ಬುಧವಾರ, ಮೇ 27, 2020
27 °C

ಸೂಲಿಬೆಲೆ: ನಿಷೇಧಾಜ್ಞೆ ನಡುವೆ ವ್ಯಾಪಾರ ಜೋರು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಸೂಲಿಬೆಲೆ: ಭಾನುವಾರ ‘ಜನತಾ ಕರ್ಫ್ಯೂ’ಗೆ ವ್ಯಾಪಕ ಬೆಂಬಲ ನೀಡಿದ ಜನತೆ ಸೋಮವಾರ ನಿಷೇಧಾಜ್ಞೆಯ ನಡುವೆಯೂ ಬೆಳಿಗ್ಗೆ ಆಗುತ್ತಿದ್ದಂತೆ ಓಡಾಡಲು ಆರಂಭಿಸಿದ್ದಾರೆ. ವರ್ತಕರು ವ್ಯಾಪಾರ ವಹಿವಾಟು ನಡೆಸಿದರು.  

ಸೂಲಿಬೆಲೆ ಪಟ್ಟಣದಲ್ಲಿ ಹೋಟೆಲು, ಬೇಕರಿಗಳು ಸೇರಿದಂತೆ ಎಲ್ಲ ರೀತಿಯ ವ್ಯಾಪಾರ ವಹಿವಾಟು ಜೋರಾಗಿಯೇ ಪ್ರಾರಂಭವಾಯಿತು. ಅಂಗಡಿಗಳಲ್ಲಿ ಸಾಲು ಸಾಲು ಜನ ತರಕಾರಿ ಮತ್ತು ದಿನಸಿ ಕೊಳ್ಳಲು ಮುಗಿಬಿದ್ದರು. ಇದು ಪೊಲೀಸರನ್ನು ಚಿಂತೆಗೀಡುಮಾಡಿತು. 

ವ್ಯಾಪಾರ ವಹಿವಾಟು ಜೋರಾಗುತ್ತಿದ್ದಂತೆ ಎಚ್ಚೆತ್ತುಕೊಂಡ ಪೊಲೀಸರು ದಿನಸಿ, ತರಕಾರಿ, ಮೆಡಿಕಲ್ ಶಾಪ್ ಸೇರಿದಂತೆ ಜನರಿಗೆ ದಿನ ಬಳಕೆಗೆ ಅಗತ್ಯಗಳನ್ನು ಪೂರೈಸುವ ಅಂಗಡಿಗಳನ್ನು ಹೊರತುಪಡಿಸಿ ಎಲ್ಲ ಅಂಗಡಿಗಳನ್ನು ಮುಚ್ಚಲು ಸೂಚನೆ ನೀಡಿದರು. ಆದರೆ ಕೆಲವು ವರ್ತಕರು, ಪೊಲೀಸರು ಗಸ್ತು ಬಂದಾಗ ಬಾಗಿಲು ಹಾಕುವುದು, ಹೋದ ನಂತರ ಮತ್ತೆ ತೆರೆಯುವುದು ಮಾಡುತ್ತಾ, ಪೊಲೀಸರ ಜತೆ ಕಣ್ಣಾ ಮುಚ್ಚಾಲೆ ನಡೆಸಿದರು. 

ಕೋವಿಡ್-19 ರೋಗದ ಚಿಂತೆಗಿಂತ, ಯುಗಾದಿ ಹಬ್ಬ ಸಂಭ್ರಮಾಚರಣೆ ಆಚರಿಸುವುದು ಹೇಗೆ ಎಂಬ ಚಿಂತೆಯೇ ಜನರಲ್ಲಿ ಹೆಚ್ಚಾಗಿ ಕಾಣುತ್ತಿತ್ತು. ಸರ್ಕಾರದ ನಿಷೇಧಾಜ್ಞೆಗೆ ಜಗ್ಗದೆ, ಯುಗಾದಿಯನ್ನು ಬರಮಾಡಿಕೊಳ್ಳುವ ತಯಾರಿಯಲ್ಲಿದ್ದ ಜನತೆ ಸರಕು ಸಾಮಾನುಗಳನ್ನು ಕೊಳ್ಳಲು ಮುಗಿಬಿದ್ದರು.

ಇಂದು ಅಧಿಕಾರಿಗಳ ಸಭೆ: ಕೊರೊನಾ ವೈರಸ್‌ ಸೋಂಕು ಹರಡದಂತೆ ತಡೆಗಟ್ಟಲು ಕೈಗೊಳ್ಳಬೇಕಾದ ಮುಂಜಾಗ್ರತೆ ಕ್ರಮಗಳ ಬಗ್ಗೆ ಚರ್ಚಿಸಲು ಸೂಲಿಬೆಲೆ ಹೋಬಳಿ ಮಟ್ಟದ ಅಧಿಕಾರಿಗಳ ಸಭೆಯನ್ನು ಮಾರ್ಚ್ 24 ರ ಮಧ್ಯಾಹ್ನ 2 ಗಂಟೆಗೆ ಸೂಲಿಬೆಲೆ ಗ್ರಾಮ ಪಂಚಾಯಿತಿ ಕಚೇರಿಯಲ್ಲಿ ಕರೆಯಲಾಗಿದೆ ಎಂದು ಪಿಡಿಒ ಸುಂದರ್ ಅವರು ತಿಳಿಸಿದ್ದಾರೆ.

ಗ್ರಾಮ ಪಂಚಾಯಿತಿ, ಆರೋಗ್ಯ, ಪೊಲೀಸ್, ಕಂದಾಯ, ಪಶುಸಂಗೋಪನೆ, ಕೃಷಿ, ತೋಟಗಾರಿಕೆ, ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿಗಳು ಸಭೆಗೆ ಹಾಜರಾಗಬೇಕು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.