ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೇಸಿಗೆ: ಮಡಿಕೆಗಳಿಗೆ ಹೆಚ್ಚಿದ ಬೇಡಿಕೆ

ಹೆಚ್ಚಿದ ಬಿಸಿಲಿನ ಬೇಗೆ: ರೆಫ್ರಿಜಿರೇಟರ್ ಬಿಟ್ಟು ಮಣ್ಣಿನ ಮಡಿಕೆಗಳಲ್ಲಿ ನೀರು ಸಂಗ್ರಹ
Last Updated 7 ಮಾರ್ಚ್ 2023, 6:56 IST
ಅಕ್ಷರ ಗಾತ್ರ

ವಿಜಯಪುರ(ದೇವನಹಳ್ಳಿ): ಬಿಸಿಲಿನ ಬೇಗೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಜನರು ತಂಪು ಪಾನೀಯಗಳು ಹಾಗೂ ತಣ್ಣನೆಯ ನೀರು ಸಂಗ್ರಹಕ್ಕೆ ಮಣ್ಣಿನ ಮಡಿಕೆಗಳ ಮೊರೆ ಹೋಗಿದ್ದಾರೆ.

ಬಿಸಿಲಿನ ತಾಪಮಾನ 31 ಡಿಗ್ರಿ ವರೆಗೂ ಏರಿಕೆಯಾಗಿದ್ದು, ಮಣ್ಣಿನಿಂದ ತಯಾರಿಸಿರುವ ಮಡಿಕೆ ಹಾಗೂ ಕೊಳಾಯಿ ಅಳವಡಿಸಿರುವ ಮಡಿಕೆಗಳಿಗೆ ಬೇಡಿಕೆ ಹೆಚ್ಚಾಗಿದೆ.

ಸ್ಟೀಲ್, ಅಲ್ಯೂಮಿನಿಯಂ, ಪ್ಲಾಸ್ಟಿಕ್, ಪೈಬರ್ ವಸ್ತುಗಳು ಮಾರುಕಟ್ಟೆಗೆ ಬರುತ್ತಿದ್ದಂತೆ ಕಣ್ಮರೆಯಾಗಿದ್ದ ಮಡಿಕೆಗಳು ಬೇಸಿಗೆ ಕಾಲದಲ್ಲಿ ಮಾರುಕಟ್ಟೆಗಳಲ್ಲಿ ಕಾಣ ಸಿಗುತ್ತಿವೆ.

ಮಣ್ಣಿನ ಮಡಿಕೆಯಲ್ಲಿ ಸಂಗ್ರಹಿಸಿದ ನೀರು ಕುಡಿಯುವುದರಿಂದ ದಾಹ ತೀರಿಸುವುದಲ್ಲದೆ, ಹಲವು ಆರೋಗ್ಯ ಉಪಯೋಗ ಇರುವುದರಿಂದ ಪ್ರತಿ ಬೇಸಿಗೆಯಲ್ಲೂ ಮಡಿಕೆಗಳ ಮೊರೆ ಹೋಗುವುದು ಸಾಮಾನ್ಯವಾಗಿದ್ದು, ಬೇಸಿಗೆ ಆರಂಭದಲ್ಲೇ ಮಡಿಕೆಗಳ ಮಾರಾಟ ಜೋರಾಗಿದೆ. ರಸ್ತೆ ಇಕ್ಕೆಲ್ಲಗಳಲ್ಲಿ ಮಡಿಕೆ ವ್ಯಾಪಾರ ಬಿರುಸುಗೊಂಡಿದ್ದು, ಕುಂಬಾರರಲ್ಲಿ ಹರ್ಷ ತಂದಿದೆ.

ಜನರು ನೀರಿನ ದಾಹ ತಣಿಸಿಕೊಳ್ಳಲು ರೆಫ್ರಿಜಿರೇಟರ್ ಬಿಟ್ಟು ಮಣ್ಣಿನ ಮಡಿಕೆಗಳಲ್ಲಿ ನೀರು ಸಂಗ್ರಹ ಮಾಡಿಟ್ಟುಕೊಳ್ಳಲು ಮುಂದಾಗುತ್ತಿದ್ದಾರೆ. ಸರ್ಕಾರಿ ಕಚೇರಿಗಳಲ್ಲೂ ನೀರಿನ ಕ್ಯಾನ್‌ ಬದಲಿಗೆ ಮಣ್ಣಿನ ಮಡಿಕೆಗಳಲ್ಲಿ ನೀರು ಸಂಗ್ರಹಿಸಿಟ್ಟುಕೊಳ್ಳುತ್ತಿದ್ದಾರೆ.

20 ಲೀಟರ್ ನೀರು ಸಂಗ್ರಹಿಸುವ ಸಾಮರ್ಥ್ಯವುಳ್ಳ ಒಂದು ಮಡಿಕೆ ₹400 ವರೆಗೂ ಮಾರಾಟ ಮಾಡಲಾಗುತ್ತಿದೆ. ಕೊಳಾಯಿ ಅಳವಡಿಸಿರುವ 15 ಲೀಟರ್ ಸಾಮರ್ಥ್ಯದ ಕೊಡ ₹350 ವರೆಗೂ ಮಾರಾಟವಾಗುತ್ತಿದೆ. ಒಂದು ಕಡೆಯಿಂದ ಮತ್ತೊಂದು ಕಡೆಗೆ ಕೊಂಡೊಯ್ಯಲು ಅನುಕೂಲವಾಗುವಂತಹ ಮಣ್ಣಿನ ಬಾಟಲಿಗಳನ್ನೂ ತಯಾರು ಮಾಡಲಾಗಿದೆ. ಬಗೆ ಬಗೆಯ ವಸ್ತುಗಳನ್ನು ಮಣ್ಣಿನಿಂದ ತಯಾರಿಸಿದ್ದು, ಗ್ರಾಹಕರು ಖರೀದಿಗಾಗಿ ಮುಗಿಬೀಳುತ್ತಿದ್ದಾರೆ.

ತಯಾರಿಕೆಗೆ ಮಣ್ಣಿನ ಕೊರತೆ: ಎಚ್.ಎನ್.ವ್ಯಾಲಿ ಯೋಜನೆಯಡಿ ಕೆರೆಗಳಿಗೆ ನೀರು ಹರಿಸಿರುವುದರ ಜೊತೆಗೆ, ಇತ್ತಿಚೆಗೆ ಉತ್ತಮ ಮಳೆಯಿಂದ ಕೆರೆಗಳು ಭರ್ತಿಯಾಗಿರುವ ಕಾರಣ ಮಡಿಕೆ ತಯಾರಿಕೆಗೆ ಮಣ್ಣಿನ ಕೊರತೆ ಕಾಡುತ್ತಿದೆ. ಕೋಲಾರದ ನರಸಾಪುರ ಸೇರಿದಂತೆ ಬೇರೆ ಬೇರೆ ಕಡೆಗಳಿಂದ ಮಣ್ಣು ತರಿಸಿಕೊಂಡು ಮಡಿಕೆಗಳು ತಯಾರು ಮಾಡುತ್ತಿರುವ ಕಾರಣ, ಮಣ್ಣಿನ ಮಡಿಕೆಗಳ ಬೆಲೆ ಏರಿಕೆಯಾಗಿದೆ.

ಲೋಡ್‌ ಮಣ್ಣಿಗೆ ₹15ಸಾವಿರ: ‘ಪ್ರತಿವರ್ಷ ಬೇಸಿಗೆಯಲ್ಲಷ್ಟೇ ಮಡಿಕೆಗಳಿಗೆ ಬೇಡಿಕೆ ಬರುತ್ತದೆ. ಉಳಿದ ದಿನಗಳಲ್ಲಿ ಬೇಡಿಕೆ ಇರುವುದಿಲ್ಲ. ಆದರೆ, ಈ ಬಾರಿ ಮಡಿಕೆಗಳಿಗೆ ಬೇಡಿಕೆಯಿದ್ದರೂ ಬೇಡಿಕೆಗೆ ತಕ್ಕಂತೆ ಮಡಿಕೆಗಳು ತಯಾರಿಸಲು ಮಣ್ಣಿನ ಕೊರತೆ ಕಾಡುತ್ತಿದೆ’ ಎನ್ನುತ್ತಾರೆ ಮಡಿಕೆ ತಯಾರಕ ಮುನಿರಾಜು.

‘ಒಂದು ಲೋಡು ಮಣ್ಣಿಗೆ ಸುಮಾರು ₹15,000 ಕೊಡಬೇಕಾಗಿದೆ. ಆದರೆ, ಇಷ್ಟೊಂದು ದುಬಾರಿ ಬಂಡವಾಳ ಹಾಕಿ ಮಡಿಕೆ ತಯಾರು ಮಾಡಿಕೊಂಡು ಮಾರುಕಟ್ಟೆಗೆ ಹೋದರೆ, ಗ್ರಾಹಕರು ಚೌಕಾಸಿ ಮಾಡುತ್ತಾರೆ. ಆದರೂ ತಯಾರಿಸಿರುವ ಮಡಿಕೆಗಳು ಮಾರಾಟವಾಗಲಿ ಎನ್ನುವ ಕಾರಣ, ಸ್ವಲ್ಪ ಹೆಚ್ಚು ಕಡಿಮೆ ಮಾಡಿಕೊಂಡು ಮಾರಾಟ ಮಾಡುತ್ತಿದ್ದೇವೆ’ ಎಂದು ತಿಳಿಸಿದರು.

ಫ್ರಿಡ್ಜ್‌ ನೀರು ಅಪಾಯಕಾರಿ: ‘ಬೇಸಿಗೆಯಲ್ಲಿ ಪ್ರೀಡ್ಜ್‌ನಲ್ಲಿಟ್ಟು ನೀರು ಕುಡಿಯುವುದರಿಂದ ಹಲವಾರು ಸಮಸ್ಯೆಗಳು ಕಾಡುತ್ತವೆ ಎನ್ನುವ ಕಾರಣ ಮಡಿಕೆ ಖರೀದಿಸುತ್ತಿದ್ದೇವೆ. ಮಡಿಕೆಯಲ್ಲಿ ನೀರು ನೈಸರ್ಗಿಕವಾಗಿ ತಣ್ಣಗೆ ಇರುತ್ತವೆ. ಮಡಿಕೆಯ ಕೆಳಗೆ ಒಂದಷ್ಟು ಮರಳು ಹಾಕಿ ಇಟ್ಟರೆ, ಮತ್ತಷ್ಟು ತಣ್ಣಗೆ ಇರುತ್ತದೆ’ ಎನ್ನುತ್ತಾರೆ ಗ್ರಾಹಕಿ ಅಲವೇಲಮ್ಮ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT