ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೇಷ್ಮೆ ನೂಲಿನ ಬೆಲೆ ಇಳಿಕೆ

ವಿಜಯಪುರ: ಬಿಚ್ಚಾಣಿಕೆದಾರರು, ಕಾರ್ಮಿಕರು ಕಂಗಾಲು
Last Updated 15 ಮಾರ್ಚ್ 2023, 5:08 IST
ಅಕ್ಷರ ಗಾತ್ರ

ವಿಜಯಪುರ (ದೇವನಹಳ್ಳಿ): ರೇಷ್ಮೆ ನೂಲಿನ ಬೆಲೆ ಒಂದು ಕೆ.ಜಿ.ಗೆ ₹ 1 ಸಾವಿರ ಕುಸಿತವಾಗಿದೆ. ಇದರಿಂದ ನೂಲು ಬಿಚ್ಚಾಣಿಕೆ ಉದ್ಯಮದಿಂದ ಬದುಕು ರೂಪಿಸಿಕೊಂಡಿರುವ ಸಾವಿರಾರು ಕುಟುಂಬಗಳು ಹಾಗೂ ಕಾರ್ಮಿಕರು ಸಂಕಷ್ಟಕ್ಕೆ ಸಿಲುಕುವಂತಾಗಿದೆ.

ಇತ್ತೀಚೆಗೆ ರೇಷ್ಮೆಹುಳು ಸಾಕಾಣಿಕೆ ಬೆಳೆಗಳು ಸರಿಯಾಗಿ ಆಗುತ್ತಿಲ್ಲ. ಒಂಬತ್ತು ದಿನಗಳಾದರೂ ಹುಳುಗಳು ಹಣ್ಣಾಗುತ್ತಿಲ್ಲ. ಮಾರುಕಟ್ಟೆಗೆ ಬರುವ ಗೂಡಿನ ಆವಕದ ಪ್ರಮಾಣವೂ ಕಡಿಮೆಯಾಗುತ್ತಿದೆ. ರೀಲರ್‌ಗಳ ಬೇಡಿಕೆಗೆ ಅನುಗುಣವಾಗಿ ಗೂಡು ಸಿಗುತ್ತಿಲ್ಲ. ಇದರಿಂದ ನೂಲು ಬಿಚ್ಚಾಣಿಕೆ ಘಟಕಗಳಲ್ಲಿ ಕೆಲಸ ಮಾಡುತ್ತಿರುವ ಕಾರ್ಮಿಕರಿಗೂ ಕೆಲಸ ಕೊಡಲು ಸಾಧ್ಯವಾಗುತ್ತಿಲ್ಲ. ಇಲ್ಲಿನ ಮಾರುಕಟ್ಟೆಗೆ 100 ಲಾಟು ಬರುತ್ತಿದ್ದ ರೇಷ್ಮೆ ಗೂಡು 45 ಲಾಟುಗಳಿಗೆ ಕುಸಿದಿದೆ ಎಂದು ನೂಲು ಬಿಚ್ಚಾಣಿಕೆದಾರ ಜಮೀರ್ ಹೇಳಿದರು.

ಪಟ್ಟಣದಲ್ಲಿ 200ಕ್ಕೂ ಹೆಚ್ಚು ಮಂದಿ ನೂಲು ಬಿಚ್ಚಾಣಿಕೆದಾರರಿದ್ದಾರೆ. 300ಕ್ಕೂ ಹೆಚ್ಚು ಘಟಕಗಳಿವೆ. ರೇಷ್ಮೆಗೂಡು ಮಾರುಕಟ್ಟೆಯಲ್ಲಿ ಗೂಡು ಖರೀದಿ ಮಾಡಿಕೊಂಡು ನೂಲು ಬಿಚ್ಚಾಣಿಕೆ ಮಾಡಿಕೊಳ್ಳುತ್ತಿದ್ದೇವೆ. ಬಿಚ್ಚಾಣಿಕೆಯಾದ ನೂಲನ್ನು ಬೆಂಗಳೂರಿನಲ್ಲಿ ಮಾರಾಟ ಮಾಡುತ್ತಿದ್ದೇವೆ ಎನ್ನುತ್ತಾರೆ ಅವರು.

ಆದರೆ, ವ್ಯಾಪಾರಿಗಳು ಹಣದ ಕೊರತೆ ತೋರಿಸಿ ರೇಷ್ಮೆ ನೂಲಿಗೆ ಸೂಕ್ತ ಬೆಲೆ ಕೊಡುತ್ತಿಲ್ಲ. ಈ ಕಾರಣದಿಂದ ವ್ಯಾಪಾರಸ್ಥರು ಅವರಿಗೆ ಇಷ್ಟ ಬಂದಂತೆ ರೇಷ್ಮೆ ಬೆಲೆ ನಿಗದಿಪಡಿಸುತ್ತಿದ್ದಾರೆ. ನಾವು ನೂಲು ಬಿಚ್ಚಾಣಿಕೆ ಮಾಡಿದ ನಂತರ ಮನೆಗಳಲ್ಲಿ ಉಳಿಸಿಕೊಳ್ಳುವಂತಿಲ್ಲ. ಮಾರುಕಟ್ಟೆಯಲ್ಲಿ ಮಾರಾಟ ಮಾಡಿಕೊಂಡು ಬಂದು ಪುನಃ ಮಾರುಕಟ್ಟೆಯಲ್ಲಿ ಗೂಡು ಖರೀದಿ ಮಾಡಿಕೊಳ್ಳಬೇಕು. ಮಾರುಕಟ್ಟೆಯ ಉಪ ನಿರ್ದೇಶಕರ ಖಾತೆಗೆ ಹಣ ಜಮೆ ಮಾಡದಿದ್ದರೆ ಹರಾಜಿನಲ್ಲಿ ಭಾಗವಹಿಸಲು ಅವಕಾಶ ಸಿಗುವುದಿಲ್ಲ ಎಂದು ಹೇಳಿದರು.

ನೂಲು ಬಿಚ್ಚಾಣಿಕೆದಾರ ಜಬೀ ಉಲ್ಲಾ ಮಾತನಾಡಿ, ‘ನಾವು ಮಾರುಕಟ್ಟೆಯಲ್ಲಿ ಗೂಡು ಖರೀದಿ ಮಾಡಿಕೊಂಡು ಹೋದ ದಿನವೇ ನೂಲು ಬಿಚ್ಚಾಣಿಕೆ ಮಾಡಲು ಸಾಧ್ಯವಾಗುವುದಿಲ್ಲ. ಐದು ದಿನಗಳು ಬೇಕಾಗುತ್ತದೆ. ಅಷ್ಟೊತ್ತಿಗಾಗಲೇ ಮಾರುಕಟ್ಟೆಯಲ್ಲಿ ನೂಲಿನ ಬೆಲೆಯಲ್ಲಿ ಏರುಪೇರಾದರೆ ನಮಗೆ ಲಕ್ಷಾಂತರ ರೂಪಾಯಿ ನಷ್ಟವಾಗುತ್ತದೆ’ ಎಂದು ಅಳಲು ತೋಡಿಕೊಂಡರು.

ಕೆಲವು ದಿನಗಳ ಹಿಂದೆ ರೇಷ್ಮೆ ನೂಲಿನ ಧಾರಣೆ ₹ 5,300 ಇತ್ತು. ಈಗ ಬೆಲೆ ದಿಢೀರ್ ಕುಸಿದಿದೆ. 6 ಎಳೆಯ ಒಂದು ಕೆ.ಜಿ.ಗೆ ₹ 4,150, 8 ಎಳೆಯ ರೇಷ್ಮೆಗೆ 3,850, 10 ಎಳೆಯ ರೇಷ್ಮೆಗೆ ₹ 3,700, 15 ಎಳೆಯ ರೇಷ್ಮೆಗೆ ₹ 3,500ಕ್ಕೆ ಮಾರಾಟವಾಗುತ್ತಿದೆ. ರೇಷ್ಮೆ ನೂಲು ದರ ಕಡಿಮೆಯಾಗಿರುವ ಕಾರಣ ಮಾರುಕಟ್ಟೆಯಲ್ಲಿ ಗೂಡಿನ ಬೆಲೆಯೂ ಕಡಿಮೆಯಾಗುತ್ತಿದೆ ಎಂದು ವಿವರಿಸಿದರು.

ಒಂದು ಟಿಲ್ಲರ್ ಲೋಡ್‌ ನೀರಿನ ಬೆಲೆ ₹ 400 ಇದೆ. ಒಂದು ಟೌನ್ ಸೌದೆ ಬೆಲೆ ₹ 4,500 ಇದೆ. ಒಂದು ಟೇಬಲ್‌ಗೆ 3 ಕಾರ್ಮಿಕರಿರುತ್ತಾರೆ. ಒಂದು ಗಾಣಿಗೆ(8 ಕೆ.ಜಿ. ಗೂಡು)ಗೆ ₹ 75 ಕೊಡಬೇಕು. ಮೊದಲೆಲ್ಲಾ 5 ರಿಂದ 6 ಗಾಣಿ ಗೂಡು ಬಿಚ್ಚಾಣಿಕೆ ಮಾಡುತ್ತಿದ್ದರು. ಆದರೆ, ಅವರಿಗೆ ಕೆಲಸ ಕೊಡಲು ಗೂಡಿಲ್ಲದಂತಾಗಿದೆ. ಸರ್ಕಾರ ನಮಗೆ ದುಡಿಮೆ ಬಂಡವಾಳ ಕೊಡಬೇಕು ಎಂದು ಒತ್ತಾಯಿಸಿದರು.

ಸರ್ಕಾರ ಕರ್ನಾಟಕ ರೇಷ್ಮೆ ಮಾರಾಟ ನಿಗಮದಿಂದ ರೇಷ್ಮೆ ನೂಲು ಖರೀದಿ ಮಾಡಿಕೊಳ್ಳಬೇಕು. ಕನಿಷ್ಠ ₹ 5 ಸಾವಿರಕ್ಕೆ ನಿಗದಿ ಮಾಡಬೇಕು. ಆಗ ವ್ಯಾಪಾರಿಗಳು ಕೂಡ ನಮಗೆ ಉತ್ತಮ ಬೆಲೆ ಕೊಡುತ್ತಾರೆ. ಸರ್ಕಾರ ತಟಸ್ಥವಾದರೆ ನಮಗೆ ಒಳ್ಳೆಯ ಬೆಲೆ ಸಿಗುವುದಿಲ್ಲ ಎಂದು ನೂಲು ಬಿಚ್ಚಾಣಿಕೆದಾರ ಫಜಲುದ್ದೀನ್ ಹೇಳಿದರು.

ಕೆಎಸ್‌ಎಂಬಿಯಿಂದ ಖರೀದಿ ಮಾಡುವಂತೆ ಸೂಚನೆ ನೀಡಿರುವು ದರಿಂದ ಮಂಗಳವಾರ ಮಾರುಕಟ್ಟೆಯಲ್ಲಿ ಗೂಡಿನ ಬೆಲೆಯನ್ನು ಒಂದು ಕೆ.ಜಿ.ಗೆ ₹ 30ಕ್ಕೆ ಏರಿಕೆ ಮಾಡಿ ಖರೀದಿ ಮಾಡಿದ್ದೇವೆ. ಆದ್ದರಿಂದ ಸರ್ಕಾರ ರೈತರ ಗೂಡಿಗೆ ಕನಿಷ್ಠ ₹ 20 ಪ್ರೋತ್ಸಾಹಧನ ನೀಡಬೇಕು. ಮಂಡಿಗಳನ್ನು ರದ್ದುಗೊಳಿಸಿದರೆ ಮಾರುಕಟ್ಟೆಗೆ ಗೂಡು ಬರುತ್ತದೆ. ನಾವು ಕೂಡ ಎಲ್ಲಾ ಕಾರ್ಮಿಕರಿಗೆ ಕೆಲಸ ಕೊಡಬಹುದಾಗಿದೆ ಎಂದು ಅಭಿಪ್ರಾಯಪಟ್ಟರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT