ವಿಜಯಪುರ(ದೇವನಹಳ್ಳಿ): ಪ್ಲಾಸ್ಟರ್ ಆಫ್ ಪ್ಯಾರೀಸ್(ಪಿಒಪಿ) ಗಣಪತಿ ಮೂರ್ತಿ ತಯಾರಿ ಮತ್ತು ಮಾರಾಟಕ್ಕೆ ಸರ್ಕಾರ ನಿಷೇಧಿಸಿರುವ ಹಿನ್ನೆಲೆ ಪರಿಸರ ಸ್ನೇಹಿ ಮಣ್ಣಿನ ಗಣಪನ ಮೂರ್ತಿಗಳಿಗೆ ವರ್ಷದಿಂದ ವರ್ಷಕ್ಕೆ ಬೇಡಿಕೆ ಹೆಚ್ಚಾಗುತ್ತಿದೆ.
ಗಣೇಶೋತ್ಸವಕ್ಕೆ ವಾರ ಬಾಕಿ ಇದ್ದು, ಮೂರ್ತಿ ಖರೀದಿಗೆ ಜನ ಮುಗಿಬೀಳುತ್ತಿದ್ದಾರೆ. ರಾಮಲಲ್ಲಾ ಗಣೇಶ ಮೂರ್ತಿಗೆ ಈ ಬಾರಿ ಹೆಚ್ಚಿನ ಬೇಡಿಕೆ ಇದ್ದು, ಹಲವರು ಮುಂಗಡ ಹಣ ಕೊಟ್ಟು ಮೂರ್ತಿಗಳನ್ನು ತಯಾರು ಮಾಡಿಸಿದ್ದಾರೆ.
ಆನೆ, ನವಿಲು, ಗರುಡ, ಇಲಿ, ಹಸುವಿನ ಮೇಲೆ ಗಣೇಶ ಮೂರ್ತಿ ಕುಳಿತಿರುವ ಮೂರ್ತಿಗಳು ಆಕರ್ಷಿಸುತ್ತಿವೆ.
ಪ್ರತಿ ವರ್ಷ ಎರಡು ಟಿಪ್ಪರ್ ಲೋಡಿನಷ್ಟು ಜೇಡಿ ಮಣ್ಣು ತರಿಸಿಕೊಂಡು ಮೂರ್ತಿಗಳು ತಯಾರಿಸುತ್ತಿದ್ದ ಕಲಾವಿದರು ಈ ಬಾರಿ ಆರು ಲೋಡುಗಳಷ್ಟು ಮಣ್ಣು ತಂದು ತಯಾರಿಸುತ್ತಿದ್ದೇವೆ. ಕಳೆದ ವರ್ಷದಲ್ಲಿ 400 ಮೂರ್ತಿ ತಯಾರಿಸಿದ್ದವು. ಈ ಬಾರಿ ಸಾವಿರಕ್ಕೂ ಅಧಿಕ ಮೂರ್ತಿ ತಯಾರಿಸಿದ್ದೇವೆ. ₹100ರಿಂದ ಹಿಡಿದು ₹15 ಸಾವಿರ ವರೆಗೆ ಮೂರ್ತಿಗಳಿವೆ ಎಂದು ಮೂರ್ತಿ ತಯಾರಕರು ತಿಳಿಸಿದ್ದಾರೆ.
ಪ್ರತಿ ವರ್ಷ ನವೆಂಬರ್ ತಿಂಗಳಿನಲ್ಲಿ ದಸರಾ ಪೂಜೆ ಸಲ್ಲಿಸಿದ ನಂತರ ಮೂರ್ತಿ ತಯಾರಿಕೆ ಆರಂಭಿಸಿ ಮಾಡಿ ಸೆಪ್ಟೆಂಬರ್ ವರೆಗೂ ತಯಾರಿಕೆ ಕಾರ್ಯ ನಡೆಯುತ್ತದೆ. ಒಂದು ತಿಂಗಳು ಮಾತ್ರವೇ ನಮಗೆ ಬಿಡುವು ಇರುತ್ತದೆ ಎನ್ನುತ್ತಾರೆ ಕಲಾವಿದ ಆರ್. ಗಗನ್.
ಪದವಿ ಮುಗಿಸಿ ಗಣಪತಿ ಮೂರ್ತಿ ತಯಾರಿಕೆಯಲ್ಲೇ ಜೀವನ ಕಟ್ಟಿಕೊಂಡಿದ್ದೇವೆ. ಈ ಕ್ಷೇತ್ರ ಮತ್ತಷ್ಟು ಕಲಾವಿದರು ಅಗತ್ಯವಿದ್ದಾರೆ. ಸರ್ಕಾರ ಆಸಕ್ತ ಕಲಾವಿದರಿಗೆ ತರಬೇತಿ ನೀಡಬೇಕು.ಆರ್.ವರುಣ್ ಕಲಾವಿದ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.