ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೇವನಹಳ್ಳಿ: ಕಮಲ ಅರಳಿಸಲು ಸುಧಾಕರ್ ಪಣ l ಕಾಂಗ್ರೆಸ್ ಗೆಲುವಿಗೆ ಒಗ್ಗಟ್ಟಿನ ಮಂತ್ರ

Last Updated 1 ಫೆಬ್ರುವರಿ 2023, 4:44 IST
ಅಕ್ಷರ ಗಾತ್ರ

ದೇವನಹಳ್ಳಿ : ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ದೇವನಹಳ್ಳಿ ಕ್ಷೇತ್ರ ರಾಜ್ಯ ರಾಜಧಾನಿಯೊಂದಿಗೆ ಬೆಸೆದುಕೊಂಡಿದ್ದು, ರಾಜಕೀಯವಾಗಿ ಸಾಕಷ್ಟು ಮಹತ್ವ ಪಡೆದ ಕ್ಷೇತ್ರವಾಗಿದೆ. ಕಳೆದ ಎರಡು ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್‌ ಪರವಿದ್ದ ಮತದಾರರು, ಈ ಬಾರಿ ಅನೇಕ ಪ್ರಭಾವಿ ನಾಯಕರ ಪಕ್ಷಾಂತರ ಪರ್ವದಿಂದ ಯಾವ ನಿರ್ಧಾರ ಕೈಗೊಳ್ಳಲಿದ್ದಾರೆ ಎಂಬುದು ಕುತೂಹಲ ಮೂಡಿಸಿದೆ.

ಈ ಬಾರಿಯ ವಿಧಾನಸಭೆ ಚುನಾವಣೆಯಲ್ಲಿ ದೇವನಹಳ್ಳಿ ವಿಧಾನಸಭೆ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎ.ಸಿ. ಶ್ರೀನಿವಾಸ್ ಅವರಿಗೆ ಸಿಗುವ ಸಾಧ್ಯತೆಯಿದ್ದು, ತಮ್ಮ ಸಂಘಟನಾ ಕೌಶಲ್ಯದಿಂದ ಜೆಡಿಎಸ್ ಭದ್ರ ಕೋಟೆಯಲ್ಲಿ ಅಸ್ತಿತ್ವ ಕಂಡುಕೊಳ್ಳಲು ಯತ್ನಿಸುತ್ತಿದ್ದಾರೆ.

ಬಿಜೆಪಿಯ ಪ್ರಬಲ ಟಿಕೆಟ್ ಆಕಾಂಕ್ಷಿಯಾಗಿರುವ ಮಾಜಿ ಶಾಸಕ ಪಿಳ್ಳಮುನಿಶಾಮಪ್ಪ ಪರವಾಗಿ ಪರಿಶಿಷ್ಟ ಜಾತಿಯ ಎಡಗೈ ಸಮುದಾಯ ಸಕ್ರಿಯವಾಗಿ ಕಾರ್ಯ ನಿರ್ವಹಿಸುತ್ತಿದ್ದು, ಮೀಸಲು ಕ್ಷೇತ್ರ ದೇವನಹಳ್ಳಿಯಲ್ಲಿ ಈ ಬಾರಿ ಜೆಡಿಎಸ್‌ ಗೆಲುವು ಸುಲಭ ಸಾಧ್ಯವಿಲ್ಲ ಎಂಬಂಥ ವಾತಾವರಣ ಸೃಷ್ಟಿಯಾಗಿದೆ.

ಕಳೆದ 10 ವರ್ಷದಿಂದ ಕ್ಷೇತ್ರದಲ್ಲಿ ಕಾಂಗ್ರೆಸ್ ಶಾಸಕರಿಲ್ಲದ ಕಾರಣ ಆ ಪಕ್ಷದ ಕಾರ್ಯಕರ್ತರು ತಮ್ಮ ಒಳ ಜಗಳ ಮರೆತು, ಒಗ್ಗಟ್ಟಿನಿಂದ ಪಕ್ಷದ ಅಭ್ಯರ್ಥಿ ಗೆಲುವಿಗೆ ತಯಾರಿ ನಡೆಸುತ್ತಿದ್ದರೆ, ಜಿಲ್ಲಾ ಉಸ್ತುವಾರಿ ಸಚಿವ ಡಾ.ಕೆ. ಸುಧಾಕರ್ ಅವರ ತಂತ್ರಗಾರಿಕೆಯಲ್ಲಿ ಬಿಜೆಪಿಯೂ ದಿನದಿಂದ ದಿನಕ್ಕೆ ಬಲಿಷ್ಠಗೊಳ್ಳುತ್ತಿದೆ. ಒಟ್ಟಾರೆ, ಕಾಂಗ್ರೆಸ್ ಮತ್ತು ಬಿಜೆಪಿ ಜೆಡಿಎಸ್ ನಾಯಕರಿಗೆ ಗಾಳ ಹಾಕುತ್ತಿದ್ದು, ರಾಜಕೀಯ ಲೆಕ್ಕಾಚಾರಗಳು ತಲೆಕೆಳಗಾಗುವಂತೆ ಮಾಡಿವೆ.

ಹಾಲಿ ಶಾಸಕ ನಿಸರ್ಗ ನಾರಾಯಣಸ್ವಾಮಿ ಅವರು ಜನತಾ ಜಲಧಾರೆ, ಪಂಚರತ್ನ ರಥಯಾತ್ರೆಯಲ್ಲಿ ಹೊಂದಿದ್ದ ಬಿರುಸಿನ ಪ್ರಚಾರ ನಡೆಸಿದ್ದರು. ಆದರೆ, ಈಗ ಪ್ರಚಾರದಲ್ಲಿ ಅಷ್ಟೇನೂ ಸಕ್ರಿಯವಾಗಿ ಕಾಣಿಸಿಕೊಳ್ಳದೆ, ಮಾಲೂರಿನ ರೆಸಾರ್ಟ್ ನಿರ್ಮಾಣದಲ್ಲಿ ಬ್ಯುಸಿಯಾಗಿದ್ದಾರೆ ಎಂಬ ಮಾತುಗಳು ಕ್ಷೇತ್ರದಲ್ಲಿ ಕೇಳುಬರುತ್ತಿವೆ.

ಮಾಜಿ ಶಾಸಕರಾದ ಮುನಿನರಸಿಂಹಯ್ಯ, ವೆಂಕಟಸ್ವಾಮಿ ಮತ್ತು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎ.ಸಿ. ಶ್ರೀನಿವಾಸ್, ಜಿಲ್ಲಾ ಉಪಾಧ್ಯಕ್ಷ ವಿ. ಶಾಂತಕುಮಾರ್ ಪಕ್ಷದ ಗೆಲುವಿಗೆ ನಾಲ್ಕು ಆಧಾರ ಸ್ತಂಭದಂತಿದ್ದರೆ, ಇವರಿಗೆ ಯುವ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಕೆ.ಆರ್. ನಾಗೇಶ್ ತಂಡ ಕೈಜೋಡಿಸಿದೆ.

ಬಿಜೆಪಿಯಲ್ಲೂ ಚಂದ್ರಣ್ಣ, ಪಿಳ್ಳಮುನಿಶಾಮಪ್ಪ ಇಬ್ಬರಿಗೂ ಕ್ಷೇತ್ರದ ಅನುಭವವಿದೆ. ಐದು ಹೋಬಳಿ, ಎರಡು ಪಟ್ಟಣಗಳಲ್ಲಿ ಮತದಾರರ ಗಮನ ಕೇಂದ್ರಿಕರಣಕ್ಕೆ ವಿನೂತನ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.

ಒಟ್ಟಾರೆ, ಈ ಬಾರಿಯ ಚುನಾವಣೆಯಲ್ಲಿ ಜೆಡಿಎಸ್, ಕಾಂಗ್ರೆಸ್ ಮತ್ತು ಜೆಡಿಎಸ್ ಮಧ್ಯೆ ತ್ರಿಕೋನ ಸ್ಪರ್ಧೆ ಏರ್ಪಡಲಿದ್ದು, ಜೆಡಿಎಸ್‌ನಿಂದ ಪಕ್ಷಾಂತರ ಮಾಡಿರುವ ಸ್ಥಳೀಯ ಮುಖಂಡರು, ಸ್ಥಳೀಯ ನಾಯಕರ ಗೊಂದಲ ಮತ್ತು ಒಕ್ಕಲಿಗರ ವಿಕೇಂದ್ರೀಕರಣವು ಮೇಲ್ನೋಟಕ್ಕೆ ಜೆಡಿಎಸ್‌ಗೆ ದುಬಾರಿಯಾಗುವಂತೆ ಕಂಡುಬರುತ್ತಿದೆ.

ಒಕ್ಕಲಿಗರ ಪ್ರಾಬಲ್ಯ ಕುಸಿತ

ಪಿಳ್ಳಮುನಿಶಾಮಪ್ಪ ಅವರಿಂದಾಗಿ ಪರಿಶಿಷ್ಟ ಜಾತಿ(ಎಸ್.ಸಿ)ಯ ಎಡಗೈ ಸಮುದಾಯದ ಮತಗಳನ್ನು ಬಿಜೆಪಿ ಸೆಳೆಯುವ ಸಾಧ್ಯತೆಯಿದೆ. ಇನ್ನು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಪ್ರಭಾವದಿಂದಾಗಿ ಬಲಗೈ ಸಮುದಾಯ ಕಾಂಗ್ರೆಸ್ ಪರ ಗಟ್ಟಿಯಾಗಿ ನಿಲ್ಲಬಹುದು. ಆದರೆ, ಒಕ್ಕಲಿಗ ನಾಯಕರು ಇತರೆ ಪಕ್ಷಕ್ಕೆ ಪಕ್ಷಾಂತರಗೊಂಡಿರುವ ಕಾರಣ ಈ ಬಾರಿಯ ಚುನಾವಣೆಯಲ್ಲಿ ಒಕ್ಕಲಿಗ ಮತಗಳು ವಿಕೇಂದ್ರೀಕರಣವಾಗುವ ಸಾಧ್ಯತೆ ದಟ್ಟವಾಗಿದೆ. ವಿಜಯಪುರ ಭಾಗದಲ್ಲಿ ಹೆಚ್ಚಾಗಿರುವ ಮುಸ್ಲಿಂ ಸಮುದಾಯವು ಜೆಡಿಎಸ್ ಬತ್ತಳಿಕೆಯಲ್ಲಿದೆ. ಇನ್ನೂ ಅಹಿಂದ ವರ್ಗ ಕಾಂಗ್ರೆಸ್‌ ಪರ ಗುರುತಿಸಿಕೊಳ್ಳುತ್ತಿದ್ದು, ಇತರ ಸಮುದಾಯಗಳ ಮತವೇ ಈ ಬಾರಿ ನಿರ್ಣಾಯಕವಾಗಲಿವೆ ಎನ್ನಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT