ಗುರುವಾರ , ಜನವರಿ 20, 2022
15 °C

ದೊಡ್ಡಬಳ್ಳಾಪುರ: ಭಾರಿ ಮಳೆಯಿಂದಾಗಿ ಕುಸಿದ ದೇಗುಲ, ಮನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ದೊಡ್ಡಬಳ್ಳಾಪುರ: ತಾಲ್ಲೂಕಿನಾದ್ಯಂತ ಕಳೆದ ನಾಲ್ಕೈದು ದಿನಗಳಿಂದ ಧಾರಾಕಾರವಾಗಿ ಮಳೆ ಸುರಿಯುತ್ತಿದ್ದು,ಕೆರೆಗಳು ತಂಬಿದ ಸಂತಸ ಒಂದೆಡೆಯಾದರೆ, ಬೆಳೆ ಹಾಗೂ ಇತರೆ ವಹಿವಾಟುಗಳಿಗೆ ಮಳೆಯಿಂದ ಹಾನಿ ಆಗಿದ್ದು, ಜನರು ಪರಿತಪಿಸುವಂತಾಗಿದೆ.

ಈ ಬಾರಿ ಮುಂಗಾರು ಮತ್ತು ಹಿಂಗಾರು ಎರಡೂ ಋತುಗಳು ರೈತರ ಪಾಲಿಗೆ ಶಾಪವಾಗಿ ಪರಿಣಮಿಸಿದ್ದು, ಕೈಗೆ ಬಂದ ತುತ್ತು ಬಾಯಿಗೆ ಬರದಂತಾಗಿದೆ.

ತುಂಬಿ ಹರಿದ ಕೆರೆಗಳು: ಎರಡು ದಶಕಗಳ ನಂತರ ಇದೇ ಪ್ರಥಮ ಬಾರಿಗೆ ತಾಲ್ಲೂಕಿನ ಹೆಚ್ಚಿನ ಸಂಖ್ಯೆ ಕೆರೆಗಳು ಕೋಡಿಬಿದ್ದಿವೆ. ನಗರದ ಇತಿಹಾಸ ಪ್ರಸಿದ್ಧ ನಾಗರಕೆರೆ 23 ವರ್ಷಗಳ ನಂತರ ಕೋಡಿ ಹರಿದ್ದು, ನಗರವಾಸಿಗಳ ಸಂಭ್ರಮಕ್ಕೆ ಕಾರಣವಾಗಿದೆ.

ಗುರುವಾರ ಬೆಳಗಿನಿಂದಲು ಸುರಿದ ಮಳೆಯಿಂದಾಗಿ ಶುಕ್ರವಾರ ಬೆಳಿಗ್ಗೆಯಿಂದ ಕರೆ ಕೋಡಿ ಹರಿಯಲು ಆರಂಭಿಸಿದೆ. ಈ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿ, ಕೆರೆ ಕೋಡಿ ನೋಡಲು, ಸೆಲ್ಫಿ ತೆಗೆದುಕೊಳ್ಳಲು ಜನಜಂಗುಳಿಯಾಗಿತ್ತು.

ತಾಲ್ಲೂಕಿನ ಕೋಡಿಹಳ್ಳಿ, ಕೊನಘಟ್ಟ, ಮೆಳೇಕೋಟೆ, ವಾಣಿಗರಹಳ್ಳಿ, ಕಂಚಿಗನಾಳ, ಮುತ್ತೂರು, ಹೊಸಹಳ್ಳಿ, ಸಾಸಲು ಚಿನ್ನಮ್ಮನ ಕೆರೆಗಳು ಹಲವು ವರ್ಷಗಳ ನಂತರ ತುಂಬಿ,ಕೋಡಿ ಹರಿಯುತ್ತಿವೆ. ಸಾಸಲು ಚಿನ್ನಮ್ಮ ಕೆರೆಯನ್ನು ಎರಡು ವರ್ಷಗಳ ಹಿಂದೆ ಅಂದಿನ ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿ ಸಿ.ಎಸ್‌.ಕರೀಗೌಡ ಅವರು ಕರ್ಣಾಟಕ ಬ್ಯಾಂಕಿನ ನೆರವಿನೊಂದಿಗೆ ಕೆರೆಯನ್ನು ಅಭಿವೃದ್ಧಿ ಪಡೆಸಿದ್ದರು.

ತಾಲ್ಲೂಕಿನಲ್ಲಿ ತುಂಬಿ ಹರಿಯುತ್ತಿರುವ ಕೆರೆಗಳ ನೋಡಲು ಜನತೆ ತಂಡೋಪ ತಂಡವಾಗಿ ಕೆರೆಗಳ ಬಳಿ ತೆರಳುತ್ತಿದ್ದು,ಕೆಲವರು ಹರಿಯುತ್ತಿರುವ ನೀರಿನಲ್ಲಿ ಇಳಿದು ಸಂಭ್ರಮಿಸುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು.

ಸಂಪರ್ಕ ಕಡಿತ: ಮಳೆಯ ಕಾರಣ ಕೆರೆಗಳು ತುಂಬಿ ಹರಿಯುತ್ತಿದ್ದು, ತಾಲ್ಲೂಕಿನ ಸಾಸಲು ಸಮೀಪದ ತಮ್ಮಗಾನಹಳ್ಳಿ ಗ್ರಾಮಕ್ಕೆ ಸಂಪರ್ಕ ರಸ್ತೆ ನೀರಿನಿಂದ ಆವೃತವಾಗಿದ್ದು, ಗ್ರಾಮಕ್ಕೆ ಸಂಪರ್ಕ ಕಡಿತಗೊಂಡಿದೆ.

ಶಾಲೆಗಳಿಗೆ ರಜೆ: ಸತತವಾಗಿ ಸುರಿಯುತ್ತಿರುವ ಮಳೆಯ ಕಾರಣ ಶಾಲೆಗಳಿಗೆ ಜಿಲ್ಲಾಧಿಕಾರಿಗಳ ಆದೇಶದಂತೆ ಶಿಕ್ಷಣ ಇಲಾಖೆ ಎರಡು ದಿನ ರಜೆ ಘೋಷಿಸಿದೆ. ಇದರನ್ವಯ ಶುಕ್ರವಾರದಿಂದ ಸೋಮವಾರದವರೆಗೆ ಒಟ್ಟು ನಾಲ್ಕು ದಿನಗಳು ಮಕ್ಕಳಿಗೆ ರಜೆ ಸಿಗಲಿದೆ.

ಕುಸಿದ ಮನೆಗಳು, ದೇಗುಲ: ಕೆಲ ದಿನಗಳಿಂದ ಸುರಿಯುತ್ತಿರುವ ಮಳೆಗೆ ತಾಲ್ಲೂಕಿನ ತಿಪ್ಪೂರು ಗ್ರಾಮದ ವೆಂಕಟೇಶ್‌ಗೌಡ ಎಂಬುವವರಿಗೆ ಸೇರಿದ ಮನೆ ಕುಸಿದ್ದು, ಅದೃಷ್ಟವಶಾತ್ ಕೂದಲೆಳೆ ಅಂತರದಲ್ಲಿ ಅದರಲ್ಲಿದ್ದ ಕುಟುಂಬ ಅಪಾಯದಿಂದ ಪಾರಾಗಿದೆ. ಗುರುವಾರ ರಾತ್ರಿ ಕಳೆದ ಹಲವು ದಿನಗಳಿಂದ ಸುರಿದ ಮಳೆಯಿಂದ ಗೋಡೆಗಳು, ಮೇಲ್ಛಾವಣಿ ಕುಸಿದು ಬಿದ್ದಿದೆ.

ಏಳು ಮಂದಿಯ ಕುಟುಂಬ ಇದೇ ಮನೆಯಲ್ಲಿ ರಾತ್ರಿ ಮಲಗಿದ್ದರು ಎನ್ನಲಾಗಿದ್ದು, ಮುಂಭಾದ ಗೋಡೆ ಕುಸಿದ ಶಬ್ದಕ್ಕೆ ಮನೆಯಿಂದ ಹೊರಗೋಡಿಬಂದು ಪ್ರಾಣ ಅಪಾಯದಿಂದ ಪಾರಾಗಿದ್ದಾರೆ. ಮಳೆಗೆ ಶಾಂತಿನಗರದಲ್ಲಿಮಹೇಶ್ ಎಂಬುವವರ ಮನೆ ಗೋಡೆ ಕುಸಿದಿದೆ.

ನಗರದ ನಾಗರಕೆರೆ ಎರಡು ದಶಕಗಳ ನಂತರ ಕೋಡಿ ಬಿದ್ದಿರುವುದರಿಂದ ಕೋಡಿ ಕಾಲುವೆ ಅಕ್ಕಮಪಕ್ಕದ ಮನೆ,ಬಡಾವಣೆಗಳಿಗೆ ನೀರು ನುಗ್ಗದೆ ಸರಾಗವಾಗಿ ಹರಿದು ಹೋಗಲು ಅನುಕೂಲವಾಗುವಂತೆ ನಗರಸಭೆ ವತಿಯಿಂದ ಶುಕ್ರವಾರ ಕಾಲುವೆಗಳನ್ನು ಜೆಸಿಬಿ ಯಂತ್ರಗಳ ಮೂಲಕ ಸ್ವಚ್ಛಮಾಡಲಾಯಿತು.

ತಾಲ್ಲೂಕಿನ ಸಾಸಲು ಹೋಬಳಿಯ ಬಂಡಮ್ಮನಹಳ್ಳಿ ಗ್ರಾಮದಲ್ಲಿನ ಮುಜರಾಯಿ ಇಲಾಖೆಗೆ ಸೇರಿರುವ ಐತಿಹಾಕ ಬಂಡಿ ಮಹಾಕಾಳಿ ದೇವಿ ದೇವಾಲಯದ ಗೋಡೆ ಕುಸಿದೆ. ಈ ಭಾಗದ ಜನರ ಧಾರ್ಮಿಕ ನಂಬಿಕೆಯ ದೇವಿಯ ದೇವಾಲಯ ಕುಸಿತವಾಗಿರುವುದು ಜನರಲ್ಲಿ ಆತಂಖವನ್ನು ಮೂಡಿಸಿದೆ.

ಮಳೆಯಿಂದಾಗಿ ಮನೆಗಳನ್ನು ಕೆದುಕೊಂಡಿರುವ ಕುಟುಂಬಗಳ ನೆರವಿಗೆ ತಾಲ್ಲೂಕು ಆಡಳಿತ ತುರ್ತಾಗಿ ಸ್ಪಧಿಸಬೇಕು ಎಂದು ಕರ್ನಾಟಕ ರಾಜ್ಯ ರೈತ ಸಂಘದ ಜಿಲ್ಲಾ ಮುಖಂಡ ಮುತ್ತೇಗೌಡ ಆಗ್ರಹಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು