ಸೋಮವಾರ, ಮೇ 23, 2022
28 °C
100 ಕೆರೆಗಳ ಜೀರ್ಣೋ‌ದ್ಧಾರ

ಗ್ರಾಮ ಸ್ವರಾಜ್ಯ ಕನಸು ಸಾಕಾರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ವಿಜಯಪುರ: ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯು ಎಲ್ಲಾ ಕ್ಷೇತ್ರಗಳಲ್ಲೂ ತನ್ನ ಛಾಪು ಮೂಡಿಸುತ್ತಿದೆ. ಯೋಜನೆಯನ್ನು ಸದುಪಯೋಗ ಮಾಡಿಕೊಳ್ಳುವ ಮೂಲಕ ಉತ್ತಮ ನಾಗರಿಕರಾಗಬೇಕು. ಜೊತೆಗೆ ಆರ್ಥಿಕವಾಗಿ ಸಬಲರಾಗುವ ಕಡೆಗೆ ಗಮನ ಕೇಂದ್ರೀಕರಿಸಬೇಕು ಎಂದು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಜಿಲ್ಲಾ ನಿರ್ದೇಶಕ ಸತೀಶ್ ನಾಯಕ್ ಹೇಳಿದರು.

ಚನ್ನರಾಯಪಟ್ಟಣ ಹೋಬಳಿಯ ದೊಡ್ಡಕುರುಬರಹಳ್ಳಿಯ ಆಂಜನೇಯಸ್ವಾಮಿ ದೇವಾಲಯದ ಆವರಣದಲ್ಲಿ ಮಂಗಳವಾರ ಆಯೋಜಿಸಿದ್ದ ಸಾಮೂಹಿಕ ಸತ್ಯನಾರಾಯಣಸ್ವಾಮಿ ಪೂಜಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ದಾಸಶ್ರೇಷ್ಠರು, ಸಾಹಿತಿಗಳು ಸೇರಿದಂತೆ ದೇಶಕ್ಕಾಗಿ ಹೋರಾಡಿದ ಮಹನೀಯರ ಕನಸು ಗ್ರಾಮ ಸ್ವರಾಜ್ಯವಾಗಿತ್ತು. ಧರ್ಮ ರಕ್ಷಣೆ, ದೇವಾಲಯಗಳ ಜೀರ್ಣೋದ್ಧಾರಕ್ಕಾಗಿ ಧನಸಹಾಯ, ಶಿಕ್ಷಣ, ತಾಂತ್ರಿಕ ಮತ್ತು ವೃತ್ತಿಪರ ಶಿಕ್ಷಣಕ್ಕೆ ಆದ್ಯತೆ, ಆರೋಗ್ಯ ಸುಧಾರಣೆ, ಆಸ್ಪತ್ರೆಗಳ ನಿರ್ಮಾಣ, ಮೆಡಿಕಲ್ ಕಾಲೇಜುಗಳ ಸ್ಥಾಪನೆ, ನ್ಯಾಚುರೋಪತಿ ಆಸ್ಪತ್ರೆ, ಅಂತರ್ಜಲಮಟ್ಟದ ವೃದ್ಧಿಗಾಗಿ ಕೆರೆಗಳ ಅಭಿವೃದ್ಧಿ, ಶುದ್ಧ ಕುಡಿಯುವ ನೀರಿನ ಘಟಕಗಳ ಸ್ಥಾಪನೆಗೆ ಒತ್ತು ನೀಡಲಾಗಿದೆ ಎಂದರು.‌

100 ಕೆರೆಗಳ ಜೀರ್ಣೋದ್ಧಾರ ಮಾಡಲಾಗಿದೆ. ಕೆರೆ ಸಂಜೀವಿನಿ ಯೋಜನೆಯಡಿ 200 ಕೆರೆಗಳ ಅಭಿವೃದ್ಧಿ ನಡೆಯುತ್ತಿದೆ. 10 ಸಾವಿರ ಮಂದಿಗೆ ಮಾಸಾಶನ ವಿತರಣೆ ಮಾಡಲಾಗಿದೆ. ವಾತ್ಸಲ್ಯ ಕಿಟ್ ಯೋಜನೆಯಡಿ 7,000 ಮಂದಿಗೆ ಸೌಲಭ್ಯ ಕಲ್ಪಿಸಲಾಗಿದೆ. ಸುಜ್ಞಾನನಿಧಿ ಯೋಜನೆಯಡಿ ಶಿಷ್ಯ ವೇತನ, ‌ಗೋಶಾಲೆ ಮತ್ತು ಡೇರಿಗಳ ಅಭಿವೃದ್ಧಿಗಾಗಿ ಹಣಕಾಸಿನ ಸಹಾಯ ನೀಡಲಾಗುತ್ತಿದೆ ಎಂದು ವಿವರಿಸಿದರು.

ಐಬಸಾಪುರ ಗ್ರಾಮ ಪಂಚಾಯಿತಿ ಅಧ್ಯಕ್ಷ ಜಿ.ವಿ. ರಾಮೇಗೌಡ ಮಾತನಾಡಿ, ರೈತರು ಈ ದೇಶದ ಬೆನ್ನೆಲುಬು. ಅವರನ್ನು ಸದೃಢರನ್ನಾಗಿ ಮಾಡುವ ಉದ್ದೇಶದಿಂದ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯು ಸಾಕಷ್ಟು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ಮಹಿಳೆಯರ ಆರ್ಥಿಕ ಸ್ವಾವಲಂಬನೆಯ ಜೊತೆಗೆ ಮಕ್ಕಳ ಶೈಕ್ಷಣಿಕ ಬೆಳವಣಿಗೆಗಾಗಿ ಕೈಗೆತ್ತಿಕೊಂಡಿರುವ ಕಾರ್ಯಕ್ರಮಗಳು ಉತ್ತಮವಾಗಿವೆ. ಎಲ್ಲರೂ ಸದುಪಯೋಗಪಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ತಾಲ್ಲೂಕು ಘಟಕದ ಯೋಜನಾಧಿಕಾರಿ ಅಕ್ಷತಾ ರೈ ಮಾತನಾಡಿ, ಸಂಘದ ಸದಸ್ಯರು ಸಂಸ್ಕೃತಿ, ಸಂಸ್ಕಾರ, ಅಧ್ಯಾತ್ಮದೊಂದಿಗೆ ಚಿಂತನಗೋಷ್ಠಿ, ಭಜನಾ ಕಾರ್ಯಕ್ರಮಗಳಲ್ಲಿ ತೊಡಗಿಕೊಳ್ಳಬೇಕು ಎಂದರು.‌

ಪ್ರಗತಿ ಬಂಧು ಸ್ವಸಹಾಯ ಸಂಘದ ಒಕ್ಕೂಟದ ಅಧ್ಯಕ್ಷೆ ರಾಧಿಕಾ ಮಾತನಾಡಿ, ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಸ್ವಸಹಾಯ ಸಂಘಗಳ ಕಾರ್ಯ ಚಟುವಟಿಕೆಗಳಿಂದಾಗಿ ನಾಲ್ಕು ಗೋಡೆಗಳ ಮಧ್ಯೆ ಇರುತ್ತಿದ್ದ ಮಹಿಳೆ ಇಂದು ನಾಲ್ಕು ಜನರ ಮಧ್ಯೆ ಸೇರಿ, ತನ್ನ ಪ್ರತಿಭೆ ತೋರಿಸುವಂತಾಗಿರುವುದು ಶ್ಲಾಘನೀಯ ಎಂದು
ತಿಳಿಸಿದರು.

ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ವಿಶೇಷ ಆರೋಗ್ಯ ರಕ್ಷಾವಿಮೆ ಜಾರಿಗೆ ತರಲಾಗಿದ್ದು, ಅವುಗಳ ಮಾಹಿತಿ ಪತ್ರವನ್ನು ಬಿಡುಗಡೆಗೊಳಿಸಲಾಯಿತು. ಒಕ್ಕೂಟದ ಉಪಾಧ್ಯಕ್ಷ ಮಂಜುನಾಥ್, ಮುಖಂಡರಾದ ಹನುಮೇಗೌಡ, ಪತ್ರಕರ್ತ ದೇವರಾಜ್, ಕೆಂಪೇಗೌಡ, ಡೇರಿ ನಿರ್ದೇಶಕ ರಮೇಶ್ ಹಾಗೂ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆಯ ಪದಾಧಿಕಾರಿಗಳು ಇದ್ದರು. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು