ಆನೇಕಲ್: ತಾಲ್ಲೂಕಿನ ಸರ್ಜಾಪುರ ಪೊಲೀಸ್ ಠಾಣೆ ವ್ಯಾಪ್ತಿಯ ಬಿಕ್ಕನಹಳ್ಳಿ ಜನತಾ ಕಾಲೊನಿಯಲ್ಲಿ ಗಂಡ ಹೆಂಡತಿಯ ನಡುವೆ ನಡೆದ ಕ್ಷುಲ್ಲಕ ಜಗಳದಿಂದಾಗಿ ಪತಿ, ಪತ್ನಿಯನ್ನು ಮಚ್ಚಿನಿಂದ ಕೊಚ್ಚಿ ಕೊಲೆ ಮಾಡಿ ತಾನು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಲಕ್ಷಮ್ಮ(47) ಕೊಲೆಯಾದವರು. ವೆಂಕಟಸ್ವಾಮಿ(53) ಆತ್ಮಹತ್ಯೆ ಮಾಡಿಕೊಂಡವರು.
ಪತಿ–ಪತ್ನಿ ಇಬ್ಬರು ಕೂಲಿ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದರು. ತಮ್ಮ ಇಬ್ಬರು ಹೆಣ್ಣು ಮಕ್ಕಳಿಗೆ ಮದುವೆ ಮಾಡಿದ್ದರು. ಹೆಣ್ಣು ಮಕ್ಕಳ ಮದುವೆಗಾಗಿ ದಂಪತಿ ಬ್ಯಾಂಕ್‌ನಿಂದ ಸಾಲ ಪಡೆದಿದ್ದರು. ಸಾಲ ತೀರಿಸಲಾಗದಿದ್ದರಿಂದ ಬ್ಯಾಂಕ್‌ನವರು ಐದು ತಿಂಗಳ ಹಿಂದೆ ಮನೆ ಜಪ್ತಿ ಮಾಡಿದ್ದರು.
ಬಾಡಿಗೆ ಮನೆಯಲ್ಲಿ ವಾಸವಿದ್ದ ದಂಪತಿ ಇದೇ ವಿಚಾರಕ್ಕೆ ಪದೇ ಪದೇ ಜಗಳವಾಡುತ್ತಿದ್ದರು. ಬೇಸತ್ತ ಗಂಡ ವೆಂಕಟಸ್ವಾಮಿ ಪತ್ನಿ ಲಕ್ಷ್ಮಮ್ಮನನ್ನು ಮಚ್ಚಿನಿಂದ ಕೊಚ್ಚಿ ಹತ್ಯೆ ಮಾಡಿ ನಿರ್ಮಾಣ ಹಂತದಲ್ಲಿದ್ದ ಮನೆಯೊಂದಕ್ಕೆ ಹೋಗಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಸ್ಥಳಕ್ಕೆ ವಿಧಿ ವಿಜ್ಞಾನ ಪ್ರಯೋಗಾಲಯದ ಸಿಬ್ಬಂದಿ ಮತ್ತು ಬೆರಳಚ್ಚು ತಜ್ಞರು ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಸರ್ಜಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.