ಶನಿವಾರ, ಆಗಸ್ಟ್ 24, 2019
21 °C
ರಾಜ್ಯ ರೈತ ಸಂಘದ ಮುಖಂಡ ಎನ್‌.ಆರ್‌.ಪ್ರಸನ್ನ ಆರೋಪ

ಬೆಂಬಲ ಬೆಲೆ ಘೋಷಣೆ ರೈತರನ್ನು ಮೆಚ್ಚಿಸುವ ಸಾಧನ

Published:
Updated:
Prajavani

ದೊಡ್ಡಬಳ್ಳಾಪುರ: ‘ಕಲಿಕೆ ಪಠ್ಯಕ್ಕಷ್ಟೇ ಸೀಮಿತವಲ್ಲ. ರೈತರ ಹೊಲಗಳಲ್ಲಿ ಪ್ರಾಯೋಗಿಕವಾಗಿಯೂ ಕಲಿಯಬೇಕು ಎನ್ನುವ ಉದ್ದೇಶದಿಂದ, ನಾಲ್ಕು ತಿಂಗಳ ಕಾಲ ಗ್ರಾಮ ವಾಸ್ತವ್ಯ ಶಿಬಿರ ನಡೆಸಲಾಗುತ್ತಿದೆ’ ಎಂದು ರೈ ತಾಂತ್ರಿಕ ವಿಶ್ವವಿದ್ಯಾಲಯದ ಹಿರಿಯ ಪ್ರಾಧ್ಯಾಪಕ ಡಾ.ಮುರಾರಿ ನಾಯ್ಕ್ ಹೇಳಿದರು.

ಇಲ್ಲಿನ ನಾಗಸಂದ್ರ ಗ್ರಾಮದಲ್ಲಿ ರೈ ತಾಂತ್ರಿಕ ವಿಶ್ವವಿದ್ಯಾಲಯದ ಅಂತಿಮ ವರ್ಷದ ಕೃಷಿ ವಿಜ್ಞಾನ ಪದವಿ ವಿದ್ಯಾರ್ಥಿಗಳಿಂದ ನಡೆಯುತ್ತಿರುವ ನಾಲ್ಕು ತಿಂಗಳ ಶಿಬಿರಕ್ಕೆ ಚಾಲನೆ ನೀಡಿ ಮಾತನಾಡಿದರು.

‘ಗ್ರಾಮದಲ್ಲಿಯೇ ಇದ್ದು ರೈತರ ಸಾಮಾಜಿಕ, ಆರ್ಥಿಕ ಸ್ಥಿತಿಯನ್ನು ಅರಿಯಲು ಇದು ಸಹಕಾರಿಯಾಗಲಿದೆ. ರೈತರೊಂದಿಗಿನ ಒಡನಾಟದಿಂದ ವಿದ್ಯಾರ್ಥಿಗಳ ಜೀವನದಲ್ಲೂ ಗ್ರಾಮೀಣ ಬದುಕಿನ ಅನುಭವ ಬರಲಿದೆ. ರೈತರಲ್ಲಿರುವ ಪಾರಂಪರಿಕ ಕೃಷಿ ಜ್ಞಾನವನ್ನು ಕಲಿಯಲೂ ಇದು ನೆರವಾಗುತ್ತದೆ’ ಎಂದು ಅಭಿಪ್ರಾಯಪಟ್ಟರು.

‘ಆಧುನಿಕ ಕೃಷಿಗೆ ರೈತರು ಮುಂದಾಗಬೇಕು. ಹಸಿರು ಕ್ರಾಂತಿಯ ನಂತರ ದೇಶದಲ್ಲಿ ಆಹಾರ ಕೊರತೆ ನೀಗಿದೆ. ಆದರೆ ಮಣ್ಣಿನ ಫಲವತ್ತತೆ, ನಾಟಿ ಬೀಜಗಳು ಕಣ್ಮರೆಯಾಗುತ್ತಿವೆ. ಹೀಗಾಗಿ ರೈತರು ಬಿತ್ತನೆ ಬೀಜಗಳಿಗಾಗಿ ಕಂಪನಿಗಳ ಮೇಲೆ ಅವಲಂಬಿತರಾಗುವಂತಾಗಿದೆ’ ಎಂದರು.

ರಾಜ್ಯ ರೈತ ಸಂಘದ ಮುಖಂಡ ಎನ್‌.ಆರ್‌.ಪ್ರಸನ್ನ ಮಾತನಾಡಿ, ‘ರೈತ ಸಂಘ ನಡೆಸಿರುವ ಹಲವು ಹೋರಾಟಗಳ ಫಲವಾಗಿ, ಇಂದು ಸರ್ಕಾರಗಳು ತಮ್ಮ ನೀತಿಗಳಲ್ಲಿ ಸಣ್ಣಪುಟ್ಟ ಬದಲಾವಣೆ ಮಾಡಿಕೊಂಡಿವೆ. ಆದರೆ ಜಾಗತೀಕರಣದ ನಂತರ ಜಾರಿಯಾಗುತ್ತಿರುವ ಬಹುತೇಕ ಕಾನೂನು, ನೀತಿಗಳು ರೈತರ ವಿರುದ್ಧವಾಗಿಯೇ ಇವೆ. ಬೆಂಬಲ ಬೆಲೆ ಘೋಷಣೆ ಬರೀ ರೈತರನ್ನು ಮೆಚ್ಚಿಸುವ ಸಾಧನವೇ ಹೊರತು, ಬೆಂಬಲ ಬೆಲೆ ಯೋಜನೆಯಲ್ಲಿ ಸೂಕ್ತ ಸಮಯಕ್ಕೆ ಆಹಾರ ಧಾನ್ಯಗಳ ಖರೀದಿ ನಡೆದಿಲ್ಲ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ದರ್ಗಾಜೋಗಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷ ನಾಗೇಶ್‌ ಮಾತನಾಡಿ, ಕೃಷಿ ಪದವೀಧರ ವಿದ್ಯಾರ್ಥಿಗಳು ಗ್ರಾಮ ವಾಸ್ತವ್ಯ ಇದ್ದು ರೈತರ ಹೊಲಗಳಲ್ಲಿ ಕಲಿಯುವಂತೆ ಕಂದಾಯ, ನ್ಯಾಯಾಂಗ ಹಾಗೂ ಪೊಲೀಸ್‌ ಇಲಾಖೆಗೆ ಆಯ್ಕೆಯಾಗುವ ಅಧಿಕಾರಿಗಳೂ ಆರು ತಿಂಗಳ ಕಾಲ ಗ್ರಾಮಗಳಲ್ಲೇ ಇದ್ದು, ಜನರ ಕಷ್ಟ–ಸುಖಗಳನ್ನು ಹತ್ತಿರದಿಂದ ನೋಡಿ ಅರಿತುಕೊಳ್ಳಬೇಕು’ ಎಂದರು.

ನಾಗಸಂದ್ರ ಎಂಪಿಸಿಎಸ್‌ ಅಧ್ಯಕ್ಷ ಎನ್‌.ಮಹೇಶ್‌, ಕಾರ್ಯ ನಿರ್ವಾಹಕ ಎಂ.ದೇವರಾಜ್‌, ಪ್ರಗತಿಪರ ರೈತ ಮಲ್ಲಪ್ಪ ಹಾಗೂ ಗ್ರಾಮಸ್ಥರು ಇದ್ದರು. ವಿದ್ಯಾರ್ಥಿಗಳು ಬೀಜೋಪಚಾರದ ಬಗ್ಗೆ ಪ್ರಾತ್ಯಕ್ಷಿಕೆ ನೀಡಿದರು.

Post Comments (+)