ ಎಚ್ಚರಿಕೆ

ಗ್ರಾಮ ಪಂಚಾಯಿತಿ ಚುನಾವಣೆ: ಚಂದಾಪುರದಲ್ಲಿ ಪರೇಡ್‌
Last Updated 11 ಡಿಸೆಂಬರ್ 2020, 7:12 IST
ಅಕ್ಷರ ಗಾತ್ರ

ಆನೇಕಲ್: ಗ್ರಾಮ ಪಂಚಾಯಿತಿ ಚುನಾವಣೆ ಸಂದರ್ಭದಲ್ಲಿ ರೌಡಿ ಶೀಟರ್‌ಗಳು ಚುನಾವಣಾ ಪ್ರಕ್ರಿಯೆ
ಗಳಿಗೆ ಅಡ್ಡಿಪಡಿಸುವುದು, ಮತದಾರರ ಮೇಲೆ ಪ್ರಭಾವ ಬೀರುವುದು, ಧಮ್ಕಿ ಹಾಕುವುದು ಸೇರಿದಂತೆ ಸಮಾಜ ವಿರೋಧಿ ಚಟುವಟಿಕೆಗಳಲ್ಲಿ ತೊಡಗಿದರೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಆನೇಕಲ್‌ ಉಪ ವಿಭಾಗದ ಡಿವೈಎಸ್‌ಪಿಡಾ.ಎಚ್.ಎಂ. ಮಹದೇವಪ್ಪ ಎಚ್ಚರಿಕೆ ನೀಡಿದರು.

ಅವರು ತಾಲ್ಲೂಕಿನ ಚಂದಾಪುರದಲ್ಲಿ ವಿವಿಧ ಪೊಲೀಸ್‌ ಠಾಣೆಗಳ ವ್ಯಾಪ್ತಿಯ ರೌಡಿಗಳ ಪರೇಡ್‌ ನಡೆಸಿ ಮಾತನಾಡಿದರು.

ಗ್ರಾಮ ಪಂಚಾಯಿತಿ ಚುನಾವಣೆ ಅತ್ಯಂತ ಸೂಕ್ಷ್ಮವಾಗಿದೆ. ಪ್ರತಿಯೊಂದು ಗ್ರಾಮದಲ್ಲಿಯೂ ಬಿರುಸಿನ ಚುನಾವಣಾ ಪ್ರಚಾರಗಳು ನಡೆಯುತ್ತಿವೆ. ಹಾಗಾಗಿ ಗ್ರಾಮಗಳ ಶಾಂತಿ ಕದಡಲು ಅವಕಾಶ ನೀಡುವುದಿಲ್ಲ ಎಂದರು.

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಚುನಾವಣೆಯಲ್ಲಿ ಭಾಗವಹಿಸಲು ಎಲ್ಲರಿಗೂ ಅವಕಾಶವಿದೆ. ಆದರೆ, ಯಾರೊಬ್ಬರ ಹಕ್ಕನ್ನು ತಡೆಯಲು ಅಥವಾ ಪ್ರಭಾವ ಬೀರಲು, ರೌಡಿಸಂ ಮಾಡಲು ಅವಕಾಶ ನೀಡುವುದಿಲ್ಲ. ರೌಡಿಶೀಟರ್‌ಗಳು ತಮ್ಮ ವರ್ತನೆ ಬದಲಾಯಿಸಿಕೊಳ್ಳಬೇಕು ಎಂದರು.

ಪೊಲೀಸ್‌ ಠಾಣೆಗಳಲ್ಲಿ ರೌಡಿಶೀಟರ್‌ಗಳ ವಿರುದ್ಧ ಯಾವುದೇ ಪ್ರಕರಣಗಳು ದಾಖಲಾಗದಿದ್ದರೆ ವರ್ತನೆಗಳನ್ನು ಪೊಲೀಸರು ಪರಿಶೀಲಿಸಿ ರೌಡಿಶೀಟರ್‌ನಿಂದ ತೆಗೆದು ಹಾಕಲು ಕ್ರಮ ಕೈಗೊಳ್ಳಲಾಗುವುದು. ಹಾಗಾಗಿ ಸಮಾಜದಲ್ಲಿ ಉತ್ತಮ ವ್ಯಕ್ತಿಗಳಾಗಲು ಸಂಕಲ್ಪ ಮಾಡಬೇಕು. ಸಮಾಜದ ನೆಮ್ಮದಿ ಕದಡಲು ಪ್ರಯತ್ನಿಸಬಾರದು ಎಂದರು.

ಪುಡಿ ರೌಡಿಗಳು ಗ್ಯಾಂಗ್‌ ಕಟ್ಟಿಕೊಂಡು ಹಣ ವಸೂಲಿ ಮಾಡುವುದು, ಬಡ್ಡಿ ದಂಧೆಯಲ್ಲಿ ಪಾಲ್ಗೊಳ್ಳುವುದು ಸೇರಿದಂತೆ ಸಮಾಜ ಘಾತುಕ ಕೃತ್ಯಗಳಲ್ಲಿ ತೊಡಗಿದರೆ ಯಾವುದೇ ಮುಲಾಜಿಲ್ಲದೇ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.

ಸರ್ಕಲ್‌ ಇನ್‌ಸ್ಪೆಕ್ಟರ್‌ಗಳಾದ ಸತೀಶ್‌, ಕೃಷ್ಣ, ಗೌತಮ್‌, ಶೇಖರ್‌, ನಾಗರಾಜು ಹಾಜರಿದ್ದರು. ಆನೇಕಲ್‌ ತಾಲ್ಲೂಕಿನ ಸೂರ್ಯಸಿಟಿ, ಹೆಬ್ಬಗೋಡಿ, ಅತ್ತಿಬೆಲೆ, ಆನೇಕಲ್, ಬನ್ನೇರುಘಟ್ಟ, ಸರ್ಜಾಪುರ, ಜಿಗಣಿ ಪೊಲೀಸ್‌ ಠಾಣೆ ವ್ಯಾಪ್ತಿಯ 200ಕ್ಕೂ ಹೆಚ್ಚು ರೌಡಿಗಳ ಪರೇಡ್‌ ನಡೆಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT