ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೊಡ್ಡಬಳ್ಳಾಪುರ: ನೇಕಾರರ ಘಟಕಕ್ಕೆ ದೊರೆಯದ ಸಹಾಯಧನ

ದೊಡ್ಡಬಳ್ಳಾಪುರ: ನೇಕಾರರ ಸಂಘಟನಾ ಸಮಾವೇಶ
Last Updated 7 ಮಾರ್ಚ್ 2023, 6:59 IST
ಅಕ್ಷರ ಗಾತ್ರ

ದೊಡ್ಡಬಳ್ಳಾಪುರ: ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಆಗಿದ್ದ ವೇಳೆ ನೇಕಾರರಿಗೆ ವಿವಿಧ ಸೌಲಭ್ಯ ನೀಡಲಾಗಿತ್ತು. ಆದರೆ ಬಿಜೆಪಿ ಅಧಿಕಾರಕ್ಕೆ ಬಂದ ಮೇಲೆ ನೇಕಾರರ ಗುಂಪು ವಿಮಾ ಯೋಜನೆ, ವಿದ್ಯಾರ್ಥಿ ವೇತನ ಮತ್ತು ವಸತಿ ಸೌಲಭ್ಯದ ಯೋಜನೆಗಳನ್ನು ನಿಲ್ಲಿಸಲಾಗಿದೆ ಎಂದು ನೇಕಾರರ ಹೋರಾಟ ಸಮಿತಿ ಅಧ್ಯಕ್ಷ ಬಿ.ಜಿ.ಹೇಮಂತರಾಜು ದೂರಿದರು.

ನಗರದ ಖಾಸಗಿ ಕಲ್ಯಾಣ ಮಂದಿರದಲ್ಲಿ ನೇಕಾರರ ಹೋರಾಟ ಸಮಿತಿ ಸೋಮವಾರ ಆಯೋಜಿಸಿದ್ದ ನೇಕಾರರ 4ನೇ ಸಂಘಟನಾ ಸಮಾವೇಶದಲ್ಲಿ ಅವರು ಮಾತನಾಡಿದರು.

‘ ಸರ್ಕಾರ ವಿದ್ಯುತ್ ಕಂಪನಿಗಳಿಗೆ ₹200 ಕೋಟಿ ಸಹಾಯಧನದ ಹಣ ಬಿಡುಗಡೆ ಮಾಡಿಲ್ಲ. ಅಲ್ಲದೆ ನೇಕಾರರ ಹೊಸ ಘಟಕಗಳಿಗೆ ಸಹಾಯಧನದ ಸೌಲಭ್ಯ ದೊರೆಯುತ್ತಿಲ್ಲ. ತಂತ್ರಜ್ಞಾನ ಉನ್ನತೀಕರಣಕ್ಕೆ ಶೇ 50 ರಷ್ಟು ಸಹಾಯಧನ ಕೂಡ ಸರಿಯಾಗಿ ಪಾವತಿಯಾಗುತ್ತಿಲ್ಲ. ವಿದ್ಯುತ್ ಸಹಾಯಧನವನ್ನು ಒಂದು ಕೈನಲ್ಲಿ ಕೊಟ್ಟು ಮತ್ತೊಂದೆಡೆ ವಿದ್ಯುತ್ ಬಿಲ್‍ಗಳಿಗೆ ದುಬಾರಿ ತೆರಿಗೆ ವಿಧಿಸಲಾಗುತ್ತಿದೆ’ ಎಂದರು.

ನೇಕಾರರ ಸಂಕಷ್ಟಗಳನ್ನು ಅರಿತು, ನೇಕಾರರಿಗೆ ವಿವಿಧ ಸರ್ಕಾರಿ ಸೌಲಭ್ಯಗಳನ್ನು ಒದಗಿಸಲು ಹಾಗೂ ನೇಕಾರರ ಹಿತ ಕಾಪಾಡುವ ಸಲುವಾಗಿ 2001ರಲ್ಲಿ ನೇಕಾರರ ಹೋರಾಟ ಸಮಿತಿ ಸ್ಥಾಪಿಸಲಾಯಿತು. ವಿದ್ಯುತ್ ಸಹಾಯಧನ ಸಮಿತಿಯ ಹೋರಾಟದ ಫಲವಾಗಿದೆ ಎಂದು ತಿಳಿಸಿದರು.

ಇದೇ ಸಂದರ್ಭದಲ್ಲಿ ನೇಕಾರ ವೃತ್ತಿಯಲ್ಲಿ ತೊಡಗಿರುವ ಹಿರಿಯ ನೇಕಾರರನ್ನು ಸನ್ಮಾನಿಸಲಾಯಿತು.

ಸಮಾವೇಶದಲ್ಲಿ ಪುಷ್ಪಾಂಡಜ ಆಶ್ರಮದ ದಿವ್ಯಜ್ಞಾನಾನಂದಗಿರಿ ಸ್ವಾಮೀಜಿ, ನೇಕಾರರ ಮುಖಂಡರಾದ ಎಚ್.ಕೆ.ಗೋವಿಂದಪ್ಪ, ಅಮರನಾಥ್, ಜಿ.ಲಕ್ಷ್ಮೀಪತಿ, ನಗರಸಭಾ ಸದಸ್ಯರಾದ ರೂಪಿಣಿ, ಅಲ್ತಾಫ್, ನೇಕಾರರ ಹೋರಾಟ ಸಮಿತಿ ಪ್ರಧಾನ ಕಾರ್ಯದರ್ಶಿ ಡಿ.ವಿ.ಸೂರ್ಯಪ್ರಕಾಶ್, ಉಪಾಧ್ಯಕ್ಷ ಕೆ.ಜಿ.ಗೋಪಾಲ್, ಜೆ.ಎಸ್.ಮಂಜುನಾಥ್, ಎನ್.ಶಿವರಾಂ, ಕೆ.ಎನ್.ನಾಗರಾಜ್, ನಾರಾಯಣಪ್ಪ, ಸಂಜೀವಪ್ಪ, ಜಂಟಿ ಕಾರ್ಯದರ್ಶಿ ಆರ್.ರಂಗಸ್ವಾಮಿ, ಡಿ.ಎಂ.ನಾಗಭೂಷಣ್,ಎನ್.ಲೋಕೇಶ್, ಈಶ್ವರಯ್ಯ, ರವಿಕುಮಾರ್, ಸಂಜೀವ್‌ಕುಮಾರ್ ಇದ್ದರು.

ಸಮಾವೇಶದ ಹಕ್ಕೊತ್ತಾಯ: ಬಜೆಟ್‍ನಲ್ಲಿ ಘೋಷಿಸಿರುವಂತೆ ನೇಕಾರರಿಗೆ 5 ಎಚ್‍ಪಿ ವರೆಗೆ ಉಚಿತ ವಿದ್ಯುತ್ ಭರವಸೆಯನ್ನು ಕೂಡಲೇ ಜಾರಿಗೊಳಿಸಬೇಕು. ನೇಕಾರರನ್ನು ಅಸಂಘಟಿತ ಕಾರ್ಮಿಕರ ಪಟ್ಟಿಗೆ ಸೇರಿಸಿ ಆದೇಶಿಸಬೇಕು. ನೇಯ್ಗೆ ಉದ್ಯಮದಲ್ಲಿ ತೊಡಗಿರುವ ವಸತಿಹೀನ ಕಾರ್ಮಿಕರಿಗೆ ಗುಂಪು ಮನೆಗಳ ನಿರ್ಮಾಣ ಮಾಡಬೇಕು.ಪವರ್ ಲೂಂ ಪಾರ್ಕ್ ಮತ್ತು ಜವಳಿ ಉತ್ಪನ್ನ ಮಾರುಕಟ್ಟೆ ಸಂಕೀರ್ಣ ನಿರ್ಮಾಣ ಆಗಬೇಕು. ನೇಕಾರ ಸಮುದಾಯ ಭವನ ನಿರ್ಮಾಣವಾಗಬೇಕು. ವಿದ್ಯುತ್ ಕ್ಷೇತ್ರದ ಖಾಸಗೀಕರಣ ಮಾಡಬಾರದು. ನೇಕಾರರು ಉತ್ಪಾದಿಸಿದ ಸೀರೆಗಳನ್ನು ವರ್ಷಕ್ಕೆ ಎರಡು ಬಾರಿ ಸರ್ಕಾರ ಖರೀದಿ ಮಾಡಬೇಕು. ನೇಕಾರ ಕಲ್ಯಾಣ ಯೋಜನೆಗಳಿಗೆ ವಾರ್ಷಿಕ ಆಯವ್ಯಯದಲ್ಲಿ ₹1 ಸಾವಿರ ಕೋಟಿ ಮೀಸಲಿಡಬೇಕು. ಬಣ್ಣ ಫ್ಯಾಕ್ಟರಿಗಳಿಗೆ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಮತ್ತು ಸ್ಥಳೀಯ ಸಂಸ್ಥೆಗಳ ಕಿರುಕುಳ ನಿಲ್ಲಬೇಕು. ನೇಯ್ಗೆ ಉದ್ಯಮಕ್ಕೆ ಬಳಸುವ ವಿದ್ಯುತ್ತಿಗೆ ದುಬಾರಿ ತೆರಿಗೆ ರದ್ದು ಮಾಡಬೇಕು. ಕೈಮಗ್ಗ ಮೀಸಲಾತಿ ಅಧಿನಿಯಮ ರದ್ದಾಗಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT