ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾಣಿಜ್ಯ ಮಳಿಗೆ ಬಾಡಿಗೆ ಕಡಿತಕ್ಕೆ ಸಲಹೆ

Last Updated 17 ಜನವರಿ 2023, 4:36 IST
ಅಕ್ಷರ ಗಾತ್ರ

ವಿಜಯಪುರ(ದೇವನಹಳ್ಳಿ): ಪುರಸಭೆಯಲ್ಲಿ ಸೋಮವಾರ ಅಧ್ಯಕ್ಷೆ ರಾಜೇಶ್ವರಿಭಾಸ್ಕರ್ ಅವರ ಅಧ್ಯಕ್ಷತೆಯಲ್ಲಿ ಗಣರಾಜ್ಯೋತ್ಸವ ಆಚರಣೆಯ ಕುರಿತು ಚರ್ಚೆ ಮಾಡಲು ಕರೆಯಲಾಗಿದ್ದ ಪೂರ್ವಭಾವಿ ಸಭೆ ಸಮಸ್ಯೆಗಳ ಕುರಿತು ಚರ್ಚಿಸಲು ವೇದಿಕೆಯಾಯಿತು.

ಪಟ್ಟಣದ ಬಸ್ ನಿಲ್ದಾಣದಲ್ಲಿರುವ ಹೋಟೆಲ್‌ನಿಂದ ತಿಂಗಳಿಗೆ ₹25 ಸಾವಿರ ಬಾಡಿಗೆ ಬರುತ್ತಿತ್ತು. ಬಾಡಿಗೆಯನ್ನು ಏರಿಕೆ ಮಾಡಿ, ಅದಕ್ಕೆ ಜಿಎಸ್‌ಟಿ ವಿಧಿಸಿರುವ ಕಾರಣ ಇದುವರೆಗೂ ಅದನ್ನು ಹರಾಜು ಮಾಡಲು ಸಾಧ್ಯವಾಗಲಿಲ್ಲ. ಅಂಗಡಿ ಮಳಿಗೆಗಳನ್ನು ನಿರ್ಮಾಣ ಮಾಡಿದರೂ ಲಾಭವಿಲ್ಲದಂತಾಗಿದೆ. ದುಪ್ಪಟ್ಟು ಬಾಡಿಗೆ ನೀಡಿ, ಹರಾಜಿನಲ್ಲಿ ಖರೀದಿಸಲು ಜನರು ಹಿಂದೇಟು ಹಾಕುತ್ತಿದ್ದಾರೆ. ಈಗ ನಿಗದಿಮಾಡಿರುವ ಬಾಡಿಗೆ ಕಡಿಮೆ ಮಾಡಿ ಎಂದು ಸದಸ್ಯ ಎಂ.ಸತೀಶ್ ಕುಮಾರ್ ಸಲಹೆ ನೀಡಿದರು.

ಪುರಸಭೆಗೆ ಸೇರಿದ 8 ಅಂಗಡಿಗಳಿಗೆ ಸಂಬಂಧಪಟ್ಟಂತೆ ನ್ಯಾಯಾಲಯದಲ್ಲಿ ತಡೆಯಾಜ್ಞೆ ಇದೆ. ಉಳಿದ ಅಂಗಡಿಗಳನ್ನು ಹರಾಜು ಮಾಡಬಹುದು. ನೂತನವಾಗಿ ನಿರ್ಮಿಸಿರುವ ಅಂಗಡಿಗಳ ಬಾಡಿಗೆ ಜಾಸ್ತಿ ಇರುವ ಕಾರಣ, ಹರಾಜಿನಲ್ಲಿ ಯಾರೂ ಭಾಗವಹಿಸುತ್ತಿಲ್ಲ. ಇದರಿಂದ ಪುರಸಭೆಗೆ ಬರಬೇಕಾಗಿರುವ ಆದಾಯಕ್ಕೆ ತೊಡಕಾಗುತ್ತಿದೆ ಎಂದರು.

ಸದಸ್ಯ ಎ.ಆರ್.ಹನೀಪುಲ್ಲಾ ಮಾತನಾಡಿ, ಪುರಸಭೆಗೆ ಆಯ್ಕೆಯಾಗಿ ಬಂದ ನಂತರ ಸಾಮಾನ್ಯ ಸಭೆ, ವಿಶೇಷ ಸಭೆಗಳಲ್ಲಿ ಚರ್ಚೆ ಮಾಡಿರುವ ಯಾವ ವಿಚಾರಗಳೂ ಅನುಷ್ಠಾನಕ್ಕೆ ಬರುತ್ತಿಲ್ಲ. ಬಜೆಟ್ ಸಿದ್ಧಪಡಿಸುವ ಮುನ್ನಾ ಸಿದ್ದವಿಟ್ಟುಕೊಂಡಿರಬೇಕಾಗಿರುವ ಡಿಸಿಬಿಗಳನ್ನು ಸರಿಯಾಗಿ ನಿರ್ವಹಣೆ ಮಾಡುತ್ತಿಲ್ಲ. ಪುರಸಭೆಗೆ ಬರಬೇಕಾಗಿರುವ ಆದಾಯದ ಕುರಿತು, ಉದ್ದಿಮೆ ಪರವಾನಗಿ ಪಡೆಯದೆ ಇರುವ ಅಂಗಡಿ ಮಳಿಗೆಗಳನ್ನು ಲೆಕ್ಕ ಮಾಡುವಂತೆ ಹೇಳಿದ್ದೆವು. ಇದುವರೆಗೂ ಮಾಡಿಲ್ಲ ಎಂದರು.

ಮುಖ್ಯಾಧಿಕಾರಿ ವಿ.ಮೋಹನ್ ಕುಮಾರ್ ಮಾತನಾಡಿ, ಸಭೆಗಳಲ್ಲಿ ತೀರ್ಮಾನಿಸಿದ ಎಲ್ಲ ತೀರ್ಮಾನಗಳನ್ನು ಏಕಕಾಲದಲ್ಲಿ ಜಾರಿಗೆ ತರಲು ಸಾಧ್ಯವಾಗುವುದಿಲ್ಲ. ಕೆಲವು ಕಾನೂನು ತೊಡಕು ನಿವಾರಣೆ ಮಾಡಿ ಕೆಲಸ ಮಾಡಬೇಕು. ಸರ್ಕಾರದ ಆದೇಶ ಪಾಲನೆ ಮಾಡಬೇಕಾಗಿರುವ ಕಾರಣ ಸದಸ್ಯರು ಸಹಕರಿಸಬೇಕು ಎಂದರು.

ಪುರಸಭಾ ಅಧ್ಯಕ್ಷೆ ರಾಜೇಶ್ವರಿ ಭಾಸ್ಕರ್, ಉಪಾಧ್ಯಕ್ಷ ಎಂ.ಕೇಶವಪ್ಪ, ವ್ಯವಸ್ಥಾಪಕ ಆಂಜನೇಯುಲು, ಸದಸ್ಯರು, ಅಧಿಕಾರಿಗಳು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT