ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೌರ್ಜನ್ಯ ತಡೆಯಲು ಮೊದಲ ಆದ್ಯತೆ

ಜಿಲ್ಲಾ ಜಾಗೃತಿ, ಉಸ್ತುವಾರಿ ಸಮಿತಿ ಸಭೆಯಲ್ಲಿ ಜಿಲ್ಲಾಧಿಕಾರಿ ಸೂಚನೆ
Last Updated 22 ನವೆಂಬರ್ 2020, 5:11 IST
ಅಕ್ಷರ ಗಾತ್ರ

ದೇವನಹಳ್ಳಿ: ಗ್ರಾಮಾಂತರ ಜಿಲ್ಲೆಯಲ್ಲಿ ದೌರ್ಜನ್ಯ ತಡೆಗಟ್ಟುವುದು ಮೊದಲ ಆದ್ಯತೆಯಾಗಬೇಕೆಂದು ಜಿಲ್ಲಾಧಿಕಾರಿ ಪಿ.ಎನ್.ರವೀಂದ್ರ ಅಧಿಕಾರಿಗಳಿಗೆ ಸೂಚಿಸಿದರು.

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶನಿವಾರ 2020ನೇ ಸಾಲಿನ ಎರಡನೇ ತ್ರೈಮಾಸಿಕ ಜಿಲ್ಲಾ ಜಾಗೃತಿ ಮತ್ತು ಉಸ್ತುವಾರಿ ಸಮಿತಿ ಸಭೆಯಲ್ಲಿ ಮಾತನಾಡಿದರು. ಕೋವಿಡ್ 19ರ ನಂತರ ಸೋಂಕು ಪರಿಣಾಮದಿಂದಾಗಿ ತ್ರೈಮಾಸಿಕ ಸಭೆ ವಿಳಂಬವಾಗಿದೆ. ಅದರೂ, ತಾಲ್ಲೂಕು ಮಟ್ಟದಲ್ಲಿ ಪರಿಶಿಷ್ಟ ಸಮುದಾಯದ ಕುಂದು–ಕೊರತೆ ಸಭೆ ನಡೆಸುತ್ತಿರುವುದರಿಂದ ದೌರ್ಜನ್ಯಕ್ಕೆ ಒಳಗಾಗಿರವವರಿಗೆ ಜಿಲ್ಲಾಡಳಿತ ತ್ವರಿತವಾಗಿ ಪರಿಹಾರ ನೀಡಲು ಸಾಧ‍್ಯವಾಗುತ್ತಿದೆ ಎಂದು ಹೇಳಿದರು.

ಜಿಲ್ಲಾ ಸಮಾಜ ಕಲ್ಯಾಣ ಇಲಾಖೆ ನಿರ್ದೇಶಕ ಹನುಮಂತರಾಯಪ್ಪ ಮಾಹಿತಿ ನೀಡಿ, ಪ್ರಸ್ತುತ ಜಿಲ್ಲೆಯಲ್ಲಿ 44 ದೌರ್ಜನ್ಯ ಪ್ರಕರಣ ದಾಖಲಾಗಿವೆ. ಒಂದು ಪ್ರಕರಣ ಚಿಕ್ಕಬಳ್ಳಾಪುರಕ್ಕೆ ಹಸ್ತಾಂತರಿಸಲಾಗಿದೆ. ಎರಡು ಪ್ರಕರಣಕ್ಕೆ ತಾಂತ್ರಿಕ ತೊಂದರೆ ಇದೆ. 41 ಪ್ರಕರಣಗಳಿಗೆ ಪರಿಹಾರ ನೀಡಲಾಗಿದೆ. ನೆಲಮಂಗಲ ತಾಲ್ಲೂಕಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಎರಡು ಹಂತದಲ್ಲಿ ₹5.62ಲಕ್ಷ ಪರಿಹಾರ ನೀಡಲಾಗಿದೆ ಎಂದು ಹೇಳಿದರು.

ಪರಿಶಿಷ್ಟರ ಮೇಲೆ ದೌರ್ಜನ್ಯ ನಡೆದು ದೂರು ದಾಖಲಿಸಿದ ನಂತರ ಪ್ರಥಮ ವರ್ತಮಾನ ವರದಿಯಾಗಬೇಕು. ನಂತರ 60 ದಿನಗಳ ಚಾರ್ಜ್ ಶೀಟ್ ಹಾಕಬೇಕು. ನಂತರ ನ್ಯಾಯಲಯದ ತೀರ್ಪು ಪ್ರಕಟಗೊಂಡ ಮೇಲೆ ಒಟ್ಟು ಮೂರು ಹಂತದಲ್ಲಿ ಸಂತ್ರಸ್ತರಿಗೆ ಪರಿಹಾರ ಸಿಗಲಿದೆ ಎಂದು ಹೇಳಿದರು.

ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮೀ ಗಣೇಶ್ ಮಾತನಾಡಿ, ಜಿಲ್ಲೆ ವ್ಯಾಪ್ತಿಯ ಪ್ರತಿಯೊಂದು ಪೊಲೀಸ್ ಠಾಣೆ ದೌರ್ಜನ್ಯ ಪ್ರಕರಣಗಳನ್ನು ತ್ವರಿತವಾಗಿ ದೂರು ದಾಖಲಿಸಿಕೊಳ್ಳುವಂತೆ ಸೂಚಿಸಲಾಗಿದೆ ಎಂದರು.

ಜಾಗೃತಿ ಸಮಿತಿ ಸದಸ್ಯ ಈರಣ್ಣ ಮೌರ್ಯ ಮತ್ತು ಶಾಮಣ್ಣ ಮಾತನಾಡಿ, ಠಾಣೆಗೆ ಬರುವ ಪ್ರಕರಣ ತಕ್ಷಣ ಎಫ್ಐಆರ್ ದಾಖಲಾಗಬೇಕು. ಇಲ್ಲದಿದ್ದರೆ ಪ್ರಭಾವಿಗಳು ಒತ್ತಡ ತಂದು ವಿಳಂಬವಾಗುವ ಸಾಧ‍್ಯತೆ. ವಾಲ್ಮೀಕಿ ಭವನ, ಜಗಜೀವನ್ ರಾಂ ಭವನ, ಅನುದಾನವಿಲ್ಲದೆ ಕಾಮಗಾರಿ ಸ್ಥಗಿತಗೊಂಡಿದೆ ಎಂದು ಸಭೆಯ ಗಮನಕ್ಕೆ ತಂದರು.

ಪರಿಶಿಷ್ಟರ ಅದಿ ಜಾಂಬವ ನಿಗಮ ಮಂಡಳಿ ಜಿಲ್ಲಾ ಶಾಖೆ ಜಿಲ್ಲಾ ಕೇಂದ್ರಕ್ಕೆ ಹಸ್ತಾಂತರಗೊಂಡಿಲ್ಲ. ಪೋಡಿ ಮುಕ್ತವಾಗಬೇಕು. ಪಿಂಚಣಿ ಮತ್ತು ಫೌತಿ ಖಾತೆ ಸಕಾಲದಲ್ಲಿ ಆಗುವಂತೆ ಕ್ರಮಕೊಳ್ಳಬೇಕು ಎಂದು ಹೇಳಿದರು.

ಜಿಲ್ಲಾಧಿಕಾರಿ ಪಿ.ಎನ್.ರವೀಂದ್ರ ಮಾತನಾಡಿ, ಬಹುಜನರ ಹಿತಾಸಕ್ತಿಯಿಂದ ಕೆಲಸ ಮಾಡಲು ತಜ್ಞರಿಂದ ತರಬೇತಿ ಕಾರ್ಯಾಗಾರ ನಡೆಸಲಾಗಿದೆ ಎಂದು ಹೇಳಿದರು.

ಹೆಚ್ಚುವರಿ ಜಿಲ್ಲಾಧಿಕಾರಿ ಜಗದೀಶ್ ಕೆ.ನಾಯ್ಕ ಮಾತನಾಡಿ, ಯಾವುದೇ ಸರ್ಕಾರಿ ಜಾಗ ಗುಂಡು ತೋಪು ಗೋಮಾಳ ಒತ್ತುವರಿಗೆ ಅವಕಾಶವಿಲ್ಲ. ಒತ್ತುವರಿಯಾಗಿದ್ದರೆ ತಾಲ್ಲೂಕು ತಹಶೀಲ್ದಾರ್ ಗಮನಕ್ಕೆ ತರಬೇಕು ಎಂದು ಹೇಳಿದರು.

ಉಪಕಾರ್ಯದರ್ಶಿ ಕರಿಯಪ್ಪ, ಜಿಲ್ಲಾ ಮತ್ತು ತಾಲ್ಲೂಕು ಮಟ್ಟದ ವಿವಿಧ ಇಲಾಖೆ ಅಧಿಕಾರಿಗಳು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT