ಭಾನುವಾರ, ನವೆಂಬರ್ 17, 2019
23 °C
ಬೊಮ್ಮವಾರದಲ್ಲಿ ಸನ್ಮಾನ ಸ್ವೀಕರಿಸಿದ ಸಚಿವ

ಅನರ್ಹ ಶಾಸಕರಿಗೆ ಬಿಜೆಪಿ ಟಿಕೆಟ್ ಕುರಿತು ಚರ್ಚೆ: ಸಚಿವ ಆರ್.ಅಶೋಕ್‌

Published:
Updated:
Prajavani

ದೇವನಹಳ್ಳಿ: ‘ರಾಜ್ಯದ ಅನರ್ಹ ಶಾಸಕರಿಗೆ ಬಿಜೆಪಿಯಿಂದ ಉಪಚುನಾವಣೆಯಲ್ಲಿ ಟಿಕೆಟ್ ನೀಡುವ ಕುರಿತು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರೊಂದಿಗೆ ಚರ್ಚೆ ನಡೆಸಲಾಗುವುದು’ ಎಂದು ಕಂದಾಯ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಆರ್.ಅಶೋಕ್‌ ಹೇಳಿದರು. 

ಇಲ್ಲಿನ ಬೊಮ್ಮವಾರ ಗ್ರಾಮದಲ್ಲಿರುವ ವ್ಯವಸಾಯ ಸೇವಾ ಸಹಕಾರ ಸಂಘದ ಆವರಣದಲ್ಲಿ ಸ್ಥಳೀಯರಿಂದ ಸನ್ಮಾನ ಸ್ವಿಕರಿಸಿ ಅವರು ಮಾತನಾಡಿದರು.

‘ಬಿಜೆಪಿಯು ಯಾವುದೇ ಜೆಡಿಎಸ್ ಮತ್ತು ಕಾಂಗ್ರೆಸ್ ಶಾಸಕರನ್ನು ಹೊತ್ತುಕೊಂಡು ಬಂದಿಲ್ಲ. ಅಯಾ ಪಕ್ಷದ ಅಂತರಿಕ ಕಲಹದಿಂದ ಬೇಸತ್ತು ಸ್ವಯಂಪ್ರೇರಿತರಾಗಿ ಮೋದಿ ಆಡಳಿತವನ್ನು ಮೆಚ್ಚಿ ಬಿಜೆಪಿಗೆ ಬಂದಿದ್ದಾರೆ. ಬಿಜೆಪಿಗೆ ಯಾಕೆ ಬಂದಿದ್ದೇವೆ ಎಂದು ಅನರ್ಹ ಶಾಸಕರು ಈಗಾಗಲೇ ಸ್ಪಷ್ಟನೆ ನೀಡಿದ್ದಾರೆ. ಈ ಹಿಂದೆ ಮೈತ್ರಿ ಸರ್ಕಾರದಲ್ಲಿದ್ದ ಪಕ್ಷಗಳ ಮುಖಂಡರು ಕೈಕಾಲು ಪರಚಿಕೊಳ್ಳುತ್ತಿದ್ದಾರೆ’ ಎಂದು ಲೇವಡಿ ಮಾಡಿದರು.

‘ಅನರ್ಹಗೊಂಡಿರುವ 17 ಸ್ಥಾನಗಳಲ್ಲಿ ಬಿಜೆಪಿ ಅಭ್ಯರ್ಥಿಗಳು ಗೆಲ್ಲಲಿದ್ದಾರೆ. ಕೇಂದ್ರ ಮತ್ತು ರಾಜ್ಯದಲ್ಲಿ ಬಿಜೆಪಿ ಸರ್ಕಾರ ಇರುವುದರಿಂದ ಹೆಚ್ಚಿನ ಅನುದಾನ ತಂದು ಮೂಲ ಸೌಲಭ್ಯಗಳಿಗೆ ಒತ್ತು ನೀಡಲಾಗುತ್ತದೆ. ಉತ್ತರ ಕರ್ನಾಟಕ ಮತ್ತು ಕರಾವಳಿ ಭಾಗದಲ್ಲಿ ಆಗಿರುವ ನೆರೆಹಾವಳಿ ಕುರಿತು ಸರ್ಕಾರ ಸುಮ್ಮನೆ ಕುಳಿತಿಲ್ಲ. ಅಗತ್ಯ ಪರಿಹಾರತ್ಮಾಕ ಯೋಜನೆಗಳಿಗೆ ಒತ್ತು ನೀಡಲಾಗುತ್ತಿದೆ’ ಎಂದು ಹೇಳಿದರು.

‘ಬಯಲು ಸೀಮೆಗೆ ಶಾಶ್ವತ ಕುಡಿಯುವ ನೀರು ಕಲ್ಪಿಸಲು ಕೆರೆಗಳಿಗೆ ನೀರು ಹರಿಸುವ ಯೋಜನೆಗೆ ಅಂದಿನ ಮುಖ್ಯಮಂತ್ರಿ ಸದಾನಂದಗೌಡರು ಪ್ರಥಮ ಬಾರಿಗೆ ₹ 8 ಸಾವಿರ ಕೋಟಿ ಬಜೆಟ್‌ನಲ್ಲಿ ನೀಡಿದ್ದರು ಎಂಬುದನ್ನು ಕಾಂಗ್ರೆಸ್ ಮತ್ತು ಜೆಡಿಎಸ್ ಮುಖಂಡರು ಮರೆತಿದ್ದಾರೆ’ ಎಂದು ಟೀಕಿಸಿದರು.

‘ಪ್ರಸ್ತುತ ಎತ್ತಿನಹೊಳೆ ಯೋಜನೆಯ ಸ್ಥಿತಿಗತಿ ಬಗ್ಗೆ ಗ್ರಾಮಾಂತರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿನ ಜಿಲ್ಲಾ ಮಟ್ಟದ ಅಧಿಕಾರಿಗಳ ಸಭೆ ನಡೆಸಿ ಮಾಹಿತಿ ಪಡೆದುಕೊಂಡ ನಂತರ ಕಾಮಗಾರಿ ಪರಿಶೀಲಿಸಿ ಮುಖ್ಯಮಂತ್ರಿ ಗಮನಕ್ಕೆ ತರಲಾಗುತ್ತದೆ. ಜನಪರ ಯೋಜನೆಗಳ ಜಾರಿ, ಪಾರದರ್ಶಕ ಆಡಳಿತ ಬಿಜೆಪಿ ಸರ್ಕಾರದ ಮುಖ್ಯ ಉದ್ದೇಶ’ ಎಂದು ಹೇಳಿದರು.

ಬಿಜೆಪಿ ಜಿಲ್ಲಾ ಘಟಕ ಅಧ್ಯಕ್ಷ ಬಿ.ರಾಜಣ್ಣ, ಉಪಾಧ್ಯಕ್ಷ ಎಚ್.ಎಂ.ರವಿಕುಮಾರ್, ತಾಲ್ಲೂಕು ಘಟಕ ಪ್ರಧಾನ ಕಾರ್ಯದರ್ಶಿ ಸುನೀಲ್, ಬಿಜೆಪಿ ಮುಖಂಡರಾದ ಚಲುವಾದಿ ನಾರಾಯಣಸ್ವಾಮಿ, ಎ.ವಿ.ನಾರಾಯಣಸ್ವಾಮಿ, ಬಿಜೆಪಿ ಜಿಲ್ಲಾ ಕಾರ್ಯದರ್ಶಿ ಕೆ.ಎನ್.ರಮೇಶ್ ಬಾಬು, ಆವತಿ ಬಿಜೆಪಿ ಶಕ್ತಿ ಕೇಂದ್ರದ ಅಧ್ಯಕ್ಷ ರಮೇಶ್, ತಾಲ್ಲೂಕು ಘಟಕ ಉಪಾಧ್ಯಕ್ಷ ಕೆ.ಸಿ.ಮುನಿರಾಜು, ಗ್ರಾಮ ಪಂಚಾಯಿತಿ ಅಧ್ಯಕ್ಷ ಎನ್.ರಾಮಮೂರ್ತಿ, ಪುರಸಭೆ ಸದಸ್ಯ ಕೋಡಿಮಂಚೇನಹಳ್ಳಿ ನಾಗೇಶ್ ಇದ್ದರು.

ಪ್ರತಿಕ್ರಿಯಿಸಿ (+)