ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾಲದ ಕೂಪಕ್ಕೆ ತಳ್ಳಿರುವುದೇ ಬಿಜೆಪಿ ಸಾಧನೆ: ಶಾಸಕ ಟಿ. ವೆಂಕಟರಮಣಯ್ಯ

ಕೇಂದ್ರ ಸರ್ಕಾರದ ವಿರುದ್ಧ ಶಾಸಕ ಟಿ. ವೆಂಕಟರಮಣಯ್ಯ ಆರೋಪ
Last Updated 2 ಆಗಸ್ಟ್ 2021, 3:00 IST
ಅಕ್ಷರ ಗಾತ್ರ

ದೊಡ್ಡಬಳ್ಳಾಪುರ: ‘ಪ್ರಧಾನಿ ನರೇಂದ್ರ ಮೋದಿ ಸರ್ಕಾರ ದೇಶವನ್ನು ಸಾಲದ ಕೂಪಕ್ಕೆ ತಳ್ಳುತ್ತಿದೆಯೇ ವಿನಾ ದೇಶದಲ್ಲಿ ಯಾವುದೇ ಪ್ರಗತಿ ಇಲ್ಲದಾಗಿದೆ’ ಎಂದು ಶಾಸಕ ಟಿ. ವೆಂಕಟರಮಣಯ್ಯ ಹೇಳಿದರು.

ಸವಿತಾ ಸಮಾಜದ ನಾದಸ್ವರ, ಡೋಲು ಕಲಾವಿದರು ಹಾಗೂ ಕ್ಷೌರಿಕರಿಗೆ ನಗರದ ಸವಿತಾ ಸಮಾಜ ಭವನದಲ್ಲಿ ಭಾನುವಾರ ದಿನಸಿ ಕಿಟ್ ವಿತರಿಸಿ ಮಾತನಾಡಿದರು.

ಸ್ವಾತಂತ್ರ್ಯ ನಂತರ ದೇಶದಲ್ಲಿ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಸರ್ಕಾರ 70 ವರ್ಷಗಳ ಕಾಲ ಮನೆಯ ಮಗುವನ್ನು ಕಾಪಾಡಿದಂತೆ ದೇಶದಲ್ಲಿ ಆಳ್ವಿಕೆ ನಡೆಸಿದೆ. ಶಿಕ್ಷಣ, ನೀರಾವರಿ, ಕೈಗಾರಿಕೆ ಸ್ಥಾಪನೆ ಮಾಡಿ‌ ಉದ್ಯೋಗ ಸೃಷ್ಟಿ ಮಾಡಿತ್ತು. ಅವುಗಳೆಲ್ಲವು ಈಗ ಅವನತಿಯಾಗುತ್ತಿವೆ ಎಂದರು.

ತಾಲ್ಲೂಕಿಗೆ ಜಿಲ್ಲಾ ಆಸ್ಪತ್ರೆ ತರಲು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಕಾರಣವಾಗಿತ್ತು. ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ 100 ಹಾಸಿಗೆಗಳ ಆಸ್ಪತ್ರೆಯಾಗಿ ಅನುಮೋದನೆ ದೊರಕಿತು. ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಯಡಿಯೂರಪ್ಪ ಅವರನ್ನು ನಾಲ್ಕು ಬಾರಿ ಭೇಟಿ ಮಾಡಿ ಮನವಿ‌ ಮಾಡಿದರೂ ಹಣ ಮಂಜೂರು ಮಾಡಿಲ್ಲ ಎಂದು ಟೀಕಿಸಿದರು.

ಕೊರೊನಾ 3ನೇ ಅಲೆಯ ಮಕ್ಕಳಿಗೆ ಬರುವ ಆತಂಕ ಎದುರಾಗಿದೆ. ನಮ್ಮ ತಾಲ್ಲೂಕಿನಲ್ಲಿ ಮೆಡಿಕಲ್ ಕಾಲೇಜು ಇಲ್ಲದ ಕಾರಣದಿಂದಾಗಿ ಮೇಕ್ ಶಿಫ್ಟ್ ಆಸ್ಪತ್ರೆ ನಿರ್ಮಾಣವಾಗಿದೆ. ಇದೂ ಸಹ ಕೇಂದ್ರ ರಾಜ್ಯ ಸರ್ಕಾರದ ಅನುದಾನವಲ್ಲ. ಕೈಗಾರಿಕೆಗಳು ಜನಪರ ಕಾರ್ಯಕ್ಕೆ ನೀಡಿರುವ ಹಣದಲ್ಲಿ ನಿರ್ಮಿಸಲಾಗಿದೆ ಎಂದರು.

ವಿಧಾನ ಪರಿಷತ್ ಮಾಜಿ ಸದಸ್ಯ ಎಂ.ಸಿ. ವೇಣುಗೋಪಾಲ್ ಮಾತನಾಡಿ, ಸವಿತ ಸಮಾಜ ಸಮುದಾಯದ ಬಗ್ಗೆ ಕ್ಷೇತ್ರದ ಶಾಸಕರು ಕಾಳಜಿ ವಹಿಸುವ ಮೂಲಕ ದಿನಸಿ ಕಿಟ್‌ಗಳನ್ನು ವಿತರಿಸಿರುವುದು ಅಭಿನಂದನೀಯ ಎಂದರು.

ಸಮಾರಂಭದಲ್ಲಿ ಕಾಂಗ್ರೆಸ್‌ ನಗರ ಬ್ಲಾಕ್ ಅಧ್ಯಕ್ಷ ಕೆ.ಪಿ. ಜಗನ್ನಾಥ್, ಮುಖಂಡರಾದ ಬಿ.ಜಿ. ಹೇಮಂತರಾಜು, ತಿ. ರಂಗರಾಜು, ಬಿ.ಎಚ್‌. ಕೆಂಪಣ್ಣ, ಸೋಮರುದ್ರಶರ್ಮ, ರೇವತಿ ಅನಂತರಾಮ್, ಮಜರಾಹೊಸಹಳ್ಳಿ ಗ್ರಾಮ ಪಂ‌ಚಾಯಿತಿ ಅಧ್ಯಕ್ಷ ಸಂದೇಶ್, ಸವಿತಾ ಸಮಾಜದ ತಾಲ್ಲೂಕು ಅಧ್ಯಕ್ಷ ಸತ್ಯನಾರಾಯಣ, ಪ್ರಧಾನ ಕಾರ್ಯದರ್ಶಿ ನರಸಿಂಹಮೂರ್ತಿ, ಮುಖಂಡ ರಾಮಾಂಜಿನಯ್ಯ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT