ಬಿಸಿಲ ಬೇಗೆ, ತಾಟಿನಿಂಗು ಮಾರಾಟ ಜೋರು

ಶುಕ್ರವಾರ, ಮೇ 24, 2019
32 °C
ತಮಿಳುನಾಡಿನ ಸೇಲಂ, ಧರ್ಮಪುರಿಯಿಂದ ರಾಜ್ಯಕ್ಕೆ ಸರಬರಾಜು

ಬಿಸಿಲ ಬೇಗೆ, ತಾಟಿನಿಂಗು ಮಾರಾಟ ಜೋರು

Published:
Updated:
Prajavani

ವಿಜಯಪುರ: ಬೇಸಿಗೆಯ ಬಿಸಿಲು ಹೆಚ್ಚಾದಂತೆ ಹೊಟ್ಟೆ ತಣ್ಣಗಾಗಿಸುವ ಹಣ್ಣುಗಳ ಮಾರಾಟ ಭರಾಟೆ ಹೆಚ್ಚುತ್ತಿದೆ. ಹಲವು ಹಣ್ಣುಗಳ ಸಾಲಿಗೆ ಇದೀಗ ತಾಳೇ ಹಣ್ಣು (ತಾಟಿನಿಂಗು) ಸೇರಿಕೊಂಡು ನಗರದಲ್ಲಿ ಎಲ್ಲೆಂದರಲ್ಲಿ ಅದರದೇ ದರ್ಶನವಾಗುತ್ತಿದೆ.

ತಮಿಳುನಾಡಿನ ಸೇಲಂ, ಧರ್ಮಪುರಿಯಿಂದ ಹೊಸೂರು ಮೂಲಕ ಈಚೆಗೆ ತಾಳೇ ಹಣ್ಣು ನಗರಕ್ಕೆ ಸರಬರಾಜಾಗುತ್ತಿದೆ. ಬಿಸಿಲ ತೀವ್ರತೆ ಏರುತ್ತಿರುವುದರಿಂದ ಬಾಯಾರಿಕೆ ಹೆಚ್ಚಾಗಿದ್ದು, ಎಳನೀರಿಗೆ ಪರ್ಯಾಯವಾದ ತಾಳೇಹಣ್ಣಿನ ಬೇಡಿಕೆ ಹೆಚ್ಚುತ್ತಿದೆ.

ಎಳನೀರಿನಷ್ಟೇ ಆರೋಗ್ಯಕರ ಗುಣ ಹೊಂದಿದೆ. ಈ ಹಣ್ಣುಗಳು ಸದ್ಯ ನಗರದ ಬೀದಿ ಬೀದಿಗಳಲ್ಲಿ ತಳ್ಳುಗಾಡಿಗಳ ಮೇಲೆ ತಾಂಟಿನಿಂಗು ವ್ಯಾಪಾರ ಜೋರಾಗಿ ನಡೆಯುತ್ತಿದೆ.

ತಮಿಳುನಾಡಿನಲ್ಲಿ ಹೆಚ್ಚಾಗಿ ಬೆಳೆಯುವ ತಾಳೇ ಹಣ್ಣುಗಳು ಬೇಸಿಗೆ ಕಾಲದಲ್ಲಿ ಹೆಚ್ಚಾಗಿ ಮಾರಾಟವಾಗುತ್ತವೆ. ಬೇಸಿಗೆ ಆರಂಭದ ದಿನಗಳಿಂದ ನಿಧಾನವಾಗಿ ಮಾರುಕಟ್ಟೆಗೆ ಲಗ್ಗೆ ಇಡುತ್ತವೆ. ಮಾರ್ಚ್, ಏಪ್ರಿಲ್ ಮತ್ತು ಮೇನಲ್ಲಿ ತಮಿಳುನಾಡಿನಿಂದ ಇವುಗಳನ್ನು ನಗರಕ್ಕೆ ತಂದು ಮಾರಾಟ ಮಾಡಲಾಗುತ್ತದೆ.

ಸಣ್ಣಗಾತ್ರದ ಈ ಹಣ್ಣು ಎಳನೀರಿನಂತೆ ಕಂಡರೂ, ಇದನ್ನು ಕತ್ತರಿಸಿದಾಗ ಒಳಗೆ ಕೊಬ್ಬರಿಯಂತಹ ಮೂರು ಅಥವಾ ನಾಲ್ಕು ತೊಳೆಗಳಿರುತ್ತವೆ. ಇದನ್ನು ತಿಂದಾಗ ಎಳನೀರಿನ ತಿಳಿ ಗಂಜಿಯನ್ನು ಸವಿದಂತಾಗುತ್ತದೆ. ಹೀಗಾಗಿ ಬೇಸಿಗೆಯಲ್ಲಿ ಜನ ಇದನ್ನು ಹೆಚ್ಚು ಇಷ್ಟಪಡುತ್ತಾರೆ.

ತಮಿಳುನಾಡಿನಿಂದ ಸರಬರಾಜಾಗುವ ತಾಳೇಹಣ್ಣನ್ನು ಅಲ್ಲಿ ನುಂಗು ಎಂದು ಕರೆಯುತ್ತಾರೆ. ನಮ್ಮಲ್ಲಿ ತಾಟಿನಿಂಗು ಎಂದು ಮಾರಾಟಗಾರರು ಕರೆಯುತ್ತಾರೆ.

ತಾಟಿನಿಂಗು ತೊಳೆಗಳು ಸಾಕಷ್ಟು ಪ್ರಮಾಣದ ಶರ್ಕರ, ರಂಜಕ, ಕಬ್ಬಿಣ, ವಿಟಮಿನ್ ’ಸಿ’ ನಿಂದ ಕೂಡಿರುತ್ತವೆ. ಇದು ಎಳನೀರಿನಂತೆಯೇ ದೇಹದ ಉಷ್ಣತೆಯನ್ನು ಕಡಿಮೆ ಮಾಡುತ್ತದೆ ಎಂದು ವ್ಯಾಪಾರಸ್ಥ ಜ್ಞಾನಸುಂದರ್ ಹೇಳುತ್ತಾರೆ.

ಇದಲ್ಲದೆ ಈ ಮರದಿಂದ ನೀರನ್ನು ಸಹ ಸಂಗ್ರಹಿಸಲಾಗುತ್ತದೆ. ಇದಕ್ಕೆ ‘ಪದನೀರ’ ಎಂದು ಕರೆಯುತ್ತಾರೆ. ಇದು ನೀರಿನಂತೆ ಕಾಣಿಸಿದರೂ ಸುಗಂಧಭರಿತ ಸಿಹಿಯಾದ ಪಾನೀಯವಾಗಿರುತ್ತದೆ ಎಂದು ವಿವರಿಸುತ್ತಾರೆ. 

ತಮಿಳುನಾಡಿನ ಪುತ್ತಕೂರು, ಸೇಲಂ ಈ ಭಾಗಗಳಲ್ಲಿ ಹೇರಳವಾಗಿ ತಾಳೇ ಹಣ್ಣು ಬೆಳೆಯುತ್ತಾರೆ. 35 ಕಾಯಿಗಳಿರುವ ಒಂದು ಗೊಂಚಲಿಗೆ ₹ 250 ರಿಂದ ₹ 300ಗೆ ಖರೀದಿಸುತ್ತೇವೆ. ಒಂದು ಕಾಯಿಗೆ ₹ 30  ಮಾರಾಟ ಮಾಡುತ್ತೇವೆ ಎನ್ನುತ್ತಾರೆ.

ಒಂದು ಕಾಯಿ ಮೇಲೆ ₹ 5 ರಿಂದ 7 ಲಾಭ ಸಿಗುತ್ತದೆ. ನಾಲ್ಕೈದು ವ್ಯಾಪಾರಿಗಳು ಸೇರಿ ಮೂರು ದಿನಗಳಿಗೊಮ್ಮೆ ಲಾರಿಗಟ್ಟಲೆ ಕಾಯಿ ತರಿಸಿ, ವಿವಿಧ ನಗರಗಳಿಗೆ ಒಯ್ದು ಮಾರುತ್ತೇವೆ. ತಳ್ಳುಗಾಡಿಗಳನ್ನು ಬಾಡಿಗೆಗೆ ಪಡೆದು ವ್ಯಾಪಾರ ಮಾಡುತ್ತೇವೆ ಎಂದು ನಗರದಲ್ಲಿ ತಾಟಿನಿಂಗು ಮಾರಾಟ ಮಾಡುತ್ತಿದ್ದ ಶೇಖರನ್ ತಿಳಿಸಿದರು.

ಇದು ಹಣ್ಣು ಹೊಟ್ಟೆ ಉರಿ, ಗ್ಯಾಸ್ ಸಮಸ್ಯೆಗೆ ಉತ್ತಮ ಮದ್ದು. ರುಚಿಕರವಾದ ಈ ಹಣ್ಣನ್ನು ನಾವು ಪ್ರತಿ ವರ್ಷ ಏಪ್ರಿಲ್ ಮತ್ತು ಮೇ ತಿಂಗಳಲ್ಲಿ ವಾರದಲ್ಲಿ ಮೂರು ಅಥವಾ ನಾಲ್ಕು ಬಾರಿ ತಿನ್ನುತ್ತೇವೆ. ಸಕ್ಕರೆ ಕಾಯಿಲೆ ಇರುವವರಿಗೂ ಉತ್ತಮ ಔಷಧಿಯಂತೆ ಇರುತ್ತದೆ ಎಂದು ವಿಜಯಪುರ ನಿವಾಸಿ ಮುನಿರಾಜು ತಿಳಿಸಿದರು.

ಬೇಸಿಗೆಯಲ್ಲಿ ರಾಸಾಯನಿಕ ಮಿಶ್ರಿತ ತಂಪು ಪಾನೀಯಗಳನ್ನು ಕುಡಿದು ಆರೋಗ್ಯ, ಹಣ, ಹಾಳು ಮಾಡಿಕೊಳ್ಳುವ ಬದಲು ತಾಳೇಹಣ್ಣು ತಿನ್ನುವುದು ಆರೋಗ್ಯಕ್ಕೆ ಒಳ್ಳೆಯದು ಎಂದು ಇಲ್ಲಿನ ನಿವಾಸಿ ಲಕ್ಷ್ಮಮ್ಮ ಹೇಳುತ್ತಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !