ಬುಧವಾರ, ಸೆಪ್ಟೆಂಬರ್ 18, 2019
28 °C
ಬೆಟ್ಟಕೋಟೆ ಗ್ರಾಮದಲ್ಲಿ ₹ 50 ಲಕ್ಷ ವೆಚ್ಚದಲ್ಲಿ ಅಭಿವೃದ್ಧಿ ಕಾಮಗಾರಿಗೆ ಚಾಲನೆ

‘ಐಎಎಲ್‌ ಅನುದಾನ ಅಭಿವೃದ್ಧಿಗೆ ಪೂರಕ’

Published:
Updated:
Prajavani

ವಿಜಯಪುರ: ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಪ್ರಾಧಿಕಾರದಿಂದ (ಐಎಎಲ್) ಸಾಮಾಜಿಕ ಹೊಣೆಗಾರಿಕೆಯಡಿ (ಸಿಎಸ್‌ಆರ್‌) ನೀಡುತ್ತಿರುವ ಅನುದಾನಗಳಿಂದ ಕ್ಷೇತ್ರದ ಅಭಿವೃದ್ಧಿಗೆ ಸಹಕಾರಿಯಾಗುತ್ತಿದೆ ಎಂದು ಶಾಸಕ ನಿಸರ್ಗ ನಾರಾಯಣಸ್ವಾಮಿ ಹೇಳಿದರು.

ಚನ್ನರಾಯಪಟ್ಟಣ ಹೋಬಳಿ ಬೆಟ್ಟಕೋಟೆ ಗ್ರಾಮದಲ್ಲಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಪ್ರಾಧಿಕಾರದ ಸಿ.ಎಸ್.ಆರ್ ಅನುದಾನದಡಿ ₹ 50 ಲಕ್ಷ ವೆಚ್ಚದಲ್ಲಿ ಕುಡಿಯುವ ನೀರಿನ ಪೈಪ್‌ಲೈನ್, ನೀರಿನ ಸಂಪ್ ನಿರ್ಮಾಣ ಕಾಮಗಾರಿಗೆ ಚಾಲನೆ ನೀಡಿ ಅವರು ಮಾತನಾಡಿದರು.

‘ಈ ಯೋಜನೆ ಪ್ರಾರಂಭಿಸಿರುವುದರಿಂದ ಬೆಟ್ಟಕೋಟೆ ಗ್ರಾಮಕ್ಕೂ ಕಾವೇರಿ ನೀರು ಸರಬರಾಜು ಮಾಡಲು ಅನುಕೂಲವಾಗಲಿದೆ. ಕುಡಿಯುವ ನೀರಿನ ಸಮಸ್ಯೆ ಬಗೆಹರಿಸಲಿಕ್ಕೂ ಸಾಧ್ಯವಾಗುತ್ತದೆ’ ಎಂದರು.

‘ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಟರ್ಮಿನಲ್ ಎರಡು ಕಾಮಗಾರಿ ಮಾಡಿದ್ದರಿಂದ ಬೆಟ್ಟಕೋಟೆ ಗ್ರಾಮಸ್ಥರಿಗೆ ತುಂಬಾ ತೊಂದರೆಯಾಗಿದೆ. ರೈತರು ಬೆಳೆಯುವ ರೇಷ್ಮೆ, ತರಕಾರಿ ಬೆಳೆಗಳು, ಮನೆಗಳಿಗೆ ದೂಳು ಅವರಿಸುತ್ತಿರುವುದರಿಂದ ಜಿಲ್ಲಾಧಿಕಾರಿ ಹಾಗೂ ವಿಮಾನ ನಿಲ್ದಾಣ ಪ್ರಾಧಿಕಾರದ ಅಧ್ಯಕ್ಷರ ಗಮನಕ್ಕೆ ತಂದು ಇದರ ಬಗ್ಗೆ ಕ್ರಮ ತೆಗೆದುಕೊಂಡು ರೈತರಿಗೆ ಪರಿಹಾರ ನೀಡಬೇಕು ಎಂದು ಮನವಿ ಮಾಡಲಾಗಿದೆ’ ಎಂದರು.

‘ಶಾಸಕರ ಅನುದಾನದಲ್ಲಿ ದೇವನಹಳ್ಳಿ ಕ್ಷೇತ್ರ ವ್ಯಾಪ್ತಿಯಲ್ಲಿ ಹಲವಾರು ಅಭಿವೃದ್ಧಿ ಕಾರ್ಯ ನಡೆಯುತ್ತಿದೆ. ಹಳ್ಳಿಗಳಲ್ಲಿ ಸಿ.ಸಿ.ರಸ್ತೆಗಳ ನಿರ್ಮಾಣ ಮಾಡಲಾಗಿದೆ. ಅನಾರೋಗ್ಯದಿಂದ ಬಳಲಿ ಚಿಕಿತ್ಸೆ ಪಡೆದುಕೊಂಡಿರುವವರಿಗೆ ಮುಖ್ಯಮಂತ್ರಿ ಪರಿಹಾರನಿಧಿಯಡಿ ಪರಿಹಾರ ಕೊಡಿಸಲಾಗಿದೆ. ₹ 2 ಕೋಟಿ ಅನುದಾನ ಲಭ್ಯವಿದ್ದು ಮೂಲಸೌಕರ್ಯ ಒದಗಿಸಲಾಗುತ್ತದೆ’ ಎಂದು ಹೇಳಿದರು.

‘ಮನವಿಪತ್ರ ಮುಖಾಂತರ ಬೇಡಿಕೆ ಸಲ್ಲಿಸಿದರೆ ಅನುದಾನ ಬಿಡುಗಡೆ ಮಾಡಿಕೊಡಲಾಗುತ್ತದೆ. ಇಲ್ಲಿ ಪಶು ಆರೋಗ್ಯ ಕೇಂದ್ರವನ್ನು ತೆರೆಯಬೇಕು’ ಎಂದು ಗ್ರಾಮಸ್ಥರು ಶಾಸಕ ನಿಸರ್ಗ ನಾರಾಯಣಸ್ವಾಮಿ ಅವರಿಗೆ ಮನವಿ ಮಾಡಿದರು.

ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸೌಮ್ಯನಂದೀಶ್ ಮಾತನಾಡಿ, ’ಪಂಚಾಯಿತಿ ವ್ಯಾಪ್ತಿಯಲ್ಲಿ ಕುಡಿಯುವ ನೀರಿಗೆ ತುಂಬಾ ತೊಂದರೆಯಾಗಿದೆ. ಅಭಿವೃದ್ಧಿ ಕಾರ್ಯಗಳಲ್ಲಿ ಮೊದಲ ಆದ್ಯತೆ ಕುಡಿಯುವ ನೀರಿನ ಪೂರೈಕೆಗಾಗಿ ನೀಡುತ್ತಿದ್ದೇವೆ. ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಪ್ರಾಧಿಕಾರದವರು ಬೆಟ್ಟಕೋಟೆ ಗ್ರಾಮಕ್ಕೆ ಶಾಲೆ ನಿರ್ಮಿಸಿ ಕೊಟ್ಟಿದ್ದಾರೆ. ಈಗ ನೀರಿನ ಪೈಪ್‌ಲೈನ್ ನಿರ್ಮಾಣ ಮಾಡುವುದರಿಂದ ಗ್ರಾಮಗಳು ಅಭಿವೃದ್ಧಿಯಾಗುತ್ತವೆ’ ಎಂದರು.

ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ಚೈತ್ರಾವೀರೇಗೌಡ, ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಪ್ರಾಧಿಕಾರದ ಅಧಿಕಾರಿ ಮೋಹನ್, ರಮೇಶ್, ಪಿ.ಎಲ್.ಡಿ.ಬ್ಯಾಂಕ್ ಅಧ್ಯಕ್ಷ ಮುನಿರಾಜು, ಕಾರಹಳ್ಳಿ ಮುನೇಗೌಡ, ಶ್ರೀನಿವಾಸ್, ಚನ್ನರಾಯಪಟ್ಟಣ ಹೋಬಳಿ ಜೆಡಿಎಸ್ ಘಟಕದ ಅಧ್ಯಕ್ಷ ಮುನಿರಾಜು, ಗ್ರಾಮ ಪಂಚಾಯಿತಿ ಸದಸ್ಯರಾದ ಚನ್ನರಾಯಪ್ಪ, ಲಕ್ಷ್ಮಮ್ಮ, ವೆಂಕಟೇಗೌಡ, ತಾಲ್ಲೂಕು ಕೃಷಿಕ ಸಮಾಜದ ನಿರ್ದೇಶಕ ರಾಜೇಶ್, ಟಿ.ಎ.ಪಿ.ಎಂ.ಸಿ ನಿರ್ದೇಶಕ ಕಗ್ಗಲಹಳ್ಳಿ ಗುರಪ್ಪ, ಮುನಿರಾಜು, ಶಿವಾನಂದ್, ಎಪಿಎಂಸಿ ನಾಮನಿರ್ದೇಶಕ ಜಯರಾಮೇಗೌಡ, ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಬೀರೇಶ್ ಇದ್ದರು.

Post Comments (+)