ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತೆರಿಗೆ ವಂಚಿಸಿ ಸಾಗಿಸುತ್ತಿದ್ದ ಅಡಿಕೆ ವಶ

Last Updated 12 ಜೂನ್ 2019, 3:51 IST
ಅಕ್ಷರ ಗಾತ್ರ

ದೇವನಹಳ್ಳಿ: ತುಮಕೂರು ಎಪಿಎಂಸಿಯಿಂದ ತೆರಿಗೆ ವಂಚಿಸಿ ವಿಜಯಪುರಕ್ಕೆ ಸಾಗಿಸುತ್ತಿದ್ದ 40 ಕ್ವಿಂಟಲ್ ಅಡಿಕೆಯನ್ನು ಎ.ಪಿ.ಎಂ.ಸಿ ಅಧ್ಯಕ್ಷ ಕೆ.ವಿ. ಮಂಜುನಾಥ್ ವಾಹನ ಸಹಿತ ವಶಕ್ಕೆ ಪಡೆದು ತಪಾಸಣೆ ನಡೆಸಿದರು.

ನಂತರ ಮಾತನಾಡಿದ ಅವರು, ‘ಒಂದು ತಿಂಗಳಿನಿಂದ ಅನುಮಾನಾಸ್ಪದವಾಗಿ ಕೊಡಗುರ್ಕಿ ಗ್ರಾಮದ ಒಳ ರಸ್ತೆಯಿಂದ ಅವತಿ ಗ್ರಾಮದ ಮೂಲಕ ಕೊರಮಂಗಲ ವಿಜಯಪುರದ ಕಡೆಗೆ ಸರಕು ಸಾಗಾಣಿಕೆ ವಾಹನ ಸಂಚರಿಸುತ್ತಿರುವುದು ಗಮನಕ್ಕೆ ಬಂತು. ಇಂದು ವಾಯು ವಿಹಾರಕ್ಕೆ ಬಂದಾಗ ಎರಡು ಕ್ಯಾಂಟರ್ ವಾಹನವನ್ನು ನಿಲ್ಲಿಸಿ ಮಾಹಿತಿ ಪಡೆಯಲಾಯಿತು. ‘ತುಮಕೂರು ಎಪಿಎಂಸಿಯಿಂದ ಕೊಬ್ಬರಿ, ಬೇಳೆಕಾಳು ಇದೆ. ಬೇರೇನೂ ಇಲ್ಲ’ ಎಂದು ವಾಹನ ಮಾಲೀಕ ತಿಳಿಸಿದರು. ದಾಖಲಾತಿ ಮತ್ತು ಸರಕು ಸಾಗಿಸುತ್ತಿದ್ದ ವಾಹನದ ಸಂಖ್ಯೆ ಬೇರೆ ಬೇರೆ ಇದ್ದುದ್ದು ಇನ್ನಷ್ಟು ಅನುಮಾನಕ್ಕೆ ಕಾರಣವಾಯಿತು’ ಎಂದು ಹೇಳಿದರು.

‘ಎರಡು ಸರಕು ಸಾಗಾಣಿಕೆ ವಾಹನಗಳನ್ನು ತಪಾಸಣೆ ನಡೆಸಿದಾಗ 120 ಚೀಲ ಅಡಿಕೆ ಚೂರು ತುಂಬಿರುವುದು ಪತ್ತೆಯಾಗಿದೆ. ಒಟ್ಟು 85 ಕ್ವಿಂಟಲ್ ಪೈಕಿ 45 ಕ್ವಿಂಟಲ್‌ಗೆ ಮಾತ್ರ ತುಮಕೂರು ಎಪಿಎಂಸಿಯಲ್ಲಿ ಶೇ 1.5 ರಷ್ಟು ತೆರಿಗೆ ಪಾವತಿಸಲಾಗಿದೆ. ಉಳಿದ ಸರಕಿಗೆ ಇಲ್ಲ’ ಎಂದು ದೂರಿದರು.

‘ಬೆಳಿಗ್ಗೆ 6 ರಿಂದ 9.30ರವರೆಗೆ ಇಲ್ಲೇ ಇದ್ದೇವೆ. ತೆರಿಗೆ ಜಾಗೃತ ದಳಕ್ಕೆ ಕರೆ ಮಾಡಿದರೂ ಈವರೆಗೆ ಬಂದಿಲ್ಲ. ತೆರಿಗೆ ವಂಚಿತರನ್ನು ನಾವೇ ಹಿಡಿದುಕೊಟ್ಟರೂ ಜವಾಬ್ದಾರಿಯುತ ಇಲಾಖೆಗೆ ಅಸಕ್ತಿ ಇಲ್ಲದಿದ್ದರೆ ಹೇಗೆ. ಈ ಪ್ರಕರಣದಲ್ಲಿ ಎಪಿಎಂಸಿ ಅಧಿಕಾರಿಗಳು ಮತ್ತು ತೆರಿಗೆ ಅಧಿಕಾರಿಗಳ ಕೈವಾಡವಿರುವ ಶಂಕೆ ಇದೆ. ಈ ಬಗ್ಗೆ ಸಮಗ್ರ ತನಿಖೆಯಾಗಬೇಕು’ ಎಂದು ಒತ್ತಾಯಿಸಿದರು.

ದೇವನಹಳ್ಳಿ ಎ.ಪಿ.ಎಂ.ಸಿ. ಮೇಲ್ವಚಾರಕ ಯೋಗಾನಂದಸ್ವಾಮಿ ಮಾತನಾಡಿ, ‘ದಾಖಲಾತಿ ಪರಿಶೀಲಿಸಲಾಗಿ ತೆರಿಗೆ ವಂಚಿಸಿರುವುದು ಸ್ಪಷ್ಟವಾಗಿದೆ. ₹ 15 ಸಾವಿರ ತೆರಿಗೆ ಉಳಿಸಲು ಹೋಗಿ ₹ 60 ಸಾವಿರ ದಂಡ ಪಾವತಿಸಲೇಬೇಕಾಗಿದೆ. ಇಲ್ಲದಿದ್ದಲ್ಲಿ 40 ಕ್ವಿಂಟಲ್ ಅಡಿಕೆ ಮುಟ್ಟುಗೋಲು ಹಾಕಿಕೊಳ್ಳಲಾಗುವುದು’ ಎಂದು ಹೇಳಿದರು.

ಸರಕು ಸಾಗಾಣಿಕೆ ವಾಹನ ಮಾಲೀಕ ವಿಜಯಪುರದ ಸತೀಶ್ ₹ 60 ಸಾವಿರ ಪಾವತಿಸಿದ ನಂತರ ವಾಹನಗಳನ್ನು ಬಿಟ್ಟು ಕಳುಹಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT