ಉಚಿತ ಬಸ್‌ ಪಾಸ್‌ಗೆ ಆಗ್ರಹಿಸಿ ಪ್ರತಿಭಟನೆ

7
ಶಿವಗಣೇಶ ಸರ್ಕಲ್‌ನಲ್ಲಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್‌ ನೇತೃತ್ವದಲ್ಲಿ ಆಗ್ರಹ

ಉಚಿತ ಬಸ್‌ ಪಾಸ್‌ಗೆ ಆಗ್ರಹಿಸಿ ಪ್ರತಿಭಟನೆ

Published:
Updated:
Deccan Herald

ವಿಜಯಪುರ: ರಾಜ್ಯದ ಬಡ ವಿದ್ಯಾರ್ಥಿಗಳಿಗೆ ಉಚಿತ ಬಸ್‌ ಪಾಸ್‌ ನೀಡಬೇಕೆಂದು ಒತ್ತಾಯಿಸಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್‌ ನೇತೃತ್ವದಲ್ಲಿ ಶನಿವಾರ ಪುರಸಭೆ ಬಳಿಯ ಶಿವಗಣೇಶ ಸರ್ಕಲ್‌ನಲ್ಲಿ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದರು.

ಹಿಂದಿನ ಸರ್ಕಾರ ಬಜೆಟ್‌ನಲ್ಲಿ ಘೋಷಿಸಿದಂತೆ ಉಚಿತವಾಗಿ ಪಾಸ್‌ ನೀಡಬೇಕು. ಈಗಾಗಲೇ ಶೈಕ್ಷಣಿಕ ವರ್ಷ ಪ್ರಾರಂಭವಾಗಿದೆ. ಪಾಸ್‌ ಪಡೆಯಲು ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಲು ತಗಲುವ ವೆಚ್ಚಕ್ಕಿಂತ ಹೆಚ್ಚಿನ ಹಣ ಕೇಳುತ್ತಿದ್ದಾರೆ ಎಂದು ಪ್ರತಿಭಟನಾನಿರತರು ದೂರಿದರು.

ಮಾತಿನಂತೆ ಸರ್ಕಾರ ನಡೆದುಕೊಳ್ಳುತ್ತಿಲ್ಲ, ಇದರಿಂದ ಗ್ರಾಮೀಣ ವಿದ್ಯಾರ್ಥಿಗಳು ತೀವ್ರ ಸಮಸ್ಯೆ ಎದುರಿಸುತ್ತಿದ್ದಾರೆ. ಮುಖ್ಯಮಂತ್ರಿ ಕೂಡಲೇ ಗಮನಹರಿಸಿ ಸಮಸ್ಯೆ ಬಗೆಹರಿಸಬೇಕು. ಇಲ್ಲದಿದ್ದರೆ ಉಗ್ರ ಪ್ರತಿಭಟನೆ ಮಾಡುವುದಾಗಿ ಎಚ್ಚರಿಕೆ ನೀಡಿದರು.

ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು. ಸ್ಥಳೀಯ ಶಾಸಕರು ಸ್ಥಳಕ್ಕೆ ಬರಲೇ ಬೇಕು ಎಂದು ಒತ್ತಾಯಿಸಿದರು.

ತಾಲ್ಲೂಕು ಸಂಚಾಲಕ ಪ್ರಜೀತ್ ಮಾತನಾಡಿ, ವಿದ್ಯಾರ್ಥಿಗಳ ಭವಿಷ್ಯದ ದೃಷ್ಟಿಯಿಂದ ಹಿಂದಿನ ಸರ್ಕಾರ ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್ ನೀಡುವುದಾಗಿ ಪ್ರಕಟಿಸಿತ್ತು. ಆದರೆ, ಈಗಿನ ಸಮ್ಮಿಶ್ರ ಸರ್ಕಾರ ಬಸ್ ಪಾಸ್ ನೀಡದೆ ಮೀನಮೇಷ ಎಣಿಸುತ್ತಿರುವುದು ಖಂಡನೀಯ ಎಂದರು.

ಗ್ರಾಮೀಣ ಭಾಗದಿಂದ ಶಾಲಾ ಕಾಲೇಜಿಗೆ ಹೋಗಿ ಬರುವ ವಿದ್ಯಾರ್ಥಿಗಳು ಬಡ ಕೃಷಿ ಕಾರ್ಮಿಕರ ಮಕ್ಕಳಾಗಿದ್ದು, ಅವರು ಜೀವನ ನಡೆಸುವುದೇ ಕಷ್ಟಕರವಾಗಿದೆ. ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ರಾಜ್ಯದ ಎಲ್ಲ ವರ್ಗದ ವಿದ್ಯಾರ್ಥಿಗಳಿಗೂ ಉಚಿತ ಬಸ್ ಪಾಸ್ ನೀಡಬೇಕು ಎಂದು ಆಗ್ರಹಿಸಿದರು.

ಈಗಾಗಲೇ ಹಣ ನೀಡಿ ಬಸ್ ಪಾಸ್ ಪಡೆದಿರುವ ವಿದ್ಯಾರ್ಥಿಗಳಿಗೆ ಹಣ ಮರುಪಾವತಿ ಮಾಡಬೇಕು. ಈ ಬೇಡಿಕೆ ಈಡೇರಿಸದಿದ್ದಲ್ಲಿ ಮುಂದಿನ ದಿನಗಳಲ್ಲಿ ರಾಜ್ಯದಾದ್ಯಂತ ಹೋರಾಟ ಮಾಡಲಾಗುವುದು ಎಂದು ತಿಳಿಸಿದರು.

ಬಿ.ಎಂ.ಟಿ.ಸಿ.ಬಸ್‌ಗಳು ಸಮೀಪದ ಯಲಿಯೂರು ವರೆಗೂ ಬರುತ್ತಿವೆ. ವಿಜಯಪುರಕ್ಕೆ ಬರುತ್ತಿಲ್ಲ. ಹೊಸಕೋಟೆಯಿಂದ ಬರುವ ಬಸ್‌ಗಳು ಪುನಃ ದೇವನಹಳ್ಳಿ ಮಾರ್ಗವಾಗಿ ಹೊಸಕೋಟೆಯ ಕಡೆಗೆ ಹೋಗುವಂತೆ ವ್ಯವಸ್ಥೆ ಮಾಡಬೇಕು ಎಂದು ಮನವಿ ಮಾಡಿದರು.

ಪ್ರತಿಭಟನಾ ಸ್ಥಳಕ್ಕೆ ಬಂದ ಶಾಸಕ ನಿಸರ್ಗ ನಾರಾಯಣಸ್ವಾಮಿ, ವಿದ್ಯಾರ್ಥಿಗಳನ್ನು ಸಮಾಧಾನ ಪಡಿಸಿದರು. ಇಂದಿನ ವಿದ್ಯಾರ್ಥಿಗಳೇ ಈ ರಾಜ್ಯದ ಮುಂದಿನ ಭವಿಷ್ಯ. ಇದು ಸರ್ಕಾರದ ಗಮನದಲ್ಲಿದೆ ಎಂದರು.

ರಾಜ್ಯ ಸರ್ಕಾರ ಎಲ್ಲಾ ಸರ್ಕಾರಿ ಶಾಲಾ ಕಾಲೇಜುಗಳಲ್ಲಿ ಓದುತ್ತಿರುವ ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್ ವಿತರಣೆ ಮಾಡಲು ಚಿಂತನೆ ನಡೆಸುತ್ತಿದೆ. ಸದ್ಯಕ್ಕೆ ರೈತರ ಸಾಲ ಮನ್ನಾ ಮಾಡುವ ವಿಚಾರದ ಬಗ್ಗೆ ಗಂಭೀರವಾದ ಚಿಂತನೆಗಳು ನಡೆಸುತ್ತಿದೆ ಎಂದರು.

‘ನಿಮ್ಮ ಸಮಸ್ಯೆಗಳೂ ಶೀಘ್ರವಾಗಿ ಬಗೆಹರಿಯಲಿವೆ. ಪ್ರತಿಭಟನೆ ಕೈಬಿಡಿ. ಈ ಕುರಿತು ಮುಖ್ಯಮಂತ್ರಿಗಳೊಂದಿಗೆ ಚರ್ಚೆ ನಡೆಸುತ್ತೇವೆ’ ಎಂದು ಸಮಾಧಾನ ಪಡಿಸಿದರು.

ಕಾರ್ಯಕರ್ತರಾದ ಮಾರುತಿ, ವಿಜಯ್, ಕಾರ್ತಿಕ್, ನಿರಂಜನ್, ವಿದ್ಯಾರ್ಥಿಗಳಾದ ಮನೋಜ್, ಸೀಮಾ, ತನು, ಮೋನಿಷ, ಸುಷ್ಮಾ, ನಿಖಿಲ್, ಅಭಿಷೇಕ್, ಜೆಡಿಎಸ್ ನಗರ ಘಟಕದ ಅಧ್ಯಕ್ಷ ಎಸ್.ಭಾಸ್ಕರ್, ಮುಖಂಡರಾದ ಹುರುಳುಗುರ್ಕಿ ಶ್ರೀನಿವಾಸ್, ಬಿಜ್ಜವಾರ ಆನಂದ್, ಬಿದಲೂರು ಶಂಕರ್, ಕೋರಮಂಗಲ ವೀರಪ್ಪ, ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !