ಬುಧವಾರ, ಡಿಸೆಂಬರ್ 11, 2019
20 °C
ಮಾಗಡಿಯಲ್ಲಿ ಇತಿಹಾಸ ಸಂಶೋಧಕ ಡಾ..ಮುನಿರಾಜಪ್ಪ ಸಲಹೆ

ವಿದ್ಯಾರ್ಥಿಗಳು ಅಂಬೇಡ್ಕರ್‌ ಬದುಕು ಬರಹ ಓದಬೇಕು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮಾಗಡಿ: ಭಾರತೀಯರ ಸಂಪ್ರದಾಯವೆಂಬ ಅಸಮಾನತೆಯ ಬೆಂಕಿಯಲ್ಲಿ ಅರಳಿದ ಹೂವು, ಡಾ. ಬಿ.ಆರ್.ಅಂಬೇಡ್ಕರ್ ಎಂದು ಕನ್ನಡ ಸಹೃದಯ ಬಳಗದ ಅಧ್ಯಕ್ಷ ಡಾ. ಮುನಿರಾಜಪ್ಪ ತಿಳಿಸಿದರು.

ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜು ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಗಳ ಸಹಯೋಗದಲ್ಲಿ ಸೋಮವಾರ ನಡೆದ ಭಾರತ ರತ್ನ ಡಾ.ಬಿ.ಆರ್.ಅಂಬೇಡ್ಕರ್ ಓದು ಅಭಿಯಾನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಜಗತ್ತು ಮೆಚ್ಚುವ ಸಂವಿಧಾನವನ್ನು ಅಸ್ಪೃಶ್ಯತೆಯಿಂದ ನೋಡುವುದು ಸರಿಯಲ್ಲ. ಅಂಬೇಡ್ಕರ್ ಬಹುಮುಖ ಪ್ರತಿಭಾವಂತರಾಗಿದ್ದರೂ ಸಹ ಅಂದಿನ ಮೇಲುವರ್ಗದವರ ಕುಟಿಲತೆಯಿಂದ ಅವಮಾನ, ನೋವು ಅನುಭವಿಸಿದರು. ವರ್ಣಭೇದ ನೀತಿಯ ವಿರುದ್ಧ ಹೋರಾಡಿದ್ದ ನೆಲ್ಸನ್ ಮಂಡೇಲಾ ಅವರಂತೆ 21 ನೇ ಶತಮಾನದ ಭಾರತೀಯ ಸಮಾಜ ಸುಧಾರಕರು. ತುಳಿತಕ್ಕೆ ಒಳಗಾದವರ ಪರವಾಗಿ ಹೋರಾಟ ಮಾಡಿದರು ಎಂದರು.

ಅಂಬೇಡ್ಕರ್ ಬದುಕು ಬರಹ ಓದಿದರೆ ಯುವಕರು ಉತ್ತಮ ಪ್ರಜೆಗಳಾಗಲು ಸಾಧ್ಯವಿದೆ. ಗಾಳಿ, ನೀರು, ಬೆಂಕಿ, ಭೂಮಿಗೆ ಜಾತಿಯ ಲೇಪ ಹಚ್ಚುವುದು ಏಕೆ ಎಂದು ಪ್ರಶ್ನಿಸಿದರು.

ಜಗತ್ತು ಮೆಚ್ಚಿರುವ, ಸರ್ವರ ಸ್ವಾಸ್ಥ್ಯವನ್ನು ರಕ್ಷಿಸುವ ಗ್ರಂಥ ಸಂವಿಧಾನವನ್ನು ಎಲ್ಲರೂ ಗೌರವಿಸಲೇ ಬೇಕು. ಅಂಬೇಡ್ಕರ್ ರಚಿಸಿರುವ ಸಂವಿಧಾನ ಭಾರತೀಯರೆಲ್ಲರಿಗೂ ತಾಯಿ ಇದ್ದಂತೆ. ಕಾನೂನನ್ನು ಗೌರವಿಸಿದರೆ ಅಂಬೇಡ್ಕರ್ ಅವರನ್ನು ಗೌರವಿಸಿದಂತೆ, ವಿದ್ಯಾರ್ಥಿಗಳು ಕಡ್ಡಾಯವಾಗಿ ಸಂವಿಧಾನವನ್ನು ಓದಿಕೊಳ್ಳಬೇಕು ಎಂದರು.

ಸಾಹಿತಿ ಡಾ. ಅಂಕನಹಳ್ಳಿ ಪಾರ್ಥ ಮಾತನಾಡಿ ವಿಶ್ವದ ಶ್ರೇಷ್ಠ ಜ್ಞಾನಿ, ಚಿಂತಕ ಅಂಬೇಡ್ಕರ್. ಪರಿಶ್ರಮಪಟ್ಟು ಸಂವಿಧಾನ ರಚಿಸಿ, ಸುಖಜೀವನಕ್ಕೆ ನಮಗೆ ಅವಕಾಶ ಮಾಡಿಕೊಟ್ಟಿದ್ದಾರೆ. ತುಳಿತಕ್ಕೆ ಒಳಗಾದವರಿಗೆ ಜನಸಂಖ್ಯೆಗೆ ಅನುಗುಣವಾಗಿ ಮೀಸಲಾತಿ ಪ್ರಮಾಣವನ್ನು ಹೆಚ್ಚಿಸಬೇಕು ಎಂದರು.

ತಾಲ್ಲೂಕು ದಲಿತ ಸಂಘರ್ಷ ಸಮಿತಿ ಸಂಚಾಲಕ ದೊಡ್ಡಯ್ಯ ಮಾತನಾಡಿ ಬುದ್ಧ, ಬಸವಣ್ಣ, ಅಂಬೇಡ್ಕರ್ ಜನಿಸಿದ ನಾಡಿನಲ್ಲಿ ಅಸ್ಪೃಶ್ಯತೆ ಇಂದಿಗೂ ಇದೆ. ತುಳಿತಕ್ಕೆ ಒಳಗಾದವರು ದಲಿತರು. ಧ್ವನಿಇಲ್ಲದೆ, ಮುಟ್ಟಿಸಿಕೊಳ್ಳದವರು ಅಸ್ಪೃಶ್ಯರು. ಮೀಸಲಾತಿಯಿಂದ ದೊಡ್ಡ ದೊಡ್ಡ ಹುದ್ದೆಗಳಲ್ಲಿ ಇರುವ ಅಧಿಕಾರಿಗಳು ಇಂದಿಗೂ ತಮ್ಮ ಮನೆಯಲ್ಲಿ ಅಂಬೇಡ್ಕರ್ ಚಿತ್ರ ಹಾಕಿಕೊಂಡಿಲ್ಲ. ಕಲಾವಿದ ರಚಿಸಿದ ದೇವಾನುದೇವತೆಗಳ ಚಿತ್ರಗಳಿಗೆ ಪೂಜೆ ಸಲ್ಲಿಸುತ್ತಿರುವುದು ವಿಚಿತ್ರವಾಗಿದೆ ಎಂದರು.

ಅಸ್ಪೃಶ್ಯ ಅಧಿಕಾರಿಗಳು ಸಹ ಮನೆಗಳಲ್ಲಿ ಸತ್ಯನಾರಾಯಣಸ್ವಾಮಿ ಪೂಜೆ, ಹೋಮ ಹವನ ಮಾಡಿಸುತ್ತಿದ್ದಾರೆ. ತಿರುಮಲೆ ರಂಗನಾಥ ಸ್ವಾಮಿ ದೇವಾಲಯದಲ್ಲಿ ಕಸಗುಡಿಸಲು ಸಹ ಅಸ್ಪೃಶ್ಯರನ್ನು ನೇಮಕ ಮಾಡಿಲ್ಲ. ವಿದ್ಯಾರ್ಥಿಗಳು ಮನೆ ಮತ್ತು ಮನಗಳಲ್ಲಿ ಸಂವಿಧಾನ ರಚಿಸಿದ ಜ್ಞಾನದೀಪ ಅಂಬೇಡ್ಕರ್ ಅವರನ್ನು ಇಟ್ಟುಕೊಳ್ಳಬೇಕು ಎಂದರು.

ಬಾಲ್ಯದಲ್ಲಿ ದೇಗುಲದ ಹೊರಗೆ ಕುಳಿತು ಓದಿದ ನೆನಪು ಮಾಡಿಕೊಂಡು ಗದ್ಗದಿತರಾದರು.

ಪ್ರಗತಿಪರ ಹೋರಾಟಗಾರ ಸಿ.ಜಯರಾಮು ಮಾತನಾಡಿ, ವಿಶ್ವದ ನಾನಾ ದೇಶಗಳ ಸಂವಿಧಾನಗಳನ್ನು ಅಧ್ಯಯನ ಮಾಡಿ ಭಾರತದ ಬಹುತ್ವಕ್ಕೆ ಅನುಗುಣವಾದ ಸಂವಿಧಾನ ರಚಿಸಿದ ಅಂಬೇಡ್ಕರ್ ದೀನದಲಿತರ ಆಶಾಕಿರಣ. ಭಾಷಣಗಳಿಗೆ ಅವರನ್ನು ಸೀಮಿತ ಮಾಡದೆ, ಜಾತಿ ನಾಶಕ್ಕೆ ಜಾಗೃತಿ ಮೂಡಿಸೋಣ. ಭಾರತದ ಸಾಮಾಜಿಕ ವ್ಯಾಧಿಗಳಿಗೆ ಸಂವಿಧಾನ ದಿವ್ಯ ಔಷಧಿಯಾಗಿದೆ ಎಂದರು.

ಉಪನ್ಯಾಸಕ ಮೃತ್ಯುಂಜಯ ಮಾತನಾಡಿ ಬುದ್ದ , ಬಸವಣ್ಣ, ಅಂಬೇಡ್ಕರ್ ಅವರನ್ನು ಮರೆಯುತ್ತಿರುವುದು ಭಾರತದ ದುರಂತಗಳಿಗೆ ಕಾರಣವಾಗಿದೆ ಎಂದರು.

ಉಪನ್ಯಾಸಕ ಡಾ.ನರಸಿಂಹಮೂರ್ತಿ ಮಾತನಾಡಿ, ಶಿಕ್ಷಣ, ಸಂಘಟನೆ, ಸಮಾನತೆಗಾಗಿ ಹೋರಾಟ ಮಾಡುವುದು ಇಂದಿನ ಅಗತ್ಯವಾಗಿದೆ. ಮೀಸಲಾತಿ ಕೇಲವ ದಲಿತರಿಗೆ ಮಾತ್ರವಲ್ಲ ಎಂಬುದನ್ನು ಎಲ್ಲರಿಗೂ ಮನವರಿಕೆ ಮಾಡಿಕೊಡಬೇಕಿದೆ ಎಂದರು.

ತಿರುಮಲೆ ಕನ್ನಡ ಕೂಟದ ಸಂಚಾಲಕ ಟಿ.ಎಂ.ಶ್ರೀನಿವಾಸ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಅಧಿಕಾರಿ ಉದಯ್, ಲೇಖಕರಾದ ಕಡೆಮನೆಕುಮಾರ್, ಮುನಿಯಪ್ಪ ಮಾತನಾಡಿದರು.

ಪ್ರಾಂಶುಪಾಲ ನಾಗಣ್ಣ ಅಧ್ಯಕ್ಷತೆ ವಹಿಸಿದ್ದರು. ಅಂಬೇಡ್ಕರ್ ಓದು ಅಭಿಯಾನದ ಅಂಗವಾಗಿ ಪ್ರಬಂಧ, ಆಶುಭಾಷಣ , ರಸಪ್ರಶ್ನೆ, ಕಾವ್ಯಗಾಯನ ಸ್ಪರ್ಧೆಗಳನ್ನು ನಡೆಸಲಾಯಿತು.

ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಾದ ಎನ್.ರಾಕೇಶ್ (ಪ್ರಥಮ), ಸುಮಿತ್ರಾ.ಆರ್. (ದ್ವಿತೀಯ), ವೀರಭದ್ರಯ್ಯ (ತೃತೀಯ) ಬಹುಮಾನ ಗಳಿಸಿದರು. ಪ್ರಶಸ್ತಿ ವಿಜೇತರಿಗೆ ಅಂಬೇಡ್ಕರ್ ಬದುಕು ಬರಹಗಳ ಸಂಪುಟಗಳು ಮತ್ತು ಪ್ರಶಸ್ತಿ ಪತ್ರಗಳನ್ನು ವಿತರಿಸಲಾಯಿತು. ವಿದ್ಯಾರ್ಥಿಗಳು, ಉಪನ್ಯಾಸಕರು ಇದ್ದರು. ಸಾಧಕರನ್ನು ಸನ್ಮಾನಿಸಲಾಯಿತು.

ಪ್ರತಿಕ್ರಿಯಿಸಿ (+)